ಪ್ರಭಾಸ್ ನಟಿಸುತ್ತಿರುವ ಸಲಾರ್ ಸಿನಿಮಾ ರಿಮೇಕ್ ಅಲ್ಲ - ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟನೆ
‘ಸಲಾರ್’ ಸಿನಿಮಾ ಉಗ್ರಂ ಸಿನಿಮಾದ ರೀಮೇಕ್ ಅಲ್ಲ. ಅದುವಲ್ಲದೇ, ಯಾವ ಬಾಲಿವುಡ್ ಸಿನಿಮಾದ ರೀಮೇಕ್ ಸಹ ಅಲ್ಲ’

ಬೆಂಗಳೂರು: ಬಾಹುಬಲಿ ಖ್ಯಾತಿಯ ಪ್ರಭಾಸ್ ನಟಿಸಿ ಕೆಜಿಎಫ್ ಚಿತ್ರದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಆದರೆ ಈ ಮಧ್ಯೆ ಈ ಹೊಸ ಚಿತ್ರದಲ್ಲಿ ಪ್ರಶಾಂತ್ ನೀಲ್ ಅವರ ತಮ್ಮ ಮೊದಲ ನಿರ್ದೇಶನದ ಸಿನಿಮಾ 'ಉಗ್ರಂ'ನ ರೀಮೇಕ್ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ನೀಲ್ ಕನ್ನಡದಲ್ಲಿ ನಿರ್ದೇಶಿಸಿದ ಮೊದಲ ಕನ್ನಡ ಸಿನಿಮಾ 'ಉಗ್ರಂ' ಈ ಚಿತ್ರದಲ್ಲಿ ಶ್ರೀಮುರಳಿ ನಟಿಸಿದ್ದರು. ಉಗ್ರಂ ಸೂಪರ್ ಡೂಪರ್ ಹಿಟ್ ಆಗಿತ್ತು. ಅದೇ ಸಿನಿಮಾವನ್ನು 'ಸಲಾರ್' ಹೆಸರಲ್ಲಿ ತೆಲುಗಿಗೆ ರೀಮೇಕ್ ಮಾಡಲಾಗುತ್ತಿದೆ ಎಂಬ ಸುದ್ದಿಗಳು ತೆಲುಗು ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಈ ವಿಚಾರದ ಬಗ್ಗೆ ತೆಲುಗು ಮಾಧ್ಯಮದೊಟ್ಟಿಗೆ ಮಾತನಾಡಿರುವ ಪ್ರಶಾಂತ್ ನೀಲ್ ಅವರು, 'ಪ್ರಭಾಸ್ಗಾಗಿ ನಿರ್ದೇಶನ ಮಾಡಲಾಗುತ್ತಿರುವ 'ಸಲಾರ್' ಸಿನಿಮಾ ಉಗ್ರಂ ಸಿನಿಮಾದ ರೀಮೇಕ್ ಅಲ್ಲ. ಅದುವಲ್ಲದೇ, ಯಾವ ಬಾಲಿವುಡ್ ಸಿನಿಮಾದ ರೀಮೇಕ್ ಸಹ ಅಲ್ಲ' ಎಂದು ಗಾಸಿಪ್ಗೆ ತೆರೆಎಳೆದಿದ್ದಾರೆ.
ಇನ್ನು 'ಸಲಾರ್' ಚಿತ್ರದ ಕಥೆ ನಟ ಪ್ರಭಾಸ್ಗಾಗಿಯೆಂದೇ ಸಿದ್ಧಪಡಿಸಲಾಗಿದೆ. ಒರಿಜಿನಲ್ ಐಡಿಯಾವೊಂದನ್ನು ಪ್ರಭಾಸ್ಗೆ ತಕ್ಕಂತೆ ಚಿತ್ರಕಥೆ ಆಗಿ ರೂಪಿಸಿ ಇದೀಗ ಸಿನಿಮಾ ರೆಡಿಯಾಗುತ್ತಿದೆ' ಎಂದಿದ್ದಾರೆ.
ಸದ್ಯ 'ಸಲಾರ್' ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭಗೊಂಡಿದ್ದು, ಗೋಧಾವರಿ ಗಣಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್ ಸೆಟ್ನ ಕೆಲವು ಚಿತ್ರಗಳು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
'ಸಲಾರ್' ಸಿನಿಮಾದಲ್ಲಿ ಪ್ರಭಾಸ್ಗೆ ನಾಯಕಿ ಆಗಿ ಶ್ರುತಿ ಹಾಸನ್ ನಟಿಸುತ್ತಿದ್ದು, ಈ ಚಿತ್ರವನ್ನು ಹೊಂಬಾಳೆ ಫಿಲಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸುತ್ತಿದ್ದಾರೆ.