Top

ತಿಂದ್ರೆ ತಿಂತಾನೇ ಇರ್ಬೇಕು ಅನ್ನಿಸೋ ಗರಿ ಗರಿ ಮಸಾಲೆ ಚುರ್ಮುರಿ ರೆಸಿಪಿ..

ತಿಂದ್ರೆ ತಿಂತಾನೇ ಇರ್ಬೇಕು ಅನ್ನಿಸೋ ಗರಿ ಗರಿ ಮಸಾಲೆ ಚುರ್ಮುರಿ ರೆಸಿಪಿ..
X

ಸಂಜೆ ಟೀ ಟೈಮಲ್ಲಿ ಏನಾದ್ರು ತಿನ್ನೋಕ್ಕೆ ಇದ್ರೆ ಮಜಾ ಇರತ್ತೆ. ಅದ್ರಲ್ಲೂ ಕ್ರಿಸ್ಪಿ ತಿನಿಸುಗಳಂದ್ರೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಇಷ್ಟ. ಆದ್ರೆ ಪ್ರತಿದಿನ ಕರಿದ ತಿಂಡಿಗಳನ್ನ ತಿನ್ನೊಕ್ಕಾಗಲ್ಲ. ಹಾಗಾಗಿ ತಿನ್ನೋಕ್ಕೂ ಟೇಸ್ಟಿಯಾಗಿರ್ಬೇಕು, ಆರೋಗ್ಯಕ್ಕೂ ಒಳ್ಳೆಯದಿರ್ಬೇಕು ಅಂದ್ರೆ ಚುರ್ಮುರಿ ಪದಾರ್ಥ ಪರ್ಫೆಕ್ಟ್ ಆಗಿರತ್ತೆ.

ನಾವು ಸಾಮಾನ್ಯವಾಗಿ ಹೊರಗೆ ಚುರ್ಮುರಿ ತಿನಿಸು, ಬೇಲ್‌ಪುರಿ ತಿಂದಿರ್ತೀವಿ. ಉಪ್ಪು, ಖಾರ ಹಾಕಿ ಹುರಿದ ಮಂಡಕ್ಕಿಗೆ, ಸೌತೆಕಾಯಿ, ಈರುಳ್ಳಿ, ಟೊಮೆಟೋ, ಕೊತ್ತಂಬರಿ ಸೊಪ್ಪು, ಸ್ವಲ್ಪ ಮಸಾಲೆ ಪುಡಿ ಹಾಕಿ ಕೊಡ್ತಾರೆ. ಇದೇ ಟೇಸ್ಟಿ ಬೇಲ್ ಅಂತಾ ತಿಂದು ಬಿಡ್ತೀವಿ.

ಆದ್ರೆ ಇದಕ್ಕಿಂದ ರುಚಿಯಾಗಿ, ಇನ್ನೂ ಹಲವು ಪದಾರ್ಥಗಳನ್ನು ಸೇರಿಸಿ, ಬಾಯಿ ಚಪ್ಪರಿಸೋ ಹಾಗೆ, ತಿಂದ್ರೆ ಮತ್ತೆ ತಿಂತಾನೇ ಇರ್ಬೇಕು ಅನ್ನೋ ರೀತಿ ಮಸಾಲೆ ಚುರ್ಮುರಿನಾ ನಾವು ಮನೆಯಲ್ಲೇ ತಯಾರಿಸಬಹುದು. ಅದು ಕೇವಲ 10-15 ನಿಮಿಷದಲ್ಲಿ. ಹಾಗಾದ್ರೆ ಗರಿ ಗರಿ ಮಸಾಲೆ ಚುರ್ಮುರಿ ಮಾಡೋದು ಹೇಗೆ, ಅದಕ್ಕೆ ಏನೇನು ಪದಾರ್ಥ ಬೇಕು ಅನ್ನೋದನ್ನ ತಿಳಿಯೋಣ ಬನ್ನಿ.

ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್‌ ಮಂಡಕ್ಕಿ, ಹುರಿಯಲು 3 ಸ್ಪೂನ್ ಎಣ್ಣೆ, ಒಂದು ಚಿಕ್ಕ ಸ್ಪೂನ್ ಜೀರಿಗೆ, 10 ಎಸಳು ಕರಿಬೇವು, 10 ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುರಿ ಮಿಶ್ರಣ, 3 ಹಸಿಮೆಣಸಿನ ಕಾಯಿ, ಚಿಟಿಕೆ ಅರಿಶಿಣ, ಚಿಟಿಕೆ ಖಾರದ ಪುಡಿ, ಚಿಟಿಕೆ ಪೆಪ್ಪರ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು, ಒಂದು ಸ್ಪೂನ್ ಸಕ್ಕರೆ ಪುಡಿ.

ಮಸಾಲೆ ಮಿಶ್ರಣ: ಅರ್ಧ ಕಪ್ ಸೇವು, ಒಂದು ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೋ, ಸೌತೆಕಾಯಿ, ಸಣ್ಣಗೆ ತುರಿದುಕೊಂಡ ಕ್ಯಾರೇಟ್, ಕೊತ್ತಂಬರಿ ಸೊಪ್ಪಿನ ಮಿಶ್ರಣ, ಖಾರ ಹೆಚ್ಚು ಬೇಕಾದಲ್ಲಿ ಒಂದು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಸೇರಿಸಿಕೊಳ್ಳಿ. ಕೊಂಚ ಸಿಹಿಯಾದ ಹುಣಸೆ ಚಟ್ನಿ, ಪುದೀನಾ ಚಟ್ನಿ.

ಮಾಡುವ ವಿಧಾನ: ಒಂದು ಬಾಣಲೆಗೆ ಎಣ್ಣೆಹಾಕಿ, ಅದಕ್ಕೆ ಜೀರಿಗೆ, ಹಸಿಮೆಣಸು, ಕರಿಬೇವು, ಬೆಳ್ಳುಳ್ಳಿ, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುರಿ ಮಿಶ್ರಣ ಹಾಕಿ ಹುರಿಯಿರಿ. ಎಲ್ಲ ಚೆನ್ನಾಗಿ ಹುರಿದುಕೊಂಡ ಮೇಲೆ ಅದಕ್ಕೆ ಉಪ್ಪು, ಅರಿಶಿಣ, ಮೆಣಸಿನ ಪುಡಿ, ಪೆಪ್ಪರ್ ಪುಡಿ ಹಾಕಿ ಕೊಂಚ ಹುರಿದು, ಚುರ್ಮುರಿ, ಸಕ್ಕರೆ ಸೇರಿಸಿ ಚೆನ್ನಾಗಿ ಹುರಿಯಿರಿ. ಈಗ ಗರಿ ಗರಿ ಮಸಾಲೆ ಮಂಡಕ್ಕಿ ರೆಡಿ.

ಈ ತಿನಿಸನ್ನ ಗಾಳಿಯಾಡದ ಡಬ್ಬದಲ್ಲಿ ಇಟ್ಟು ವಾರಪೂರ್ತಿ ತಿನ್ನಬಹುದು. ಸಂಜೆ ಹೊತ್ತು ಬೇಲ್ ರೀತಿ ಮಾಡಿ ತಿನ್ನಬೇಕೆನ್ನಿಸಿದರೆ, ಈ ಮಂಡಕ್ಕಿಗೆ ಮೇಲೆ ನೀಡಿರುವ ಮಸಾಲೆ ಮಿಶ್ರಣವನ್ನ ಸೇರಿಸಿ ಬೇಲ್‌ಪುರಿ ಮಾಡಿ ತಿನ್ನಬಹುದು. ಪಿಕ್‌ನಿಕ್, ಟ್ರಿಪ್, ದೂರದ ಪ್ರಯಾಣ ಮಾಡುವಾಗ ಈ ತಿಂಡಿ ತಯಾರಿಸಿಕೊಂಡು ಒಯ್ಯಬಹುದು.

Next Story

RELATED STORIES