Top

ಕೇಂದ್ರದ ಬಜೆಟ್​ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

ಅಂಬಾನಿ, ಅದಾನಿ, ನಿರವ್ ಮೋದಿಗೆ ಉಪಯೋಗ ಮಾಡಿಕೊಡುತ್ತಿದ್ದಾರೆ

ಕೇಂದ್ರದ ಬಜೆಟ್​ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ
X

ಬೆಂಗಳೂರು: ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. 2020/21ರ ಆರ್ಥಿಕ ವರ್ಷದ ಬಜೆಟ್ ಮಂಡಿಸಿದ್ದಾರೆ. ನಿನ್ನೆ ನಮಗೆ ಮಾಧ್ಯಮದವರು ಪ್ರಶ್ನೆ ಕೇಳಿದ್ದರು. ಆಗ ನಾನು ಬಜೆಟ್ ಬಗ್ಗೆ ಯಾವ ನಿರೀಕ್ಷೆ ಇಲ್ಲ ಎಂದಿದ್ದೆ. ನಾನು ಹೇಳಿದ ಮಾತು ಸತ್ಯವಾಗಿದೆ. ಅದರಂತೆಯೇ ಇಂದು ಬಜೆಟ್ ಮಂಡಿಸಿದ್ದಾರೆ ಎಂದು ಪತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಬಜೆಟ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆತ್ಮನಿರ್ಭರದ ಮೂರು ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ, ಆತ್ಮನಿರ್ಭರ ಬಜೆಟ್ ಕೊಟ್ಟಿದ್ದಾರೆ. ಇದೊಂದು ರೀತಿ ಆತ್ಮ ಬರ್ಬಾದ್ ಅಂದರೆ ನಾಶ ಎಂಬುದಾಗಿದೆ ಎಂದು ಬಜೆಟ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋವಿಡ್​ನಿಂದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿತ್ತು ಅದನ್ನ ಚೇತರಿಕೆ ಮಾಡುತ್ತಾರೆಂದು ಕೊಂಡಿದ್ದೆವು. ಅಂತಹ ಯಾವ ನಿರೀಕ್ಷೆಯೂ ಈಡೇರಿಸಿಲ್ಲ, ಸಣ್ಣ, ಮಧ್ಯಮ ಕೈಗಾರಿಕಾ ಪುನಶ್ಚೇತನವೂ ಇಲ್ಲ, ಆರ್ಥಿಕ ತಜ್ಙರು ಕೊಟ್ಟ ಸಲಹೆ ಗಾಳಿಗೆ ತೂರಿದ್ದಾರೆ. ಈ ಬಾರಿ ಕೃಷಿ ಸೆಸ್ ಅಂತ ಹೊಸದಾಗಿ ಮಾಡಿದ್ದಾರೆ. 2.5 ಇದ್ದದ್ದನ್ನ 3.5 ವರೆಗೆ ಹಾಕಿದ್ದಾರೆ. ದೇಶಕ್ಕೆ ಬರುವ ಆಮದು ಡ್ಯೂಟಿ ಕಡಿಮೆ ಮಾಡಿದ್ದಾರೆ. ಕೃಷಿ ಸೆಸ್ ಎಲ್ಲರ ಮೇಲೆ ಹೇರಿದ್ದಾರೆ. ಕೃಷಿ ಉತ್ತೇಜನಕ್ಕೆ ಅಂತ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಹೇಳಿದರು.

ರೈತರಿಗೆ ಫ್ರೀ ಆಗಿ ಸಾಲ ಕೊಡಬಹುದಿತ್ತು. 15 ಲಕ್ಷ ಕೋಟಿ ಸಾಲ ಕೊಡಬಹುದಿತ್ತು. ರೈತರ ಸಾಲಮನ್ನಾಕ್ಕೆ ಕ್ರಮ ತೆಗೆದುಕೊಳ್ಳಬಹುದಿತ್ತು. ಮನಮೋಹನ್ ಸಿಂಗ್ 72 ಸಾವಿರ ಕೋಟಿ ಮನ್ನಾ ಮಾಡಿದ್ದರು. ಇವರು ಒಂದೇ ಒಂದು ರೂ. ಸಾಲಮನ್ನಾ ಮಾಡಿಲ್ಲ, ಈ ಕೃಷಿ ಸೆಸ್ ವಸೂಲಿ ಮಾಡ್ತಾರೆ. ರೈತರ ಕಲ್ಯಾಣಕ್ಕೆ ಕಾರ್ಯಕ್ರಮ ಏಕೆ ಕೊಡಲಿಲ್ಲ, ಬೆಲೆ ಬಿದ್ದುಹೋದಾಗ ನ್ಯಾಯಯುತ ಬೆಲೆ ಸಿಗುವಂತೆ ಮಾಡಬಹುದಿತ್ತು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ವಿದ್ಯುತ್ ಕ್ಷೇತ್ರ ಖಾಸಗಿಕರಣ ಮಾಡಿದ್ದಾರೆ. ವಿಮಾ ಕ್ಷೇತ್ರದಲ್ಲೂ ಖಾಸಗಿಕರಣಕ್ಕೆ ಕೊಟ್ಟಿದ್ದಾರೆ. ಖಾಸಗಿಯವರು ಕಡಿಮೆ ರೇಟಿಗೆ ವಿದ್ಯುತ್ ಕೊಡ್ತಾರಾ(?) ಇದರಿಂದ ದರಗಳು ಹೆಚ್ಚಾಗುತ್ತದೆ. ಸಾಮಾನ್ಯ ಜನರ ವಿದ್ಯುತ್ ಬಳಕೆದರವೂ ಹೆಚ್ಚುತ್ತೆ ಎಂದಿದ್ದಾರೆ.

ಕೋವಿಡ್ ಸಂಕಷ್ಟದಲ್ಲಿದ್ದವರಿಗೆ ರಿಲೀಫ್ ಸಿಕ್ಕಿಲ್ಲ, ಈ ಬಜೆಟ್ ನಲ್ಲಿ ಅಂತವರಿಗೆ ರಿಲೀಫ್ ಸಿಕ್ಕಿಲ್ಲ, ಎಲ್ಲೆಲ್ಲಿ ಎಲೆಕ್ಷನ್ ನಡೆಯುತ್ತೆ ಅಲ್ಲಿಗೆ ಹಣ ಕೊಟ್ಟಿದ್ದಾರೆ. ತಮಿಳುನಾಡಿಗೆ 5.35 ಸಾವಿರ ಕೋಟಿ ಕೊಟ್ಟಿದ್ದಾರೆ. ಕರ್ನಾಟಕಕ್ಕೆ 14,786 ಕೋಟಿ ನೀಡಿದ್ದಾರೆ. 5 ಸಾವಿರ ಎಲ್ಲಿ, 14 ಸಾವಿರ ಕೋಟಿ ಎಲ್ಲಿ(?) ತಮಿಳುನಾಡಿಗೊಂದು, ಕರ್ನಾಟಕಕ್ಕೆ ಒಂದು ನ್ಯಾಯವೇ(?) ಪ್ರತಿವರ್ಷ ಚುನಾವಣೆ ಮಾಡಿದ್ರೆ ನಮಗೂ ದುಡ್ಡುಕೊಡಬಹುದು ಅನ್ನಿಸುತ್ತೆ ಎಂದು ಸಿದ್ದರಾಮಯ್ಯ ಬಜೆಟ್​ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮೋದಿ ಬಂದ ಮೇಲೆ ಜಿಡಿಪಿ ಇಳಿಯುತ್ತಲೇ ಇದೆ. ಮನಮೋಹನ್ ಸಿಂಗ್ ಇದ್ದಾಗ ಮಾತ್ರ ಏರಿಕೆಯಿತ್ತು. ಎಕಾನಾಮಿಕ್ ಸರ್ವೆ ಪ್ರಕಾರ 4.2 ಜಿಡಿಪಿ ಗ್ರೋಥ್, ಮನಮೋಹನ್ ಸಿಂಗ್ ಕಾಲದಲ್ಲಿ 9/10 ರಷ್ಟಿತ್ತು. ನಗರದಲ್ಲಿ ಉದ್ಯೋಗ 9.5ರಷ್ಟು ಕೊರತೆಯಿದೆ. ಉದ್ಯೋಗವಿಲ್ಲದೆ ಪಕೋಡ ಮಾರಬೇಕಿದೆ. ಈ ವರ್ಷದ ಜಿಡಿಪಿ ಗ್ರೋಥ್- ಶೇ. 7.7ರಷ್ಟು ಇದನ್ನೂ ಸುಳ್ಳು ಹೇಳುತ್ತಿದ್ದಾರೆ. ಎಂತಹ ಸುಳ್ಳನ್ನ ಹೇಳುತ್ತಿದ್ದಾರೆ ಇವರು. 19/20ಕ್ಕೆ 30,042 ಕೋಟಿ ಬಜೆಟ್ ಇತ್ತು. ಈಗ ಬಜೆಟ್ ಗಾತ್ರವೂ ಹೆಚ್ಚಾಗಿದೆ. ಜಿಡಿಪಿ 23.9 ಡಿಕ್ಲೇರ್ ಆಗಿದೆ, ಸಾಲ ಹೆಚ್ಚಾಗಿದೆ. ಸಾಲ ಹೆಚ್ಚಾದರೆ ವಿತ್ತೀಯ ಕೊರತೆಯೂ ಹೆಚ್ಚಾಗಲಿದೆ. ಹಾಗಾಗಿ ಇದು ಬರ್ಬಾದ್ ಬಜೆಟ್ ಆಗಿದೆ ಎಂದು ಬಜೆಟ್​ಅನ್ನು ಲೇವಡಿ ಮಾಡಿದ್ದಾರೆ.

ಶಾಂತಕುಮಾರ್ ವರದಿ ಇಂಪ್ಲಿಮೆಂಟ್ ಮಾಡಿದರೆ ಕಷ್ಟ. ಜನಸಾಮಾನ್ಯರಿಗೆ ತೀವ್ರ ತೊಂದರೆ ಆಗಲಿದೆ. ಎಸ್​ಸಿ, ಎಸ್​ಟಿಗೆ ಯಾವ ಕಾರ್ಯಕ್ರಮವೂ ಇಲ್ಲ, ಸರ್ಕಾರ ನಡೆಸೋಕೆ ಯೋಗ್ಯತೆಯೇ ಇಲ್ಲ, ಪಬ್ಲಿಕ್ ಸೆಕ್ಟರ್​ಗೆ ಹಣ ಹೂಡಿಕೆ ಮಾಡೋದು ಯಾಕೆ(?) ಜನಸಾಮಾನ್ಯರಿಗೆ ಉಪಯೋಗವಾಗಲಿದೆ ಎಂದು ಅಂದಾನಿ, ಅಂಬಾನಿಗೆ ಅವಕಾಶ ಕೊಟ್ಟಿದ್ದಾರೆ. ಮೀಸಲಾತಿಯನ್ನೇ ತೆಗೆದು ಹಾಕೋಕೆ ಈ ಪ್ರಯತ್ನ ಮಾಡುತ್ತಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಕೊಡ್ತಾರಾ(?) ಮೀಸಲಾತಿಯನ್ನೇ ಹಂತ-ಹಂತವಾಗಿ ತೆಗೆದು ಹಾಕ್ತಾರೆ. ಬಡವರನ್ನ ಮತ್ತಷ್ಟು ಬಡವರನ್ನ ಮಾಡ್ತಾರೆ. ರೈತರಿಗೆ ತೊಂದರೆ ಕೊಡೋದಕ್ಕೇ ಅದನ್ನ ಮಾಡುತ್ತಿದ್ದಾರೆ. ಅಂಬಾನಿ, ಅದಾನಿ, ನಿರವ್ ಮೋದಿಗೆ ಉಪಯೋಗ ಮಾಡಿಕೊಡುತ್ತಿದ್ದಾರೆ. ಅಚ್ಛೇದಿನ್ ಯಾರಿಗೆ ಬರುತ್ತೆ, ಅದಾನಿ, ಅಂಬಾನಿಗೆ ಮಾತ್ರ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

Next Story

RELATED STORIES