Top

ಸದನದಲ್ಲಿ ಪ್ರತಿಧ್ವನಿಸಿದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

ಕೋರ್ಟ್​​ಗೆ ಹೋದ ಸಚಿವರ ವಿರುದ್ಧ ಪರಮೇಶ್ವರ್ ನಾಯಕ್ ಲೇವಡಿ

ಸದನದಲ್ಲಿ ಪ್ರತಿಧ್ವನಿಸಿದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ
X

ಬೆಂಗಳೂರು: ವಿಧಾನಸಭೆಯಲ್ಲಿ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣ ಸಾಕಷ್ಟು ಸದ್ದುಮಾಡ್ತು. ಇದರ ಜೊತೆ ಕೋರ್ಟ್ ಮೆಟ್ಟಿಲೇರಿದ ಆರು ಸಚಿವರ ವಿಚಾರವೂ ಪ್ರಸ್ತಾಪವಾಯ್ತು. ಈ ಮೂಲಕ ಸರ್ಕಾರದ ತೇಜೋವಧೆ ಮಾಡುವ ಪ್ರಯತ್ನವೂ ನಡೆಯಿತು. ಇನ್ನು ದೂರದ ದೆಹಲಿಸರ್ಕಾರಿ ಶಾಲೆಗಳ ಬಗ್ಗೆಯೂ ಚರ್ಚೆಯಾಯ್ತು.

ಇವತ್ತಿನ ವಿಧಾನಸಭೆ ಕಲಾಪದಲ್ಲಿ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣವೂ ಜೋರಾಗಿಯೇ ಸದ್ದುಮಾಡ್ತು. ಜೆಡಿಎಸ್​ನ ಶಿವಲಿಂಗೇಗೌಡರು ಪರೋಕ್ಷವಾಗಿ ಪ್ರಸ್ತಾಪಿಸಿದ್ರೆ, ಕಾಂಗ್ರೆಸ್​ನ ಈಶ್ವರ್ ಖಂಡ್ರೆ ನೇರವಾಗಿಯೇ ಲೇವಡಿ ಮಾಡಿದರು. ಸಿಡಿ ಬಿಡುಗಡೆಗೆ ತಡೆ ನೀಡುವಂತೆ ಕೋರ್ಟ್​ಗೆ ಹೋದ ಸಚಿವರಿಂದ ಉತ್ತರಪಡೆಯೋಕೆ ಪರಮೇಶ್ವರ್ ನಾಯಕ್ ನಿರಾಕರಿಸಿದ್ದೂ ನಡೆದುಹೋಯ್ತು. ಕಲಾಪದ ಪ್ರಾರಂಭದಲ್ಲೇ ನಗರಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ನ ಪಿ.ಟಿ.ಪರಮೇಶ್ವರ್ ನಾಯಕ್ ಪ್ರಶ್ನೆ ಹಾಕಿದರು. ಅದಕ್ಕೆ ಉತ್ತರವನ್ನೂ ಕೊಡಲಾಗಿತ್ತು. ಆದರೆ, ನಾನು ಪ್ರಶ್ನೆ ಹಾಕಿದ್ದು ನಾರಾಯಣಗೌಡರು ಕೋರ್ಟ್​ಗೆ ಹೋಗುವ ಮೊದಲು. ಆದರೆ, ಅವರು ಕೋರ್ಟ್​ಗೆ ಹೋಗಿರೋದ್ರಿಂದ ಈಗ ಅವರಿಗೆ ಉತ್ತರ ಕೊಡೋಕೆ ನೈತಿಕತೆಯಿಲ್ಲ. ಹಾಗಾಗಿ ನನಗೆ ಅವರ ಉತ್ತರ ಬೇಡ ಅಂತ ಆಕ್ಷೇಪಿಸಿದರು.

ಇನ್ನು ಜೆಡಿಎಸ್​ನ ಶಿವಲಿಂಗೇಗೌಡರು ಬಜೆಟ್ ಮೇಲೆ ಚರ್ಚೆ ಮಾಡುತ್ತಿದರು. ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದ ಬಗ್ಗೆ ಪ್ರಸ್ತಾಪಿಸ್ತಿದರು. ನಾವೂ ಡಿಸಿಗಳ ಜೊತೆ ಹೋಗಿ ಮಲಗುತ್ತೇವೆ ಅಂತ ಹೇಳಿದರು. ಈ ವೇಳೆ ಬಿಜೆಪಿಯ ಮಾಡಾಳು ವಿರೂಪಾಕ್ಷಪ್ಪ ನೀವು ಆಗೆಲ್ಲ ಹೋಗಿ ಮಲಗಬೇಡ್ರಿ, ನಿಮ್ಮ ಸಿಡಿಯನ್ನೂ ಮಾಡಿಬಿಡಬಹುದು ಅಂತ ಕಿಚಾಯಿಸಿದರು. ಇದಕ್ಕೆ ಸಿಟ್ಟಾದ ಶಿವಲಿಂಗೇಗೌಡರು ನೀವು ಸಿಡಿಗೀಡಿ ಅಂತೆಲ್ಲಾ ಯಾಕ್ರೀ ಹೆದರಿಸ್ತೀರಿ ಅಂತ ಗರಂ ಆದ್ರು. ನಂತರ ಈಶ್ವರ್ ಖಂಡ್ರೆ ನೇರವಾಗಿಯೇ ಈ ವಿಚಾರವನ್ನ ಪ್ರಸ್ತಾಪಿಸಿದರು. ಹಾದಿಬೀದಿಯಲ್ಲಿ ಸಿಡಿ ಬಗ್ಗೆಯೇ ಮಾತನಾಡ್ತಿದ್ದಾರೆ. ಕೇಳೋಕೆ ನಮಗೆ ಅಸಹ್ಯವಾಗ್ತಿದೆ. ಶಾಸಕರಿಗೆ ಗೌರವವೇ ಇಲ್ಲದಂತಾಗಿದೆ. ಹೀಗಾಗಿಎಸ್​ಐಟಿ ತನಿಖೆಗೆ ಕೊಟ್ಟರೆ ಸತ್ಯ ಹೊರಬಲ್ಲ. ನ್ಯಾಯಾಂಗ ತನಿಖೆಗೇ ನೀಡ್ಬೇಕು ಅಂತ ಆಗ್ರಹಿಸಿದರು.

ವಿಧಾನಸಭೆ ಕಲಾಪದಲ್ಲಿಂದು ದೆಹಲಿ ಆಮ್ ಆದ್ಮಿ ಪಕ್ಷದ ಸಾಧನೆಯ ಬಗ್ಗೆಯೇ ಹೆಚ್ಚು ಚರ್ಚೆಯಾಯ್ತು. ಪಕ್ಷ ಬೇಧ ಮರೆತು ಎಲ್ಲಾ ಶಾಸಕರು ಅಲ್ಲಿನ ಸರ್ಕಾರಿ ಶಾಲೆಗಳ ಸುಧಾರಣೆ ಬಗ್ಗೆಯೇ ಪ್ರಶಂಸೆ ವ್ಯಕ್ತವಾಯ್ತು. ಖಾಸಗಿ ಶಾಲೆಗಳ ಹೆಚ್ಚು ಫೀಜ್ ವಸೂಲಿ ಬಗ್ಗೆ ಅಸಮಾಧಾನವೂ ವ್ಯಕ್ತವಾಯ್ತು. ದೆಹಲಿ ಮಾದರಿಯಲ್ಲೇ ಸರ್ಕಾರಿ ಶಾಲೆಗಳನ್ನ ಪ್ರಾರಂಭಿಸಿ ಎಂದು ರಮೇಶ್ ಕುಮಾರ್ ಒತ್ತಾಯಿಸಿದ್ರೆ,ಪ್ರತಿಯೊಂದು ಗ್ರಾಮಪಂಚಾಯ್ತಿಗಳಲ್ಲೂ ಪಬ್ಲಿಕ್ ಶಾಲೆಗಳನ್ನ ತೆರೆಯಿರಿ ಅಂತ ಆಗ್ರಹಿಸಿದರು. ದೆಹಲಿ ಶಾಲೆಗಳ ಗುಣಮಟ್ಟದ ಬಗ್ಗೆ ಈಶ್ವರ್ ಖಂಡ್ರೆ ಹಾಡಿ ಹೊಗಳಿದರು. ಅಲ್ಲದೆ ಒಂದು ಕಮಿಟಿಯನ್ನ ರಚನೆ ಮಾಡಿ,ದೆಹಲಿಗೆ ಕಳಿಸಿ ಅಲ್ಲಿನ ಸರ್ಕಾರಿ ಶಾಲೆಗಳ ವ್ಯವಸ್ಥೆಯನ್ನ ಅಧ್ಯಯನ ಮಾಡಿಸಿ ಅಂತ ಸರ್ಕಾರಕ್ಕೆ ಸಲಹೆಯನ್ನೂಕೊಟ್ರು.

ಕೋರ್ಟ್​ಗೆ ಹೋಗಿರುವ ಆರು ಸಚಿವರಿಂದ ಯಾವುದೇ ಉತ್ತರ ಪಡೆಯಬಾರದೆಂದು ಕೈ ನಾಯಕರು ನಿರ್ಧರಿಸಿದ್ದರು. ತಮ್ಮ ಸದಸ್ಯರಿಗೂ ಸೂಚಿಸಿದ್ದರು. ಪಕ್ಷದ ತೀರ್ಮಾನದಂತೆ ಕೌನ್ಸಿಲ್​ನಲ್ಲಿ ಸದಸ್ಯರು ಆರು ಸಚಿವರಿಂದ ಯಾವುದೇ ಉತ್ತರ ಪಡೆಯದೆ ನಿರಾಕರಿಸುತ್ತಿದ್ದಾರೆ. ವಿಧಾನಸಭೆಯಲ್ಲೂ ಅದೇ ರೀತಿ ನಿರಾಕರಿಸಲಾಗ್ತಿತ್ತು. ಆದರೆ, ಇಂದು ತನ್ವೀರ್ ಸೇಠ್ ಮಾತ್ರ ಮೈಸೂರು ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂದಿಸಿದಂತೆ ಉತ್ತರ ಪಡೆದುಕೊಂಡರು. ಈ ಮೂಲಕ ಸಿಎಲ್​ಪಿ ನಾಯಕರಿಗೆ ಮತ್ತೊಮ್ಮೆ ಸೆಡ್ಡುಹೊಡೆದರು. ಪಾಲಿಕೆ ಚುನಾವಣೆಯ ನಂತ್ರ ಸಿದ್ದು ವಿರುದ್ಧ ಪರೋಕ್ಷವಾಗಿ ಸಮರವನ್ನೇ ತನ್ವೀರ್ ಸಾರಿದ್ದಾರೆ. ಹೀಗಾಗಿ ಆ ವರ್ತನೆ ಇಂದೂಮುಂದುವರಿದಿದೆ.

ಸಚಿವರ ಸಿಡಿ ಪ್ರಕರಣ ಕೆಳಮನೆಯಲ್ಲಿ ಭಾರಿ ಸದ್ದುಮಾಡ್ತು. ಬೇಡ ಬೇಡ ಎನ್ನುತ್ತಲೇ ಪರೋಕ್ಷವಾಗಿ ಸದಸ್ಯರು ಪ್ರಸ್ತಾಪಿಸುವ ಮೂಲಕ ಸರ್ಕಾರದ ಕಾಲೆಳೆಯುವ ಪ್ರಯತ್ನ ಮಾಡಿದರು. ಇನ್ನು ದೆಹಲಿ ಶಾಲೆಗಳ ಸುಧಾರಣೆ ಬಗ್ಗೆ ಪಕ್ಷ ಭೇದ ಮರೆತು ಶಾಸಕರು ಪ್ರಶಂಶಿಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಯ್ತು. ಇದರ ನಡುವೆ ಶಾಸಕರ ಅನುದಾನ ತಡೆಯ ಬಗ್ಗೆಯೂ ಗಂಭೀರವಾಗಿ ಚರ್ಚೆಯಾಯ್ತು.

Next Story

RELATED STORIES