‘ಕದ್ದುಮುಚ್ಚಿ ಹೋಗಿ ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಕುಮಾರಸ್ವಾಮಿಗಿಲ್ಲ’

ಬೆಂಗಳೂರು: ಬಿಜೆಪಿ ಸರ್ಕಾರ ತಂದಿರುವ ಕಾಯ್ದೆಗಳ ವಿರೋಧಿಸಿ ಆಗಸ್ಟ್​ 4ರಂದು ಪ್ರತಿಭಟನೆ ನಡೆಸಲು ನಿರ್ಧಾರಿಸಲಾಗಿದೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಶುಕ್ರವಾರ ಹೇಳಿದ್ದಾರೆ.

ನಗದಲ್ಲಿರುವ ಜೆಡಿಎಸ್​ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200ಕ್ಕೂ ಹೆಚ್ಚು ಜನರು ಭಾಗವಹಿಸುವಂತಿಲ್ಲ, ಹೀಗಾಗಿ ಶಾಸಕರು, ಮಾಜಿ ಶಾಸಕರು, ವಿಧಾನಸಭೆ ಅಭ್ಯರ್ಥಿಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಬೇಕು. ರಾಜಭವನಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು. ಹೀಗಾಗಿ ಕಾರ್ಯಕರ್ತರು ಸಹಕರಿಸಬೇಕಾಗಿ ಮನವಿ ಎಂದು ಅವರು ಜೆಡಿಎಸ್​ ಕಾರ್ಯಕರ್ತರಿಗೆ ಕರೆ ನೀಡಿದರು.

ಪಠ್ಯದಿಂದ ಟಿಪ್ಪು ವಿಚಾರ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಕೂಡ ಟಿಪ್ಪು ಬಗ್ಗೆ ಓದಿಕೊಂಡು ಬಂದವರು. ಮುಸ್ಲಿಂ ಸಮುದಾಯಕ್ಕೆ ನಾನು ಮೀಸಲಾತಿ ನೀಡಿದ್ದಾಗ ಯಾರೂ ಚಕಾರ ಎತ್ತಲಿಲ್ಲ ಎಂದು ಹೆಚ್ಡಿಡಿ ಅವರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಟಿಪ್ಪು ವಿಚಾರವನ್ನು ಮತ್ತೊಮ್ಮೆ ವಿವಾದ ಮಾಡಲಾಗುತ್ತಿದೆ. ರಾಜ್ಯದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸಲಾಗಿದೆ. 1985ರಲ್ಲಿ ನಾನು ಟಿಪ್ಪು ಸುಲ್ತಾನ್ ವಸತಿ ಶಾಲೆ ಆರಂಭಿಸುವಂತೆ ನಾನು ಪತ್ರ ಬರೆದಿದ್ದೆ. ಎಸ್.ಎಂ.ಕೃಷ್ಣ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಜೊತೆ ವಿಲೀನ ಮಾಡಿದರು ಎಂದು ಹಳೆಯ ಘಟನೆಯನ್ನು ನೆನೆದರು.

ಸದ್ಯಕ್ಕೆ ಟಿಪ್ಪು ವಿವಾದ ಸರ್ಕಾರಕ್ಕೆ ಒಳಿತಲ್ಲ, ಸರ್ಕಾರ ಪರಿಶೀಲನೆ ಮಾಡಬೇಕು. ಎಲ್ಲರಿಗೂ ಸಮಾಧಾನ ಆಗುವ ನಿರ್ಣಯ ಮಾಡಬೇಕು. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಫೋಟೋ ಹಾಕಿದ ಪಾಠಗಳನ್ನ ನಾನೇ ಓದಿದ್ದೇನೆ. ಸರ್ಕಾರ ಇಂತಹ ವಿಚಾರದಲ್ಲಿ ಸಮಷ್ಠಿ ನಿರ್ಧಾರ ಮಾಡಬೇಕಿದೆ. ಅನಗತ್ಯ ಗೊಂದಲ ಬೇಡ ಎಂದು ದೇವೇಗೌಡ ಅವರು ಹೇಳಿದರು.

ಕೊರೊನಾ ನಿಲ್ಲಿಸುವುದರ ಬಗ್ಗೆ ಸಕಾರಾತ್ಮಕ ಸಲಹೆ ನೀಡುತ್ತೇವೆ. ಹೋರಾಟ ಮಾಡುತ್ತಿರುವುದು ಕಾಯ್ದೆಗಳ ತಿದ್ದುಪಡಿ ವಿರೋಧಿಸಿ, ವಿರೋಧ ಪಕ್ಷಗಳು ಕುಳಿತು ಈ ಬಗ್ಗೆ ಚರ್ಚಿಸಬೇಕು. ನಾವು ಮೊದಲು ಸಕಾರಾತ್ಮಕ ಸಲಹೆ ನೀಡುತ್ತೇವೆ. ಸಲಹೆ ಒಪ್ಪದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಸರ್ಕಾರಕ್ಕೆ ಹೆಚ್ಡಿಕೆ ಬೆಂಬಲವಿದೆ ಎಂಬ ಎಂಎಲ್​ಸಿ ಸಿ.ಪಿ. ಯೋಗೀಶ್ವರ್ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆ ಇಲ್ಲ. ಆದರೆ, ಬಿಜೆಪಿ ಸರ್ಕಾರ ಅಸ್ಥಿರಗೊಳಿಸುವುದಿಲ್ಲ ಎಂದಿದ್ದಾರೆ. ಅವರ ಮಧ್ಯೆ ಒಡಕು ಬಂದರೆ ಮುಂದಿನ ಚುನಾವಣೆಗೆ ಹೋಗುವುದು. ಕುಮಾರಸ್ವಾಮಿ ಯಡಿಯೂರಪ್ಪ ಜೊತೆ ಸರ್ಕಾರ ಮಾಡಿದ್ದವರು. ಕದ್ದು-ಮುಚ್ಚಿ ಹೋಗಿ ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆ ಅವರಿಗಿಲ್ಲ, ನಾನು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಲ್ಲ ಎಂದು ಸ್ಪಷ್ಟನೆ ನೀಡಿದರು.

ಜೆಡಿಎಸ್ ಕಾರ್ಯಕರ್ತರನ್ನ ಡಿಕೆ ಬ್ರದರ್ಸ್ ಕಾಂಗ್ರೆಸ್ ಸೆಳೆಯುತ್ತಾರೆಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಊಹಾಪೋಹದ ಮಾತುಗಳಿಗೆ ಉತ್ತರ ನೀಡಲ್ಲ, ನನಗೆ ಸಾಕಷ್ಟು ರಾಜಕೀಯ ಅನುಭವವಿದೆ. ನನಗೆ ಏನು ನಡೆಯುತ್ತಿದೆ ಎಲ್ಲವೂ ಗೊತ್ತಿದೆ. ಅವರ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರೋದಾದರೆ ಬನ್ನಿ ಎಂದಿದ್ದಾರೆ. ಸೂಕ್ತ ಸಂದರ್ಭದಲ್ಲಿ ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ನುಡಿದರು.

Recommended For You

About the Author: user

Leave a Reply

Your email address will not be published. Required fields are marked *