Top

80 ಕೋಟಿ ಜನರಿಗೆ ನವೆಂಬರ್​​ ತಿಂಗಳವರೆಗೆ ಉಚಿತ ಅಕ್ಕಿ-ಬೇಳೆ ವಿತರಣೆ - ಪ್ರಧಾನಿ ನರೇಂದ್ರ ಮೋದಿ ಘೋಷಣೆ

80 ಕೋಟಿ ಜನರಿಗೆ ನವೆಂಬರ್​​ ತಿಂಗಳವರೆಗೆ ಉಚಿತ ಅಕ್ಕಿ-ಬೇಳೆ ವಿತರಣೆ - ಪ್ರಧಾನಿ ನರೇಂದ್ರ ಮೋದಿ ಘೋಷಣೆ
X

ನವದೆಹಲಿ: 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನೂ ನವೆಂಬರ್‌ವರೆಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.

ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲೇ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ದೇಶದಲ್ಲಿ ನಿರ್ಬಂಧ ಸಡಿಲಿಸುವ ಅನ್‌ಲಾಕ್ 2.O ಮಾರ್ಗಸೂಚಿಯನ್ನು ನಿನ್ನೆಯಷ್ಟೇ (ಜೂನ್ 29) ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಇದರ ಜೊತೆಗೆ ಚೀನಾದ 59 ಆ್ಯಪ್‌ಗಳಿಗೆ ನಿಷೇಧ ಹೇರುವ ಮೂಲಕ ಗಡಿ ತಂಟೆಯ ವಿಚಾರದಲ್ಲಿ ಬಲ ಪ್ರಯೋಗಕ್ಕೆ ಮುಂದಾದರೆ ಕಠಿಣ ನಿರ್ಧಾರಕ್ಕೆ ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿತ್ತು.

ಕೊರೊನಾ ಜೊತೆಗೆ ಹೋರಾಡುತ್ತಲೇ ನಾವು ಅನ್‌ಲಾಕ್‌ನತ್ತ ಬಂದಿದ್ದೇವೆ. ಕೊರೊನಾ ನಿರ್ವಹಣೆ ವಿಚಾರದಲ್ಲಿ ವಿಶ್ವದ ಹಲವು ದೇಶಗಳಿಗೆ ಹೋಲಿಸಿದರೆ ಭಾರತವು ಸಬಲವಾಗಿದೆ. ಸಮಯಕ್ಕೆ ಸರಿಯಾಗಿ ಲಾಕ್‌ಡೌನ್ ಮಾಡಿದ್ದು ಮತ್ತು ಇತರ ಕ್ರಮಗಳನ್ನು ಜರುಗಿಸಿದ್ದರಿಂದ ಲಕ್ಷಾಂತರ ಜನರ ಜೀವ ಉಳಿಯಿತು. ಆದರೂ ದೇಶದಲ್ಲಿ ಅನ್‌ಲಾಕ್ 1.0 ಶುರುವಾದಾಗ ವ್ಯಕ್ತಿಗಳ ಸಾಮಾಜಿಕ ವ್ಯವಹಾರದಲ್ಲಿ ಸಡಿಲಕೆ ಕಂಡು ಬಂತು. ಆರಂಭದಲ್ಲಿ ನಾವು ಮಾಸ್ಕ್‌ ಧರಿಸುವುದು, ಎರಡು ಅಡಿ ಅಂತರ ಕಾಪಾಡುವುದು ಮತ್ತು 20 ಸೆಕೆಂಡ್ ಕೈ ತೊಳೆಯುವ ವಿಚಾರದಲ್ಲಿ ಯಾಮಾರುತ್ತಿರಲಿಲ್ಲ. ಆದರೆ, ಈಗ ಇಂಥ ಕ್ರಮಗಳ ಅಗತ್ಯ ಇನ್ನೂ ಹೆಚ್ಚಾಗಿದೆ ಎಂದರು.

ನಿಮಗಾಗಿ ಸರ್ಕಾರ ಶ್ರಮಿಸುತ್ತಿದೆ. ದಯವಿಟ್ಟು ಸಹಕರಿಸಿ. ಮಾಸ್ಕ್ ಧರಿಸುವುದನ್ನು ಮರೆಯಬೇಡಿ, ಅಂತರ ಕಾಪಾಡಿಕೊಳ್ಳಿ. ನಾವು ಸತತ ಕೆಲಸ ಮಾಡುತ್ತೇವೆ. ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ಮುಂದಕ್ಕೆ ತರುತ್ತೇವೆ. ಆತ್ಮ ನಿರ್ಭರ್ ಭಾರತ ನಿರ್ಮಿಸಲು ಹಗಲಿರುಳು ಶ್ರಮಿಸುತ್ತೇವೆ. ಬಡವರ ಜೊತೆಗೆ ದೇಶದ ಎಲ್ಲ ರೈತರು ಮತ್ತು ತೆರಿಗೆ ಪಾವತಿದಾರರನ್ನು ನಮಿಸುತ್ತೇನೆ. ಇವರ ನೆರವಿನಿಂದ ದೇಶ ಮಹತ್ವದ ಮುನ್ನಡೆ ಸಾಧಿಸಿದೆ. ನೀವು ನಿಷ್ಠೆಯಿಂದ ತೆರಿಗೆ ತುಂಬಿದ್ದರಿಂದಲೇ ದೇಶದ ಬಡವರು ಇಷ್ಟು ದೊಡ್ಡ ಸಂಕಟವನ್ನು ಎದುರಿಸಲು ಸಾಧ್ಯವಾಗಿದೆ. ನಮ್ಮ ಅನ್ನದಾತರಾದ ರೈತರು ಮತ್ತು ನಿಷ್ಠಾವಂತ ತೆರಿಗೆ ಪಾವತಿದಾರರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ. ಬಡವರು ಮತ್ತು ಅಗತ್ಯವಿರುವ ಜನರಿಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದೇಶದ ಎಲ್ಲರಿಗೂ ಒಂದೇ ರೇಷನ್​ಕಾರ್ಡ್ ಕೊಡುವ ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆಯನ್ನೂ ಶೀಘ್ರ ಜಾರಿ ಮಾಡುತ್ತೇವೆ. ಈ ಕಾರ್ಯಕ್ಕಾಗಿ ಕೇಂದ್ರ ಸರ್ಕಾರವು 2 ಲಕ್ಷ ಕೋಟಿ ವ್ಯಯಿಸುತ್ತಿದೆ. 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನೂ ಕೊಡುತ್ತೇವೆ ಎಂದು ಪ್ರಧಾನಿ ಮೋದಿ ಅವರು ಘೋಷಣೆ ಮಾಡಿದರು.

ಸದ್ಯ ಈ ಮಹತ್ವದ ಯೋಜನೆಯು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳವರೆಗೆ ಚಾಲ್ತಿಯಲ್ಲಿರುತ್ತವೆ. ಇದು ಖರ್ಚಿನ ಸಮಯ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ನಾವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮತ್ತು ಇತರ ಯೋಜನೆಯಗಳನ್ನು ದೀಪಾವಳಿವರೆಗೆ ಅಂದರೆ ನವೆಂಬರ್‌ ಅಂತ್ಯದವರೆಗೂ ವಿಸ್ತರಿಸಿದ್ದೇವೆ. ಜುಲೈ 5 ಗುರು ಪೂರ್ಣಿಮೆ, ಶ್ರಾವಣ ಶೀಘ್ರ ಆರಂಭವಾಗಲಿದೆ. ರಕ್ಷಾ ಬಂಧನ, ಗಣೇಶ ಚತುರ್ಥಿ, ಓಣಂ, ನವರಾತ್ರಿ, ದಸರಾ, ದೀಪಾವಳಿಯಂತಹ ಹಬ್ಬಗಳು ಸಾಲುಸಾಲಾಗಿವೆ. ಜುಲೈ 5 ಗುರು ಪೂರ್ಣಿಮೆ, ಶ್ರಾವಣ ಶೀಘ್ರ ಆರಂಭವಾಗಲಿದೆ. ರಕ್ಷಾ ಬಂಧನ, ಗಣೇಶ ಚತುರ್ಥಿ, ಓಣಂ, ನವರಾತ್ರಿ, ದಸರಾ, ದೀಪಾವಳಿಯಂಥ ಹಬ್ಬಗಳು ಸಾಲುಸಾಲಾಗಿವೆ. ಇತರ ಕ್ಷೇತ್ರಗಳಲ್ಲಿ ಈಗ ಅಂಥ ಚಟುವಟಿಕೆಗಳು ಇಲ್ಲ, ಇದೀಗ ದೇಶದಲ್ಲಿ ಮಳೆಗಾಲ ಶುರುವಾಗಿದೆ. ಕೃಷಿ ಕ್ಷೇತ್ರದಲ್ಲಿ ಈಗ ಚುರುಕಿನ ಚಟುವಟಿಕೆ ಕಂಡು ಬರುತ್ತಿದೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು ಜನರಿಗೆ ನಮ್ಮ ಸರ್ಕಾರಗಳು ಪಡಿತರ ವಿತರಿಸಿವೆ. ಪ್ರತಿ ಕುಟುಂಬವೂ ಪ್ರತಿ ತಿಂಗಳು ಒಂದು ಕೆ.ಜಿ.ಬೇಳೆಯನ್ನೂ ಕೊಟ್ಟಿದ್ದೇವೆ. ಕೊರೊನಾದೊಂದಿಗೆ ಹೋರಾಡುತ್ತಿರುವ ಭಾರತದ ಬಡವರಿಗೆ 3 ತಿಂಗಳ ಪಡಿತರ ನೀಡಿದ್ದೇವೆ ಎಂದು ಅವರು ತಿಳಿಸಿದರು.

ನಾನು ಮತ್ತೊಂದು ಮುಖ್ಯ ವಿಚಾರ ಹೇಳಬೇಕು. ಹಳ್ಳಿಗಳಲ್ಲಿ ಉದ್ಯೋಗ ಒದಗಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾದಿಂದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಡವರ ಜನ್‌ಧನ್ ಖಾತೆಗಳಿಗೆ ಹಣ ಜಮಾ ಮಾಡಿದ್ದೇವೆ. ರೈತರ ಸಂಕಷ್ಟವನ್ನು ಕಡಿಮೆ ಮಾಡಲು ಯತ್ನಿಸಿದ್ದೇವೆ. ಹೀಗಾಗಿಯೇ ಲಾಕ್‌ಡೌನ್‌ ನಂತರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ ಆರಂಭಿಸಿತು. ಬಡವರಿಗೆ ಅನುಕೂಲ ಕಲ್ಪಿಸುವ ಮಹತ್ವದ ಪ್ಯಾಕೇಜ್ ಘೋಷಿಸಿತು. ಕೇಂದ್ರ ಸರ್ಕಾರವಿರಲಿ, ರಾಜ್ಯ ಸರ್ಕಾರವಿರಲಿ, ನಗರಾಡಳಿತ ಸಂಸ್ಥೆಗಳಿರಲಿ. ಎಲ್ಲ ಹಂತದ ಆಡಳಿತಗಳು ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂದು ಕಾಳಜಿ ವಹಿಸಿದವು. ದೇಶದ ಪ್ರಧಾನಿಯಿಂದ ಹಿಡಿದು, ಹಳ್ಳಿಯ ಸಾಮಾನ್ಯ ಪ್ರಜೆಯವರೆಗೆ ಎಲ್ಲರಿಗೂ ನಿಯಮಗಳು ಅನ್ವಯವಾಗುತ್ತವೆ. ನಿಯಮಗಳಿಗಿಂತಲೂ ಮೇಲೆ ಯಾರೊಬ್ಬರೂ ಇಲ್ಲ, ದೇಶದ ನೂರಾರು ಕೋಟಿ ನಾಗರಿಕರ ಜೀವ ಕಾಪಾಡಲೆಂದು ನಾವು ನಿಯಮಗಳನ್ನು ರೂಪಿಸಿದ್ದೇವೆ ಎಂದು ಅವರು ಸರ್ಕಾರದ ನಿಯಮ ಬಗ್ಗೆ ನುಡಿದರು.

ಮಾಸ್ಕ್ ಧರಿಸದ ನಾಗರಿಕರಿಂದ 13 ಸಾವಿರ ಕೋಟಿ ರೂಪಾಯಿಯಷ್ಟು ದಂಡ ವಸೂಲಿ ಮಾಡಲಾಗಿದೆ ಮತ್ತೊಮ್ಮೆ ಅಂಥದ್ದೇ ಬದ್ಧತೆ ತೋರುವ ಸಂದರ್ಭ ಬಂದಿದೆ. ವಿಶೇಷವಾಗಿ ಕಂಟೇನ್‌ಮೆಂಟ್‌ ವಲಯಗಳಲ್ಲಿ ನಿಯಮಗಳನ್ನು ಬಿಗಿಯಾಗಿ ಜಾರಿ, ಅನುಷ್ಠಾನಕ್ಕೆ ತರಬೇಕಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಬಹಳ ಗಂಭೀರವಾಗಿ ನಿಯಮಗಳನ್ನು ಪಾಲಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶನಿವಾಸಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.

Next Story

RELATED STORIES