Top

ಬುರ್ಜ್​​​ ಖಲೀಫಾದಲ್ಲಿ ರಾರಾಜಿಸಿದ ಕನ್ನಡದ ಬಾವುಟ

ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ವಿಕ್ರಾಂತ್​ ರೋಣನ ವೈಭವ..!

ಬುರ್ಜ್​​​ ಖಲೀಫಾದಲ್ಲಿ ರಾರಾಜಿಸಿದ ಕನ್ನಡದ ಬಾವುಟ
X

ಸ್ಯಾಂಡಲ್​​ವುಡ್​ನ ಅದ್ಬುತ ಕ್ಷಣಕ್ಕೆ ಸಾಕ್ಷಿಯಾಯ್ತು ದುಬೈ. ಬುರ್ಜ್​ ಖಲೀಫಾದಲ್ಲಿ ಪಸರಿಸಿತು ಕನ್ನಡದ ಕಂಪು. ಮುಗಿಲೆತ್ತರದ ಕಟ್ಟಡದಲ್ಲಿ ಕಿಚ್ಚನ ಖದರ್. ಇದೆಲ್ಲವನ್ನ ಕಣ್ತುಂಬಿಕೊಂಡ ಕಿಚ್ಚನ ಅಭಿಮಾನಿಗಳು.

ಲಬುರ್ಜ್ ಖಲೀಫಾ, ಭೂ ಗ್ರಹದಲ್ಲಿರೋ ಮಾನವ ನಿರ್ಮಿತ ಅತಿ ಎತ್ತರದ ಕಟ್ಟಡ. ಭೂಮಂಡಲದ ವಿಸ್ಮಯ ಅದು. ಮರುಳುಗಾಡಿನಲ್ಲಿ ತಲೆಎತ್ತಿ ನಿಂತು ಮುಗಿಲನ್ನೇ ಚುಂಬಿಸುತ್ತಿರೋ ಭೂಮಿಯ ಅದ್ಭುತ. ಕತ್ತು ಎತ್ತಿ ನೋಡಿದ್ರೂ ತುದಿ ಕಾಣದಷ್ಟು ಎತ್ತರದಲ್ಲಿರೋ ಗಗನಚುಂಬಿ ಕಟ್ಟಡ ಅದು. ವಿಶ್ವದ ಮಾನವ ನಿರ್ಮಿತ ತುತ್ತ ತುದಿ ಅದು. ಇಂತಹ ವಿಸ್ಮಯಕಾರಿ ಪ್ರಪಂಚದಲ್ಲಿ ಕನ್ನಡದ ಕಂಪು ರಾರಾಜಿಸಿದೆ.

ಜಗತ್ತಿನ ಅತಿ ಎತ್ತರದ ಕಟ್ಟಡ ಅನ್ನೋ ಖ್ಯಾತಿಗೆ ಪಾತ್ರವಾಗಿರೋ ದುಬೈನ ಬುರ್ಜ್ ಖಲೀಫಾದಲ್ಲಿ ಕನ್ನಡದ ಬಾವುಟ ರಾರಾಜಿಸಿದೆ. 828 ಮೀಟರ್​ ಎತ್ತರ ಇರೋ ಕಟ್ಟಡದ ತುಂಬೆಲ್ಲಾ ಹಳದಿ ಕೆಂಪು ಬಣ್ಣದ ಕನ್ನಡ ಬಾವುಟ ಮಿರ ಮಿರ ಮಿಂಚಿದೆ. ಕನ್ನಡದ ಬಾವುಟದ ವೈಭವವನ್ನ ಇಡೀ ಜಗತ್ತೇ ಕಣ್ತುಂಬಿ ಕೊಂಡಿದೆ. ಕನ್ನಡವನ್ನ ವಿಶ್ವದ ಎತ್ತರ ಕಟ್ಟಡದಲ್ಲಿ ಮೂಡಿಸಿದ್ದು ವಿಕ್ರಾಂತ್ ರೋಣ ಟೀಮ್​.

ಸ್ಯಾಂಡಲ್‌ವುಡ್ ಬಾದ್‌ಶಾ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆ ದುಬೈನ ಬುರ್ಜ್ ಖಲೀಫಾದಲ್ಲಿ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ಮಾಡಲಾಗಿದೆ. ಇದೇ ಸಂಭ್ರಮಾಚರಣೆ ಸಂಭ್ರಮದಲ್ಲಿ ವಿಕ್ರಾಂತ್ ರೋಣನ ಟೈಟಲ್ ಲೋಗೋ ಕೂಡ ಲಾಂಚ್ ಆಗಿದೆ. ಅತ್ಯಂತ ಎತ್ತರದ ಕಟ್ಟಡ ದುಬೈನ ಬುರ್ಜ್‌ ಖಲೀಫಾ ಮೇಲೆ ಭಾನುವಾರ ರಾತ್ರಿ ವಿಕ್ರಾಂತ್​ ರೋಣ ಟೈಟಲ್ ಲೋಗೋ ಹಾಗೂ ಕಿಚ್ಚನ 2000 ಅಡಿ ಎತ್ತರದ ವರ್ಚುವಲ್ ಕಟೌಟ್​ ವರ್ಣ ರಂಜಿತವಾಗಿ ರಾರಾಜಿಸಿದೆ.

ಸುದೀಪ್‌ ಬೆಳ್ಳಿ ಹೆಜ್ಜೆಯ ಸಂಭ್ರಮವನ್ನು ಸ್ಮರಣೀಯಗೊಳಿಸಲು 'ವಿಕ್ರಾಂತ್‌ ರೋಣ' ಚಿತ್ರತಂಡ ಬುರ್ಜ್‌ ಖಲೀಫಾ ಮೇಲೆ ಚಿತ್ರದ ಶೀರ್ಷಿಕೆ ಮತ್ತು ಚಿತ್ರದ ಮೂರು ನಿಮಿಷಗಳ ಟೀಸರ್‌ ಬಿಡುಗಡೆ ಮಾಡಲು ಎರಡು ತಿಂಗಳ ಹಿಂದೆಯೇ ಯೋಜನೆ ರೂಪಿಸಿತ್ತು. ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ರು. ಕೊನೆಗೂ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಝಲಕ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಇನ್ನು ದುಬೈನಲ್ಲಿದ್ದ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಕೂಗಿ ಜೈಕಾರ ಹಾಕಿದ್ದಾರೆ. ಇನ್ನು ಸುದೀಪ್ ನಟಿಸಿದ ಚಿತ್ರಗಳ ಝಲಕ್, ಕ್ರಿಕೆಟ್, ಗಾಯನ ಸೇರಿದಂತೆ ಕಿಚ್ಚ ನಡೆದು ಬಂದ ಹಾದಿಯನ್ನು ಟೀಸರ್ ಮೂಲಕ ಬಿತ್ತರಿಸಲಾಯಿತು. ಇದು ಕೂಡ ಕಿಚ್ಚನ ಅಭಿಮಾನಿಗಳ ಎಕ್ಸೈಟ್​ಮೆಂಟ್​ಅನ್ನು ಮತ್ತಷ್ಟು ಹೆಚ್ಚಿಸಿತ್ತು.

ದುಬೈ ಸ್ಥಳೀಯರೊಬ್ಬರು ಕಿಚ್ಚನ ಹಾಡಿಗೆ ರಿಕ್ವೆಸ್ಟ್ ಮಾಡಿದಾಗ, ಡಾ. ವಿಷ್ಣುವರ್ಧನ್ ನಟನೆಯ ಜಿಮ್ಮಿಗಲ್ಲು ಚಿತ್ರದ ತುತ್ತು ಅನ್ನ ತಿನ್ನೋಕೆ ಹಾಡನ್ನು ಹಾಡಿದ್ದಾರೆ. ಅಷ್ಟೆಯಲ್ಲ ಇದು ನನ್ನ ನೆಚ್ಚಿನ ನಟ ಹಾಡು ಎಂದು ಸಹ ಹೇಳಿದ್ದಾರೆ. ಅಂದ್ಹಾಗೆ, ಸುದೀಪ್ ಅವರು ಜಿಮ್ಮಿಗಲ್ಲು ಚಿತ್ರದ ಹಾಡು ಹಾಡಿರುವುದು ಇದೇ ಮೊದಲಲ್ಲ. ಅನೇಕ ವೇದಿಕೆಗಳಲ್ಲಿ, ಟಿವಿ ಕಾರ್ಯಕ್ರಮಗಳಲ್ಲಿ ಈ ಹಾಡಿ ನನ್ನ ನೆಚ್ಚಿನ ಸಾಂಗ್ ಎಂದಿದ್ದಾರೆ.

ವಿಕ್ರಾಂತ್ ರೋಣ ಯಾವಾಗ ತೆರೆಗೆ ಬರುತ್ತೆ ಅನ್ನೋ ಕುತೂಹಲಕ್ಕೂ ಕೂಡ ಈಗ ತೆರೆ ಬಿದ್ದಿದೆ. ಈ ಕುತೂಹಲದ ಪ್ರಶ್ನೆಗೆ ಸ್ವತಃ ಸುದೀಪ್ ಉತ್ತರ ಕೊಟ್ಟಿದ್ದಾರೆ. ವಿಕ್ರಾಂತ್​ ರೋಣ ಚಿತ್ರದ 3ಡಿ ಕೆಲಸಗಳು‌ ನಡೆಯುತ್ತಿದ್ದು, ಆಗಸ್ಟ್‌ ಅಥವಾ ಸೆಪ್ಟೆಂಬರ್​ನಲ್ಲಿ ರಿಲೀಸ್​ ಆಗಲಿದೆ ಅಂತ ಸುದೀಪ್ ಹೇಳಿದ್ದಾರೆ.

ಸದ್ಯ ಜಗತ್ತಿನ ಅತಿ ಎತ್ತರದ ಕಟ್ಟಡದಲ್ಲಿ ವಿಕ್ರಾಂತ್ ರೋಣ ಟೀಮ್ ಕನ್ನಡ ಡಿಂಡಿಮ ಬಾರಿಸಿದೆ. ಸ್ಯಾಂಡಲ್​​​​ವುಡ್​ನಲ್ಲೇ ಹೊಸ ಪ್ರಯೋಗ ಮಾಡಿ ಬೇಷ್ಅನಿಸಿಕೊಂಡಿದೆ. ವಿಕ್ರಾಂತ್​ ರೋಣನನ್ನ ತೆರೆಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.

Next Story

RELATED STORIES