ಕೆಜಿಎಫ್​ ಸಾರಥಿ ಟ್ವೀಟ್​ ನೋಡಿ ಕೆಲವರು ಗರಂ ಆಗಿದ್ಯಾಕೆ?

ಕೆಜಿಎಫ್​ ಸಿನಿಮಾ ಮಾಸ್ಟರ್​ ಮೈಂಡ್​ ಪ್ರಶಾಂತ್​ ನೀಲ್​​, ಮಾಡಿದ ಅದೊಂದು ಟ್ವೀಟ್​​ ಕಳೆದೆರಡು ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟಾಕ್ಕಿದೆ. ಜ್ಯೂನಿಯರ್​ ಎನ್​ಟಿಆರ್ ಮುಂದಿನ​​​​ ಚಿತ್ರಕ್ಕೆ ಪ್ರಶಾಂತ್​ ನೀಲ್​​​​ ಆ್ಯಕ್ಷನ್​ ಕಟ್​ ಹೇಳ್ತಾರೆ ಅನ್ನುವ ಸುದ್ದಿಗೆ ಅದೇ ಟ್ವೀಟ್​​​ ರೆಕ್ಕೆಪುಕ್ಕ ಕಟ್ಟಿದೆ. ಕೆಜಿಎಫ್​ ಸಾರಥಿ ಟಾಲಿವುಡ್​ಗೆ ಹೋಗ್ತಾರಾ ಅಂತ ಕೆಲವರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಪ್ರಶಾಂತ್​ ನೀಲ್​​, ಉಗ್ರಂ ಮತ್ತು ಕೆಜಿಎಫ್​​​ ಫಸ್ಟ್​ ಚಾಪ್ಟರ್​​ನಿಂದ ರಾತ್ರೋರಾತ್ರಿ ಸ್ಟಾರ್​ ನಿರ್ದೇಶಕನ ಪಟ್ಟಕ್ಕೇರಿದ ಪ್ರತಿಭೆ. ಕನ್ನಡ ಚಿತ್ರವೊಂದನ್ನ ಪಂಚ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಲೆವೆಲ್​​​ನಲ್ಲಿ ಗೆಲ್ಲಿಸಿದ ಆಸಾಮಿ. ಕೆಜಿಎಫ್​ ಅನ್ನೋ ಬ್ರ್ಯಾಂಡ್​ ಹಿಂದಿನ ರುವಾರಿ. ಇವತ್ತು ಪ್ರಶಾಂತ್​ ನೀಲ್​​​ ಚಿತ್ರಕ್ಕೆ ನೂರಾರು ಕೋಟಿ ಬಂಡವಾಳ ಹಾಕೋದಕ್ಕೆ ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ವರೆಗೂ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಕೆಜಿಎಫ್​​-2 ನಂತರ ಪ್ರಶಾಂತ್​ ನೀಲ್ ಯಾವ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳ್ತಾರೆ ಅನ್ನೋ ಕುತೂಹಲ ಚಿತ್ರರಂಗದಲ್ಲಿದೆ.

ಪ್ರಶಾಂತ್​ ನೀಲ್​ ಮಾಡಿದ ಅದೊಂದು ಟ್ವೀಟ್​​​ ಸದ್ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದೆ. ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ತೆಲುಗು ನಟ ಎನ್​ಟಿಆರ್​ಗೆ ನೀಲ್ ಆ ಟ್ವೀಟ್​​ನಲ್ಲಿ​​ ಶುಭಾಶಯ ಕೋರಿದ್ದಾರೆ ಅಷ್ಟೆ. ಆದರೆ, ಅವರು ಶುಭಾಶಯ ಹೇಳಿರುವ ರೀತಿ ಹಲವು ಪ್ರಶ್ನೆಗಳನ್ನ ಹುಟ್ಟಿ ಹಾಕಿದೆ. ​ಪ್ರಶಾಂತ್​ ನೀಲ್​​​​​ ನೆಕ್ಸ್ಟ್​​ ಪ್ರಾಜೆಕ್ಟ್​​​ ತಾರಕ್​ ಜೊತೆ ಪಕ್ಕಾ, ಕೆಜಿಎಫ್​-2 ನಂತರ ಟಾಲಿವುಡ್​ಗೆ ಎಂಟ್ರಿ ಕೊಡ್ತಾರೆ ಅನ್ನುವ ಊಹಾಪೋಹಗಳು ಹುಟ್ಟಿಕೊಂಡಿದೆ. ಇದು ಕೆಲವರ ಅಸಮಧಾನಕ್ಕೂ ಕಾರಣವಾಗಿದೆ.

ನ್ಯೂಕ್ಲಿಯರ್ ಪ್ಲಾಂಟ್​​ ಪಕ್ಕ ಕುಳಿತರೆ ಆಗುವ ಅನುಭವ ಹೇಗಿರುತ್ತೆ ಅನ್ನೋದು ಗೊತ್ತಾಯಿತು. ಮುಂದಿನ ಸಲ ರೇಡಿಯೇಷನ್ ಸೂಟ್ ಧರಿಸಿಕೊಂಡು ನಿಮ್ಮ ಕ್ರೇಜಿ ಎನರ್ಜಿ ಹತ್ತಿರ ಸುಳಿಯುತ್ತೇನೆ. ಹ್ಯಾಪಿ ಬರ್ತ್ ಡೇ ಸೋದರ. ಶೀಘ್ರದಲ್ಲೇ ಭೇಟಿಯಾಗೋಣ ಎಂದು ಕೆಜಿಎಫ್​ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್ ಅವರು ಟ್ವೀಟ್​ ಮಾಡಿದ್ದಾರೆ.

ಹೀಗೆ ಹುಟ್ಟುಹಬ್ಬದ ಸಂಭ್ರದಲ್ಲಿದ್ದ ತಾರಕ್​ಗೆ ಪ್ರಶಾಂತ್​ ನೀಲ್​​ ಶುಭಾಶಯ ಕೋರಿದ್ದಾರೆ. ಆದರೆ, ಟ್ವೀಟ್​ ನೋಡಿದ ಅಭಿಮಾನಿಗಳು ಪ್ರಶಾಂತ್ ನೀಲ್​ ಶೀಘ್ರದಲ್ಲೇ ಎನ್​ಟಿಆರ್​​ನ ಭೇಟಿಯಾಗಲಿದ್ದಾರೆ. ಅದರ ಅರ್ಥ ಅವರಿಬ್ಬರು ಸೇರಿ ಸಿನಿಮಾ ಮಾಡ್ತಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಅನ್ನೋ ಅವರ ಲೆಕ್ಕಾಚಾರ. ಮತ್ತೆ ಕೆಲವರು ನ್ಯೂಕ್ಲಿಯರ್​ ಪ್ಲಾಂಟ್​​ ಬಗ್ಗೆ ಸಿನಿಮಾ ಮಾಡಲಿದ್ದಾರೆ ಅಂತಲೂ ಊಹಿಸಿಕೊಳ್ತಿದ್ದಾರೆ. ಮತ್ತೆ ಕೆಲವರು ಕನ್ನಡ ಬಿಟ್ಟು ಪರಭಾಷೆಗೆ ಹೋಗ್ತಾರಾ(?) ಇದು ಸರೀನಾ(?) ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗ್​ ನೋಡಿದ್ರೆ, ಪ್ರಶಾಂತ್​ ನೀಲ್​ ನೆಕ್ಸ್ಟ್​ ಪ್ರಾಜೆಕ್ಟ್​ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿದೆ. ಕೆಜಿಎಫ್​ ಚಾಪ್ಟರ್​​-2 ಅಕ್ಟೋಬರ್​​ 23ಕ್ಕೆ ರಿಲೀಸ್​ ಆಗುತ್ತೆ. ಆ ನಂತರ ಕೆಜಿಎಫ್​ ಸಾರಥಿ ಯಾವ ಸಿನಿಮಾ ಮಾಡ್ತಾರೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ. ನೀಲ್​ ಜೊತೆ ಸಿನಿಮಾ ಮಾಡೋದಕ್ಕೆ ಅಕ್ಕಪಕ್ಕದ ಇಂಡಸ್ಟ್ರಿ ಸ್ಟಾರ್ಸ್​​ ಕೂಡ ರೆಡಿಯಾಗಿದ್ದಾರೆ. ಈ ಹಿಂದೆ ಟಾಲಿವುಡ್​​ ಪ್ರಿನ್ಸ್​ ಮಹೇಶ್​ ಬಾಬು ಚಿತ್ರಕ್ಕೆ ನೀಲ್​ ಆ್ಯಕ್ಷನ್​ ಕಟ್​ ಹೇಳ್ತಾರೆ ಅನ್ನೋ ಸುದ್ದಿ ಬಂದಿತ್ತು. ಆ ನಂತರ ತಾರಕ್​ ಸಿನಿಮಾಗೆ ಸಾರಥ್ಯ ವಹಿಸ್ತಾರೆ ಅನ್ನಲಾಯ್ತು. ಆದರೆ, ಯಾವುದೇ ಪಕ್ಕಾ ಆಗ್ಲಿಲ್ಲ.

ಸದ್ಯ ಈ ಟ್ವೀಟ್​ನಿಂದ ಪ್ರಶಾಂತ್​ ನೀಲ್​​ ಮುಂದಿನ ಸಿನಿಮಾ ಯಾವುದು ಅನ್ನೋ ಚರ್ಚೆಗೆ ಮತ್ತೆ ಜೀವ ಬಂದಿದೆ.. ಕೆಲವರು ಪ್ರಶಾಂತ್​ ನೀಲ್​​​​ ತೆಲುಗಿಗೆ ಹೋಗುವುದರ ಬಗ್ಗೆ ಚಕಾರ ಎತ್ತಿದ್ದಾರೆ. ಕೆಜಿಎಫ್​-2 ನಂತರ ಕನ್ನಡದಲ್ಲೇ ಅದಕ್ಕಿಂತ ದೊಡ್ಡ ಸಿನಿಮಾ ಮಾಡ್ತಾರೆ ಅಂದು ಕೊಂಡಿದ್ದವರಿಗೆ ಈ ಟ್ವೀಟ್​​​ ಬೇಸರ ತಂದಿದೆ. ಅದೇ ಕಾರಣಕ್ಕೆ ಕನ್ನಡದಲ್ಲಿ ಯಾರು ಹೀರೋಗಳು ಇಲ್ವಾ(?) ಕನ್ನಡ ಚಿತ್ರರಂಗ ನಿಮಗೆ ಹೆಸ್ರು ತಂದುಕೊಟ್ಟಿದ್ದು. ಕನ್ನಡ ಇಂಡಸ್ಟ್ರಿ ಬಿಟ್ಟು ಯಾಕೆ ಹೋಗ್ತೀರಾ(?) ಅಂತ ಸೋಷಿಯಲ್​ ಮೀಡಿಯಾದಲ್ಲಿ ಕಾಮೆಂಟ್​ ಮಾಡ್ತಿದ್ದಾರೆ.

ತಮ್ಮ ಟ್ವೀಟ್​​ ಮತ್ತು ಕೆಲವರು ಅದಕ್ಕೆ ಆಕ್ರೋಶ ವ್ಯಕ್ತಪಡಿಸ್ತಿರೋದ್ರ ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್​​​ ಆಂಗ್ಲ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ನನಗೆ ಹೆಸರು ಮತ್ತು ಅನ್ನ ನೀಡಿರುವುದು ಕನ್ನಡಿಗರು. ಸದ್ಯ ನನ್ನ ಗಮನ ಕೆಜಿಎಫ್​ ಚಾಪ್ಟರ್​​​-2 ಮೇಲಿದೆ. ಮುಂದಿನ ಸಿನಿಮಾಗಳ ಬಗ್ಗೆ ಸದ್ಯಕ್ಕೆ ಹೇಳೋದಕ್ಕೆ ಸಾಧ್ಯವಿಲ್ಲ. ಮುಂದೆ ಮಾಡುವ ಸಿನಿಮಾಗಳೆಲ್ಲಾ ಕನ್ನಡದ್ದೇ ಆಗಿರುತ್ತದೆ ಅಂತ ಹೇಳಿದ್ದಾರೆ. ಆ ಮೂಲಕ ಸದ್ಯಕ್ಕೆ ತಾರಕ್​ ಜೊತೆಗಿನ ಸಿನಿಮಾ ವದಂತಿ ಬಗ್ಗೆ ತೆರೆ ಎಳೆದಿದ್ದಾರೆ.

ಸದ್ಯ ಪ್ಯಾನ್​ ಇಂಡಿಯಾ ಸಿನಿಮಾಗಳ ಜಮಾನ ನಡೀತಿದೆ. ಕೆಜಿಎಫ್​​-2 ನಂತ್ರ ಪ್ರಶಾಂತ್​ ನೀಲ್​​​ ಮತ್ತೊಂದು ಪ್ಯಾನ್​ ಇಂಡಿಯಾ ಚಿತ್ರಕ್ಕೆ ಪ್ಲಾನ್​ ಮಾಡ್ತಿದ್ದಾರೆ ಅನ್ನಲಾಗ್ತಿದೆ. ಅದೇ ನಿಜವಾದ್ರೆ, ಜ್ಯೂನಿಯರ್​ ಎನ್​ಟಿಆರ್​​ ಕನ್ನಡಕ್ಕೆ ಬರ್ತಾರಾ(?) ಅನ್ನೋ ನಿರೀಕ್ಷೆ ಮೂಡಿದೆ. ಹೇಳಿ-ಕೇಳಿ ತಾರಕ್​ ತಾಯಿ ಕುಂದಾಪುರದವರು. ತಾರಕ್​​ ಕನ್ನಡ ಮಾತಾಡೋದನ್ನು ಕಲಿತ್ತಿದ್ದಾರೆ.. ಸ್ಯಾಂಡಲ್​ವುಡ್​​ನಲ್ಲಿ ಯಂಗ್​ ಟೈಗರ್​ಗೆ ಸಾಕಷ್ಟು ಸ್ನೇಹಿತರಿದ್ದಾರೆ. ಅಷ್ಟೆಲ್ಲಾ ಯಾಕೆ ಕನ್ನಡದ ಚಕ್ರವ್ಯೂಹ ಚಿತ್ರಕ್ಕೆ ತಾರಕ್​ ಹಾಡೊಂದನ್ನ ಹಾಡಿದರು.

ಪ್ಯಾನ್​ ಇಂಡಿಯಾ ಸಿನಿಮಾ ಪಾತ್ರಗಳಿಗೆ ತಕ್ಕಂತೆ ಬೇರೆ ಬೇರೆ ಇಂಡಸ್ಟ್ರಿ ಸ್ಟಾರ್ಸ್​​​ ಬೇರೆ ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸೋದನ್ನ ನೋಡಿದ್ದೇವೆ. ಸುದೀಪ್​ ತೆಲುಗಿನ ‘ಈಗ’ ಚಿತ್ರದಲ್ಲಿ ನಟಿಸಿದ್ದು, ಅಕ್ಷಯ್​ ಕುಮಾರ್​​ ತಮಿಳಿನ ರೋಬೊ ಸೀಕ್ವೆಲ್​​ನಲ್ಲಿ ನಟಿಸಿದ್ದು ಹೀಗೆ ಸಾಕಷ್ಟು ಉದಾಹರಣೆ ಸಿಗುತ್ತೆ. ಒಂದು ವೇಳೆ ಪ್ರಶಾಂತ್​ ನೀಲ್​, ಎನ್​ಟಿಆರ್​ ಜೊತೆಗೆ ಸಿನಿಮಾ ಮಾಡೋದಾದ್ರೆ, ಅವರನ್ನ ಕನ್ನಡಕ್ಕೆ ಕರ್ಕೊಂಡು ಬರ್ತಾರಾ(?) ಕಾದು ನೋಡಬೇಕು. ಕೆಲ ಪ್ರಶಾಂತ್​ ನೀಲ್ ಅಭಿಮಾನಿಗಳ ಮಹದಾಸೆ ಕೂಡ ಇದೇ ಆಗಿದೆ.

Recommended For You

About the Author: user

Leave a Reply

Your email address will not be published. Required fields are marked *