ದೈವಸ್ಥಾನದ ಕಾಣಿಕೆ ಹುಂಡಿಗೆ ಅಪಚಾರ ಎಸಗಿದವರಿಗೆ ಸಂಕಷ್ಟ
ರಕ್ತಕಾರಿ ಸತ್ತುಹೋದ ದುಷ್ಕರ್ಮಿ, ಮತ್ತೆ ಕಾರಣಿಕ ತೋರಿಸಿದ ಕರಾವಳಿಯ ದೈವಗಳು

ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲರಿಗೂ ತಿಳಿದಿರೋ ವಿಚಾರ. ಇಂತಹ ದೈವಸ್ಥಾನದ ಮುಂದೆ ಎಂತವನೂ ಕೇಡು ಬಗೆಯಲು ಮುಂದಾಗೋದಿಲ್ಲ. ಆದರೆ, ಮಂಗಳೂರಿನಲ್ಲಿ ದೈವಸ್ಥಾನಗಳಿಗೆ ಅಪಚಾರ ಮಾಡಿದ ವ್ಯಕ್ತಿಯೊಬ್ಬ ರಕ್ತಕಾರಿ ಸತ್ತಿದ್ದಾನೆ. ಕೃತ್ಯಕ್ಕೆ ಸಹಕರಿಸಿದ ಇಬ್ಬರು ದೈವಗಳ ಮುಂದೆ ಶರಣಾಗಿದ್ದಾರೆ.
ಕರಾವಳಿ ಜಿಲ್ಲೆ ಭೂತರಾಧನೆಯ ತವರು ನೆಲ. ಇಲ್ಲಿಯ ಜನ ದೇವರನ್ನು ಭಕ್ತಿಯಿಂದ ಪೂಜೆ ಮಾಡುತ್ತಾರೋ ಗೊತ್ತಿಲ್ಲ, ದೈವಗಳ ಆರಾಧನೆಯನ್ನು ಮಾತ್ರ ಭಯ ಭಕ್ತಿಯಿಂದ ಪೂಜಿಸುತ್ತಾರೆ. ಆದರೆ, ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಮಂಗಳೂರು ನಗರ ಭಾಗದಲ್ಲೇ ಕೆಲ ಸಮಯದಿಂದ ದುಷ್ಕರ್ಮಿಗಳು ದೈವಸ್ಥಾನಕ್ಕೆ ಅಪಚಾರ ಎಸಗುತ್ತಿದ್ದರು. ದೈವಸ್ಥಾನಗಳ ಕಾಣಿಕೆ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹಗಳ ಚೀಟಿ ಹಾಕಿ ಅಪವಿತ್ರಗೊಳಿಸುತ್ತಿದ್ದರು. ಈ ರೀತಿ ದುಷ್ಕೃತ್ಯ ಎಸಗಿದ ತಂಡ ಇದೀಗ ಸಂಕಷ್ಟಕ್ಕೆ ಒಳಗಾಗಿ ದೈವಗಳಿಗೆ ಶರಣಾಗಿದ್ದಾರೆ. ತಂಡದ ಒರ್ವ ವ್ಯಕ್ತಿ ರಕ್ತಕಾರಿ ಸಾವನ್ನಪ್ಪಿದ ಬಳಿಕ ದೈವಗಳಿಗೆ ತಪ್ಪು ಕಾಣಿಕೆ ಹಾಕಲು ಬಂದು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಬಂಧನಕ್ಕೆ ಒಳಗಾಗಿರುವ ಈ ಇಬ್ಬರ ಹೆಸರು ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್. ಇವರಿಬ್ಬರು ಸಹ ಮಂಗಳೂರು ಹೊರವಲಯದ ಜೋಕಟ್ಟೆ ನಿವಾಸಿಗಳು. ಇವರಿಬ್ಬರು ಹಾಗು ಇವರ ಸ್ನೇಹಿತ ನವಾಝ್ ಸೇರಿ ಮಂಗಳೂರಿನ ದೈವಸ್ಥಾನಗಳ ಕಾಣಿಕೆ ಹುಂಡಿಗೆ ಇದೇ ರೀತಿ ಅಪಚಾರ ಎಸಗುತ್ತಿದ್ದರು. ಈ ಬಗ್ಗೆ ಮಂಗಳೂರಿನ ಉಳ್ಳಾಲ, ಪಾಂಡೇಶ್ವರ, ಕದ್ರಿ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿತ್ತು. ಆದ್ರೆ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದ್ರೆ ಇವರು ಮಾಡಿದ ತಪ್ಪಿಗೆ ಇದೀಗ ದೈವಗಳೇ ಶಿಕ್ಷೆಯನ್ನು ನೀಡಿದೆ.
ನವಾಝ್ ತನ್ನನ್ನು ತಾನೂ ಮಂತ್ರವಾದಿ ಎಂಬಂತೆ ಬಿಂಬಿಸಿಕೊಂಡಿದ್ದ. ಆದ್ರೆ ಈ ಕೃತ್ಯ ಎಸಗಿದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ. ರಕ್ತವಾಂತಿ, ಭೇದಿಯಿಂದ ಕಂಗೆಟ್ಟಿದ್ದ. ಈ ಸಂದರ್ಭ ತಾನು ಕಾರಣಿಕ ದೈವ ಕೊರಗಜ್ಜನ ಶಾಪಕ್ಕೆ ಗುರಿಯಾಗಿರುವ ಬಗ್ಗೆ ಇವರಲ್ಲಿ ಹೇಳಿಕೊಂಡಿದ್ದ. ಇದಾದ ಕೆಲ ತಿಂಗಳ ಹಿಂದಷ್ಟೇ ರಕ್ತ ಕಾರಿ ಸತ್ತಿದ್ದ. ನವಾಝ್ ಸಾವನ್ನಪ್ಪಿದ ಬಳಿಕ ತೌಫಿಕ್ಗೂ ಇದೇ ರೀತಿ ಅನಾರೋಗ್ಯ ಕಾಡಿತ್ತು. ಇದರಿಂದ ಕಂಗೆಟ್ಟ ತೌಫಿಕ್ ಮತ್ತು ರಹೀಂ ಚಾಮುಂಡಿ ದೈವದಲ್ಲಿ ಪ್ರಶ್ನೆ ಕೇಳಿದ್ದರು. ಈ ಸಂದರ್ಭ ಎಮ್ಮೆಕೆರೆ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗುವಂತೆ ತಿಳಿಸಲಾಗಿತ್ತು. ಅದರಂತೆ ತಾವು ಕೃತ್ಯ ಎಸಗಿದ್ದ ಕೋಟೆದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಬಂದು ಕೊರಗಜ್ಜನ ಮುಂದೆಯೇ ತಪ್ಪು ಕಾಣಿಕೆ ಹಾಕಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಸದ್ಯ ಪಾಂಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನವಾಝ್ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ಎಂಬುದನ್ನು ಇಬ್ಬರು ಒಪ್ಪಿಕೊಂಡಿದ್ದಾರೆ. ಸದ್ಯ ಕಾರಣಿಕ ಮೆರೆದಿರುವ ದೈವಗಳ ಬಗ್ಗೆ ಜನ ಕೊಂಡಾಡುತ್ತಿದ್ದಾರೆ.