‘ಪರೀಕ್ಷೆ ಬರೆಯುತ್ತಿದ್ದ ಓರ್ವ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್’

ಹಾಸನ: ಹಾಸನದಲ್ಲಿ ಒಟ್ಟು 16 ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್​ ಗಿರೀಶ್ ಅವರು ಶನಿವಾರ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಲ್ಲಿಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಓರ್ವ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗೆ ಪಾಸಿಟಿವ್ ಬಂದಿದೆ. ಈ ವಿದ್ಯಾರ್ಥಿ ಡೆಂಗ್ಯು ಜ್ವರದಿಂದ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಆ ವಿದ್ಯಾರ್ಥಿಗೆ ಅಷ್ಟಾಗಿ ಕೊರೊನಾ ಗುಣಲಕ್ಷಣ ಇರಲಿಲ್ಲ, ಜ್ವರದ ಲಕ್ಷಣ ಇರಲಿಲ್ಲ ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ ಎಂದು ಅವರು ತಿಳಿಸಿದರು.

ಇನ್ನು ಪರೀಕ್ಷೆ ಕೇಂದ್ರದಲ್ಲಿದ್ದ 18 ಮಕ್ಕಳು, ಒಬ್ಬರು ಶಿಕ್ಷಕರನ್ನು ನಾವು ಪ್ರತ್ಯೇಕಿಸಿದ್ದೇವೆ. ಕೊರೊನಾ ಪಾಸಿಟಿವ್ ಕಂಡು ಬಂದ ವಿದ್ಯಾರ್ಥಿಗೆ ಥರ್ಮಲ್ ಸ್ಕ್ಯಾನಿಂಗ್​ನಲ್ಲಿ ಯಾವುದೇ ಲಕ್ಷಣ ಇಲ್ಲ, ಕೊರೊನಾ ಲಕ್ಷಣ ಕಂಡು ಬರದ ಹಿನ್ನೆಲೆ ಒಟ್ಟಿಗೆ ಪರೀಕ್ಷೆ ಬರೆಸಿದ್ದೆವು. ಕೊರೊನಾ ಪಾಸಿಟಿವ್ ವಿದ್ಯಾರ್ಥಿಯನ್ನು ಎಲ್ಲರೊಟ್ಟಿಗೆ ಪರೀಕ್ಷೆ ಬರೆಸಿದ್ದಕ್ಕೆ ಜಿಲ್ಲಾಧಿಕಾರಿ ಅವರು ಸಮರ್ಥನೆ ನೀಡಿದ್ದಾರೆ.

ಕೊರೊನಾ ಪಾಸಿಟಿವ್ ಬಂದ ವಿದ್ಯಾರ್ಥಿ ಜೊತೆ ಪರೀಕ್ಷೆ ಬರೆದಿದ್ದ ಉಳಿದ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆ ಬರೆಯುವ ಬಗ್ಗೆಯೂ ಆತಂಕ ಉಂಟಾಗಿದ್ದು, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ, ಇದರ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ಸಮೇತ ಪತ್ರ ಬರೆದಿದ್ದೇವೆ. ಪಾಸಿಟಿವ್ ಬಂದಿರುವ ವಿದ್ಯಾರ್ಥಿ ಜೊತೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮುಂದೆ ಯಾವ ರೀತಿ ಪರೀಕ್ಷೆಗೆ ಅವಕಾಶ ನೀಡಬೇಕು ಎಂಬ ಮಾಹಿತಿ ಕೇಳಿದ್ದೇವೆ. ನಾಳೆ ಮಧ್ಯಾಹ್ನದ ವೇಳೆಗೆ ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಖಚಿತ ಮಾಹಿತಿ ಬರಲಿದೆ ಎಂದರು.

ಇನ್ನು ಪಾಸಿಟಿವ್ ಬಂದಿರುವ ವಿದ್ಯಾರ್ಥಿ ಮುಂದಿನ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಮುಂದಿನ ಸಪ್ಲೆಮೆಂಟರಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶವಿದೆ. ವಿದ್ಯಾರ್ಥಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ ವಿದ್ಯಾರ್ಥಿಗಳನ್ನು, ಸಿಬ್ಬಂದಿಗೂ ಕೋವಿಡ್ ಪರೀಕ್ಷೆ ಮಾಡಲಾಗುವುದು. ಇತ್ತೀಚೆಗೆ ಬೆಂಗಳೂರಿನಿಂದ ಬರುತ್ತಿರುವವರಿಂದ ಕೊರೊನಾ ಹರಡುತ್ತಿರುವ ಬಗ್ಗೆಯೂ ಆತಂಕವಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಹಾಸನ ಜಿಲ್ಲಾಧಿಕಾರಿ ಆರ್​. ಗಿರೀಶ್ ಅವರು ಮಾತನಾಡಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *