Top

ಚಿನ್ನದ ಹಾಲು ಕುಡಿಯಿರಿ, ಆರೋಗ್ಯ, ಸೌಂದರ್ಯ ವೃದ್ಧಿಸಿಕೊಳ್ಳಿ..

ಚಿನ್ನದ ಹಾಲು ಕುಡಿಯಿರಿ, ಆರೋಗ್ಯ, ಸೌಂದರ್ಯ ವೃದ್ಧಿಸಿಕೊಳ್ಳಿ..
X

ಕೆಲವರು ರಾತ್ರಿ ಮಲಗುವ ಸಮಯದಲ್ಲಿ ಹಾಲು ಕುಡಿಯುವುದನ್ನ ರೂಢಿ ಮಾಡಿಕೊಂಡಿರುತ್ತಾರೆ. ಪ್ಲೇನ್ ಹಾಲು, ಹಾಲಿಗೆ ಸಕ್ಕರೆ, ಅಥವಾ ಬಾದಾಮ್ ಪುಡಿಯನ್ನು ಸೇರಿಸಿ ಹಾಲು ಕುಡಿಯುತ್ತಾರೆ. ಆದ್ರೆ ಇದೆಲ್ಲದರ ಬದಲು ಚಿನ್ನದ ಹಾಲು ಕುಡಿದರೆ, ಆರೋಗ್ಯಕ್ಕೂ ಉತ್ತಮ ಸೌಂದರ್ಯ ವೃದ್ಧಿಗೂ ಸಹಕಾರಿ.

ಅರೇ ಏನಪ್ಪಾ ಇದು, ಚಿನ್ನದ ಹಾಲು ಅಂದ್ರೇನು..? ಇದು ಏನಾದ್ರೂ ಅಂಗಡೀಲಿ ಸಿಗೋ ಕಾಸ್ಟ್ಲೀ ಹಾಲಾ ಅಂತಾ ಶಾಕ್ ಆಗ್ಬೇಡಿ. ಆರೋಗ್ಯ ವೃದ್ಧಿಗೆ ಸಹಕಾರಿಯಾಗೋ ಚಿನ್ನದ ಗುಣ ಹೊಂದಿರುವ ಈ ಹಾಲನ್ನ ಚಿನ್ನದ ಹಾಲು ಅಂತಾನೇ ಕರಿಯೋದು. ಕೆಲ ಮಸಾಲೆ ಪದಾರ್ಥದೊಂದಿಗೆ, ಅರಿಶಿನ ಹಾಕಿ ಕುದಿಸಿದ ಹಾಲನ್ನು ಚಿನ್ನದ ಹಾಲು ಅಂತಾರೆ.

ಆಯುರ್ವೇದದ ಪ್ರಕಾರ ಈ ಚಿನ್ನದ ಹಾಲು ಆರೋಗ್ಯಕ್ಕೆ ಬಹುಉತ್ತಮವಂತೆ. ಭಾರತದಲ್ಲಷ್ಟೇ ಅಲ್ಲದೇ, ವಿದೇಶಗಳಲ್ಲಿಯೂ ಈ ಚಿನ್ನದ ಹಾಲು ತುಂಬಾನೇ ಫೇಮಸ್. ವಿದೇಶಿಗರು ಕೂಡ ಈಗ ಆಯುರ್ವೇದ ಸೂತ್ರವನ್ನು ಅನುಸರಿಸುತ್ತಿರುವುದರಿಂದ, ಗೋಲ್ಡನ್ ಮಿಲ್ಕ್ ಕುಡಿದು ಅದರ ಫಲಿತಾಂಶ ಪಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮಗಾದ ಅರೋಗ್ಯ ಲಾಭದ ಬಗ್ಗೆ ಹಂಚಿಕೊಂಡಿದ್ದಾರೆ.

ಚಿನ್ನದ ಹಾಲು ಮಾಡುವುದು ಹೇಗೆ..?

ಒಂದು ಗ್ಲಾಸ್ ಹಾಲನ್ನು ಕುದಿಯಲು ಇಡಿ. ಹಾಲು ಉಕ್ಕಿ ಬಂದ ಮೇಲೆ ಸಕ್ಕರೆ ಅಥವಾ ಬೆಲ್ಲ ಸೇರಿಸಿ(ಜೇನುತುಪ್ಪ ಕೂಡ ಬಳಸಬಹುದು), ಒಂದು ಸ್ಪೂನ್ ಹಸುವಿನ ತುಪ್ಪ, ಅರ್ಧ ಚಮಚ ಅರಿಶಿಣ, 5ರಿಂದ 6 ಎಸಳು ಕೇಸರಿ ದಳ, ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ ಕೊಂಚ ಕುದಿಸಿ, ಕುಡಿಯಿರಿ.

ಗೋಲ್ಡನ್‌ ಮಿಲ್ಕ್‌ನಿಂದಾಗುವ ಲಾಭವೇನು..?

ರಾತ್ರಿ ಮಲಗುವ ಮುನ್ನ ಚಿನ್ನದ ಹಾಲು ಕುಡಿಯುವುದರಿಂದ ನಿದ್ರಾಹೀನತೆಯಿಂದ ಮುಕ್ತಿ ಪಡೆಯಬಹುದು. ಅಲ್ಲದೇ, ಈ ಹಾಲಿನಲ್ಲಿ ಕ್ಯಾಸೀನ್ ಎಂಬ ಪ್ರೊಟೀನ್ ಇದ್ದು, ದಿನವಿಡಿ ಕೆಲಸದ ಒತ್ತಡದಿಂದ ಕಳೆದುಕೊಂಡ ಶಕ್ತಿಯನ್ನ ಪುನಃ ಗಳಿಸುವಲ್ಲಿ ಸಹಾಯಕವಾಗಿದೆ.

ಇದರಲ್ಲಿ ತುಪ್ಪ ಹಾಕಿರುವುದರಿಂದ ಮೂಳೆಗಳು ಗಟ್ಟಿಯಾಗುವುದಲ್ಲದೇ, ಕಾಲು ನೋವು, ಸಂಧಿವಾತ ಕಡಿಮೆಯಾಗುವುದು. ಇನ್ನು ಅರಿಶಿಣ, ಕೇಸರಿ ದಳವಿರುವುದರಿಂದ ಈ ಹಾಲಿನ ಸೇವನೆಯಿಂದ ಸೌಂದರ್ಯ ಕೂಡ ವೃದ್ಧಿಸುವುದು.

ನಿಮಗೆ ಕಫದ ಸಮಸ್ಯೆ ಇದ್ದಲ್ಲಿ, ಚಿನ್ನದ ಹಾಲಿನ ಸೇವನೆ ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದರಲ್ಲಿ ಕಾಳುಮೆಣಸಿನ ಪುಡಿ ಇದ್ದು, ಇದು ಕಫದ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿಯಾಗಿದೆ.

Next Story

RELATED STORIES