ಹಠಕ್ಕೆ ಬಿದ್ದು ಕಾಯ್ದೆ ತರುವುದು ಬೇಡ - ಜೆಡಿಎಸ್ ನಾಯಕ ವೈ.ಎಸ್.ವಿ ದತ್ತಾ
ಹೊರಟ್ಟಿಯವರನ್ನ ಜೆಡಿಎಸ್ ಎಂದು ನೋಡಬಾರದು. ಪಕ್ಷಾತೀತವಾಗಿ ಬೆಂಬಲಿಸಬೇಕು. ಕಾಂಗ್ರೆಸ್, ಬಿಜೆಪಿ ಎಲ್ಲರೂ ಬೆಂಬಲಿಸಬೇಕು

ಬೆಂಗಳೂರು: ಈ ವಿಚಾರದಲ್ಲಿ ಜೆಡಿಎಸ್ ನಿಲುವು ಸ್ಪಷ್ಟವಾಗಿದೆ. ದೇವೇಗೌಡರು ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ನಾವು ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಿದ್ದೇವೆ ಅಷ್ಟೇ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತಾ ಅವರು ಹೇಳಿದ್ದಾರೆ.
ಮೇಲ್ಮನೆಯಲ್ಲಿ ಗೋಹತ್ಯೆ ನಿಷೇಧ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಯ್ದೆ ಜಾರಿಗೆ ತಂದರೆ ರೈತಾಪಿ ಬದುಕು ಕಷ್ಟ. ಮೊದಲು ಕಾಯ್ದೆಯ ಸಾಧಕ-ಬಾಧಕ ಚರ್ಚೆ ಮಾಡಬೇಕು. ಹಠಕ್ಕೆ ಬಿದ್ದು ಕಾಯ್ದೆ ತರುವುದು ಬೇಡ ಎಂದು ಅವರು ಬಿಜೆಪಿಗೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸಭಾಪತಿ ಚುನಾವಣೆಗೆ ಕಾಂಗ್ರೆಸ್ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೊರಟ್ಟಿಯವರನ್ನ ಜೆಡಿಎಸ್ ಎಂದು ನೋಡಬಾರದು. ಪಕ್ಷಾತೀತವಾಗಿ ಬೆಂಬಲಿಸಬೇಕು. ಕಾಂಗ್ರೆಸ್, ಬಿಜೆಪಿ ಎಲ್ಲರೂ ಬೆಂಬಲಿಸಬೇಕು ಎಂದಿದ್ದಾರೆ.
ಇದು ವಿಶೇಷವಾದ ಪ್ರಕರಣ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಬಿಂಬಿಸಬಾರದು. ಸತತ ಏಳು ಬಾರಿ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಗೆ ಬಂದಿದ್ದಾರೆ. ಅವರೊಬ್ಬ ಹಿರಿಯ ನಾಯಕರು. 3 ಪಕ್ಷಗಳು ನಮ್ಮ ಅಭ್ಯರ್ಥಿ ಎಂದೇ ಭಾವಿಸಿ ಮತ ಹಾಕಬೇಕು. ಇಲ್ಲಿ ಯಾರೂ ಪಕ್ಷ ರಾಜಕಾರಣ ಮಾಡಬಾರದು ಎಂದು ಕಾಂಗ್ರೆಸ್ ವಿರುದ್ಧ ವೈಎಸ್ವೈ ದತ್ತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.