Top

ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ

ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ

ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ
X

ಬೆಂಗಳೂರು: ಸಿದ್ದರಾಮಯ್ಯನವರು ಸ್ವತಂತ್ರ ಪಕ್ಷ ಕಟ್ಟಿ, ತಾವೂ ಸೇರಿದಂತೆ 5 ಸ್ಥಾನಗಳನ್ನು ಗೆದ್ದು ತೋರಿಸಿ ಆಮೇಲೆ ಜೆಡಿಎಸ್ ಬಗ್ಗೆ, ಜೆಡಿಎಸ್ ನಾಯಕತ್ವದ ಬಗ್ಗೆ ಮಾತಾಡಬೇಕು ಎಂದು ಸವಾಲು ಹಾಕುತ್ತಲೇ ಬಂದಿದ್ದೇನೆ. ಸವಾಲು ಸ್ವೀಕರಿಸಲಾಗದ ಸಿದ್ದರಾಮಯ್ಯ, ಜೆಡಿಎಸ್ ಅನ್ನು ಟೀಕಿಸುವುದರಲ್ಲೇ ತಮ್ಮ ಶಕ್ತಿಯ ಪರೀಕ್ಷೆ ಮಾಡಿಕೊಳ್ಳುತ್ತಿರುವಂತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವಿಟರ್​ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ‌. ಆದರೆ, ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತೇವೆ ಎಂದೇನಾದರೂ ಹೇಳಿದ್ದಾರಾ(?) ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ ಇತಿಹಾಸ ಇರುವುದು ಜೆಡಿಎಸ್​ಗಲ್ಲ, ತಮಗೆ(?) 2008ರಲ್ಲಿ ನಡೆದ ಆಪರೇಷನ್ ಕಮಲದ ಉಪಚುನಾವಣೆಗಳಲ್ಲಿ ನೀವು ಮಾಡಿದ ಕುತಂತ್ರಗಳನ್ನು ನೆನಪಿಸಲೇ(?) ಎಂದು ಪ್ರಶ್ನೆ ಮಾಡಿದ್ದಾರೆ.

ಜೆಡಿಎಸ್ ಕಣದಿಂದ ಹಿಂದೆ ಸರಿಯುವುದನ್ನು ಗೇಲಿ ಮಾಡುವ ಮುನ್ನ ಸಿದ್ದರಾಮಯ್ಯರಿಗೆ ಗುಂಡ್ಲುಪೇಟೆ, ನಂಜನಗೂಡು ನೆನಪಾಗಬೇಕಿತ್ತು(?) ಅಂದು ದೇವೇಗೌಡರು ಜಾತ್ಯತೀತ ನಿಲುವಿಗೆ ಕಟ್ಟುಬಿದ್ದು ಕಾಂಗ್ರೆಸ್ ಬೆಂಬಲಿಸಿದ್ದರು. ಆ ಕ್ಷೇತ್ರಗಳಲ್ಲಿ ಜೆಡಿಎಸ್​​ಗೆ ಸಾಕಷ್ಟು ಬಲವಿತ್ತು. ನಂಜನಗೂಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಜೆಡಿಎಸ್​ನವರಾಗಿದ್ದರು ಎಂದಿದ್ದಾರೆ.

ಉಪಚುನಾವಣೆಗಳು ಅಧಿಕಾರಸ್ಥರ, ದುಡ್ಡಿರುವವರ ಚುನಾವಣೆಗಳು. ಈ ಚುನಾವಣೆಗಳು ನಡೆಯುವ ರೀತಿಯೇ ಬೇರೆ. ಪ್ರತಿಷ್ಠೆಯ ಈ ಹೋರಾಟದಲ್ಲಿ ಸ್ಪರ್ಧಿಸದೇ ಇರುವ ಪಕ್ಷವೊಂದರ ನಿಲುವನ್ನು ಟೀಕಿಸುವ ಮುನ್ನ ಯಾರೇ ಆದರೂ ಯೋಚಿಸಬೇಕು. ಇಲ್ಲವಾದರೆ ಟೀಕೆಯೇ ಅವರಿಗೆ ಮುಳುವಾಗುತ್ತದೆ‌. ಸಿದ್ದರಾಮಯ್ಯ ಉಡಾಫೆ ಮಾತುಗಳನ್ನು ಬಿಟ್ಟು ಪ್ರಬುದ್ಧರಾಗಿ ಮಾತಾಡಲಿ ಎಂದು ಹೇಳಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್​ಗೆ ಇರುವ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶನಕ್ಕೆ ಇನ್ನೂ ಸಮಯವಿದೆ. ವೇದಿಕೆಯೂ ಸಿಗಲಿದೆ. ಆಗ ಸಿದ್ದರಾಮಯ್ಯನವರು ನಮ್ಮ ಜೊತೆ ಚರ್ಚೆಗೆ, ಸೆಣಸಾಟಕ್ಕೆ ಬರಲಿ. ಒಂದು ವೇಳೆ ಅವರೇ ಒಂದು ಪಕ್ಷವನ್ನೇನಾದರೂ ಕಟ್ಟಿದರೆ ಅದಕ್ಕೂ ಜೆಡಿಎಸ್​ನ ಸಾಮರ್ಥ್ಯ ತೋರಿಸುವ ಕೆಲಸ ಮಾಡೋಣವಂತೆ‌. ಅಲ್ಲಿಯವರೆಗೆ ಅವರು ತಾಳಲಿ ಎಂದಿದ್ದಾರೆ.

ಜೆಡಿಎಸ್​ನಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿ, ಹೊರಬಿದ್ದ ಮೇಲೆ ಸಿದ್ದರಾಮಯ್ಯ‌ನವರಿಗೆ ಜೆಡಿಎಸ್ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಜೆಡಿಎಸ್​ಗೆ ಶಕ್ತಿ ಎಲ್ಲಿದೆ ಎಂಬ ಅವರ ಹೇಳಿಕೆಗಳು, ಜೆಡಿಎಸ್​ಗೆ ಅವರು ಬಗೆದ ದ್ರೋಹದ ಪ್ರತೀಕ. ನಮ್ಮ ಬಗ್ಗೆ ಮಾತಾಡುವ ಅಧಿಕಾರ ಅವರಿಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES