ಬಡಬೀದಿ ವ್ಯಾಪಾರಿಗಳಿಗೆ 10 ಸಾವಿರ ಹಣ ನೀಡಬೇಕಿದೆ - ಸಚಿವ ವಿ.ಸೋಮಣ್ಣ
ಬಜೆಟ್ನಲ್ಲಿ ಹೊಸದಾಗಿ ಏನೂ ಕೇಳಿಲ್ಲ. ಎಲ್ಲವನ್ನೂ ಸಿಎಂ ಅವರ ಬಳಿ ಹೇಳಿದ್ದೇವೆ.

ಬೆಂಗಳೂರು: 2023ರೊಳಗೆ ಯಾರಿಗೆ ಸೂರಿಲ್ಲ ಅವರಿಗೆ ಸೂರು. ಇಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಗುರುವಾರ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ತೀರ್ಮಾನವಾಗಿದ್ದು, 3 ಲಕ್ಷದ 40 ಸಾವಿರ ಮನೆಗಳನ್ನ ಕಟ್ಟಲು ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಇದಕ್ಕೆ ಗ್ರಾಂಟ್ ಸಿಗಲಿದೆ. ಬ್ಯಾಂಕುಗಳು ಹಣವನ್ನ ಸರಿಯಾಗಿ ನೀಡುತ್ತಿರಲಿಲ್ಲ. ಮನೆ ಕಟ್ಟಲು ಹಣ ಸಮಯಕ್ಕೆ ಬಿಡುಗಡೆ ಮಾಡುತ್ತಿರಲಿಲ್ಲ. ದಾಖಲೆ ಕೇಳಿ ಫಲಾನುಭವಿಗಳನ್ನ ಅಲೆಸುತ್ತಿದರು ಅದಕ್ಕೆ ಬ್ಯಾಂಕ್ನವರನ್ನ ಕರೆದು ಸಭೆ ನಡೆಸಿದ್ದೇವೆ ಎಂದು ತಿಳಿಸಿದರು.
ಸದ್ಯ ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾಗಲಿದೆ. ಫಲಾನುಭವಿಗಳಿಗೆ 12 ಲಕ್ಷ ಲೋನ್ ಕೊಡಲು ನಿರ್ಧಾರ ಮಾಡಲಾಗಿದೆ. ಬಡಬೀದಿ ವ್ಯಾಪಾರಿಗಳಿಗೆ 10 ಸಾವಿರ ಹಣ ನೀಡಬೇಕಿದೆ. ಇದು ಪ್ರಧಾನಿಯವರ ಸೂಚನೆಯಾಗಿದೆ. ಹೀಗಾಗಿ ಬಡವರ ಪರ ಯೋಜನೆ ತರುತ್ತಿದ್ದೇವೆ ಎಂದರು.
ಸರ್ಕಾರ ಆರ್ಥಿಕ ಕೊರತೆ ಎದುರಿಸುತ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಖಜಾನೆಯಲ್ಲಿ ಹಣ ಇದ್ಯಾ ಅನ್ನೋದು ಮುಖ್ಯವಲ್ಲ. ಎಲ್ಲದಕ್ಕೂ ಸರ್ಕಾರದ ಬಳಿ ಹಣವಿದೆ ಎಂದು ಹೇಳಿದರು.
ಈ ಬಾರಿಯ ಬಜೆಟ್ನಲ್ಲಿ ಏನನ್ನ ಕೇಳಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಜೆಟ್ನಲ್ಲಿ ಹೊಸದಾಗಿ ಏನೂ ಕೇಳಿಲ್ಲ. ಎಲ್ಲವನ್ನೂ ಸಿಎಂ ಅವರ ಬಳಿ ಹೇಳಿದ್ದೇವೆ. ವಸತಿ ಯೋಜನೆಗೆ ಉತ್ತಮ ಅವಕಾಶ ಕೊಡ್ತಾರೆ ಎಂದಿದ್ದಾರೆ.