‘ಬೆಂಕಿಯಿಲ್ಲದೇ ಹೊಗೆಯಾಡೋಲ್ಲ ಅದೇ ಬೆಂಕಿಗೆ ನೀರು ಹಾಕಿದ್ರು ಹೊಗೆ ಬರುತ್ತೆ’

ಮೈಸೂರು: ಪೌರತ್ವ ಬಯಸಿ ಬಂದವರಿಗೆ ಪೌರತ್ವ ಕೆಲಸ ನಾವು ಮಾಡಿದ್ದೇವೆ. ಇದು ನಮ್ಮ ಸರ್ಕಾರದ ಅತ್ಯುತ್ತಮ ಕೆಲಸವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್ ಅವರು ಹೇಳಿದರು.

ಸೋಮವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಜಮ್ಮುಮತ್ತು ಕಾಶ್ಮೀರದಲ್ಲಿ ಕಟ್ಟುನಿಟ್ಟು ಮಾಡಿದ ಬಳಿಕ ಯಾರು ಇಲ್ಲಿಗೆ ಬಂದಿಲ್ಲ. ಬಂದು ಬಾಂಬ್ ಇಡುವ ಕೆಲಸ ಮಾಡಿಲ್ಲ. ಈ ಮೊದಲು ವಿಜ್ಞಾನ ಭವನಕ್ಕೆ ಬಂದು ಬಾಂಬ್ ಇಡುವ ಕೆಲಸ ಆಗಿತ್ತು. ಕೇರಳಕ್ಕೆ ಬಂದು ಬಾಂಬ್ ಇಡುವ ಕೆಲಸ ಮಾಡಿದ್ದಾರೆ. ಇದೀಗ ಒಂದೇ ಒಂದು ಬಾಂಬ್ ಇಡುವ ಕೆಲಸ ಆಗಿಲ್ಲ. ಇದೆಲ್ಲವೂ ನಮ್ಮ ಸರ್ಕಾರದ ಕಾರ್ಯ ವೈಖರಿ ಎಂದು ಕೇಂದ್ರ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಕೆಗೆ ಹಾಡಿಹೊಗಳಿದ್ದಾರೆ.

20 ಲಕ್ಷ ಕೋಟಿಯನ್ನು ದೇಶಕ್ಕೆ ನೀಡಲಾಗಿದೆ. ಆತ್ಮನಿರ್ಭರ್ ಯೋಜನೆ ಮೂಲಕ ಜನರ ಜೊತೆ ನಾವು ಇದ್ದೇವೆ. ತಳವಾರ, ಪರಿವಾರ ಸಮುದಾಯಕ್ಕು ಅನುಕೂಲಮಾಡಿ ಕೊಟ್ಟಿದೆ. ಎಲ್ಲ ವಿಚಾರದಲ್ಲೂ ನಾವು ಕಪ್ಪು ಚುಕ್ಕಿ ಇಲ್ಲದೆ ಕೆಲಸ ಮಾಡಿದ್ದೇವೆ. ಕೇಂದ್ರದ ಜೊತೆಗೆ ರಾಜ್ಯದಲ್ಲಿಯು ಅತ್ಯುತ್ತಮ ಕೆಲಸ ಆಗಿದೆ ಎಂದು ಅವರು ಕೇಂದ್ರ ಕೆಲಸಗಳನ್ನು ಸಮರ್ಥನೆ ಮಾಡಿಕೊಂಡರು.

ವಿರೋಧ ಪಕ್ಷಗಳು ಚಿಲ್ಲರೆ ರಾಜಕಾರಣ ಮಾಡಿದ್ದಾರೆ. ಇದು ಚಿಲ್ಲರೆ ರಾಜಕಾರಣ ಮಾಡುವ ಸಮಯವಲ್ಲ. ವಿರೋಧ ಪಕ್ಷಗಳಿಗೆ ಟೀಕೆ ಮಾಡೋದಕ್ಕೆ ಸರಿಯಾದ ವಿಷಯ ಇಲ್ಲ. ವಲಸೆ ಕಾರ್ಮಿಕರನ್ನು ಎತ್ತುಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾವು ವಲಸೆ ಕಾರ್ಮಿಕರ ರಕ್ಷಣೆಗೆ ಎಲ್ಲ ರೀತಿಯ ಕ್ರಮಕೊಂಡಿದ್ದೇವೆ. ನಾವು ತೆಗೆದುಕೊಂಡ ಕ್ರಮಗಳಿಗೆ ಸ್ವತಃ ವಿರೋಧ ಪಕ್ಷಗಳೇ ಅಭಿನಂದನೆ ಸಲ್ಲಿಸಿದೆ. ಇದೀಗ ಟೀಕೆ ಮಾಡೋದಕ್ಕೆ ಅಸ್ತ್ರ ಇಲ್ಲ ಅಂತ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಕಟೀಲ್​ ಅವರು ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದರು.

ಯಡಿಯೂರಪ್ಪ ನಮ್ಮ ಪ್ರಶ್ನಾತಿತ ನಾಯಕ. ಅವರು ನಮ್ಮನಾಯಕರು ಆಗಿರೋದಕ್ಕೆ ಅವರನ್ನು ಸಿಎಂ ಮಾಡಿರೋದು. ಯಡಿಯೂರಪ್ಪ ವಿರುದ್ದ ಯಾವುದೇ ಅಸಮಾಧಾನ ಇಲ್ಲ. ರಾಜ್ಯದಲ್ಲಿ ಉತ್ತಮ ಆಡಳಿತ ಇದೆ. ಬಿಎಸ್​ವೈ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದರು.

ಯಡಿಯೂರಪ್ಪನವರಿಂದ ಕುಟುಂಬದ ರಾಜಕಾರಣ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕಟೀಲ್ ಅವರು, ಅಪ್ಪ ಸಿಎಂ ಆದ ತಕ್ಷಣ ಅವರ ಮಕ್ಕಳು ಸಾರ್ವಜನಿಕ ಜೀವನದಲ್ಲಿ ಇರಬಾರದು ಅಂತೇನಿಲ್ಲ. ಯಡಿಯೂರಪ್ಪನವರ ಮಗ ಜನರಿಂದ ಆಯ್ಕೆಯಾಗಿದ್ದಾರೆ ಮತ್ತೊಬ್ಬ ಮಗ ಪಕ್ಷದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪನವರ ಕುಟುಂಬದಲ್ಲಿ ರಾಜಕಾರಣ ಇಲ್ಲ. ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಯಾರು ಕುಟುಂಬ ರಾಜಕಾರಣ ಮಾಡೋಲ್ಲ ಎಂದು ನಳೀನ್​ ಕುಮಾರ್ ಕಟೀಲ್ ಅವರು ಬಿಎಸ್​​ವೈ ಕುಟುಂಬದ ಮೇಲಿನ ಆರೋಪಕ್ಕೆ ಉತ್ತರಿಸಿದ್ದಾರೆ.

ನಮ್ಮ ಸರ್ಕಾರ ಸುಭದ್ರವಾಗಿದೆ. ಹೊರಗಿನಿಂದ ಕರೆದುಕೊಂಡು ಸರ್ಕಾರ ಮಾಡುವ ಅಗತ್ಯವಿಲ್ಲ. ನಮ್ಮ ಬಿಜೆಪಿ ನಾಯಕರು ಪ್ರತ್ಯೇಕ ಸಭೆ ಮಾಡಿಲ್ಲ. ಅವರು ಊಟಕ್ಕೆ ಸೇರಿ ರೊಟ್ಟಿ ತಿಂದಿದ್ದಾರೆ. ನಾನು ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದೇನೆ. ಎಲ್ಲರೂ ಅಭಿವೃದ್ಧಿ ದೃಷ್ಟಿಯಿಂದ ಸಭೆ ಸೇರಿದ್ದೇವೆ ಅಂತ ಹೇಳಿದ್ದಾರೆ. ಹಾಗಾಗಿ ಅವರ ಸಭೆ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದು ಬಿಜೆಪಿ ಬಂಡಾಯ ಶಾಸಕರ ಬಗ್ಗೆ ಸ್ಪಷ್ಟನೆ ನೀಡಿದರು.

ಬೆಂಕಿಯಿಲ್ಲದೆ ಹೊಗೆಯಾಡೋಲ್ಲ. ಅದೇ ಬೆಂಕಿಗೆ ನೀರು ಹಾಕಿದ್ರು ಹೊಗೆ ಬರುತ್ತೆ. ಆ ನಾಯಕರು ಯಾವುದೇ ಬೇಡಿಕೆ ಇಟ್ಟಿಲ್ಲ. ಅವರು ಬ್ಲಾಕ್​ ಮೇಲ್​ ಮಾಡುತ್ತಿಲ್ಲ. ಊಟಕ್ಕೆ ಸೇರಿ ಚರ್ಚೆ ಮಾಡಿದ್ದಾರೆ ಇದನ್ನೇ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಎಂದು ನಳೀನ್​ ಕುಮಾರ್ ಅವರು ಸ್ಪಷ್ಟನೆ ನೀಡಿದರು.

Recommended For You

About the Author: user

Leave a Reply

Your email address will not be published. Required fields are marked *