ದೇಶದಲ್ಲಿ ಕೋವಿಡ್ 19 ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಕೊರೊನಾಗೆ ಎರಡು ಲಸಿಕೆಗಳು ಬಹಳ ಮುಖ್ಯ ಎಂದು ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ.

ನವದೆಹಲಿ: 136 ಕೋಟಿ ಭಾರತೀಯರು ತಾಳ್ಮೆಯಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ದೇಶವ್ಯಾಪಿ ಕೋವಿಡ್ 19 ಲಸಿಕೆ ಅಭಿಯಾನಕ್ಕೆ ಆನ್ಲೈನ್ ಮೂಲಕ ಚಾಲನೆ ನೀಡಿದ್ದಾರೆ.
ಫಸ್ಟ್ ಡೇ ದೇಶದ 3 ಸಾವಿರಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತಿದ್ದು, ಭಾರತದಲ್ಲಿ ತಯಾರಿಸಿದ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆ ಹಾಗೂ ಭಾರತದ ಬಯೋಟೆಕ್ ದೇಶದ ಉನ್ನತ ಕ್ಲಿನಿಕಲ್ ಸಂಶೋಧನಾ ಸಂಸ್ಥೆಯೊಂದಿಗೆ ಸೇರಿ ತಯಾರಿಸಿದ ಲಸಿಕೆಯನ್ನು ಅಭಿಯಾನದಲ್ಲಿ ಬಳಕೆ ಮಾಡಲಾಗುತ್ತಿದೆ.
ಲಸಿಕೆ ಚಾಲನೆ ನೀಡಿದ ಬಳಿಕ ಮೋದಿಯವರು ಜನಸಾಮಾನ್ಯರು ಲಸಿಕೆ ಪಡೆಯಲು ಕಡ್ಡಾಯವಾಗಿರುವ ಕೋ-ವಿನ್ ಆ್ಯಪ್ಗೂ ಚಾಲನೆ ನೀಡಿದ್ದಾರೆ.
ಈ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ದೇಶನಿವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ವಿಶ್ವವೇ ಇಂದು ಭಾರತದ ಕಡೆ ತಿರುಗಿ ನೋಡುತ್ತಿದೆ. ಲಸಿಕೆ ಯಾವಾಗ ದೊರೆಯುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ಅದು ದೊರೆತಿದೆ. ಈ ವೇಳೆಯಲ್ಲಿ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದಿದ್ದಾರೆ.
ಸಾಮಾನ್ಯವಾಗಿ ಲಸಿಕೆ ಕಂಡು ಹಿಡಿಯಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಆದರೆ, ಕೆಲವೇ ಅಲ್ಪಾಧಿಯಲ್ಲಿ ಒಂದಲ್ಲಾ ಎರಡು ದೇಶಿ ನಿರ್ಮಿತ ಲಸಿಕೆಗಳು ತಯಾರಾಗಿವೆ. ಜೊತೆಗೆ ಇತರೆ ಲಸಿಕೆಗಳ ಅಭಿವೃದ್ಧಿ ಕೂಡ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾಗೆ ಎರಡು ಲಸಿಕೆಗಳು ಬಹಳ ಮುಖ್ಯ ಎಂದು ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ. ಈ ಎರಡೂ ವ್ಯಾಕ್ಸಿನೇಷನ್ಗಳ ನಡುವೆ 30 ದಿನಗಳ ಅಂತರವಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದ್ದಾರೆ.