ಆಡಳಿತ ಪಕ್ಷದ ಸದಸ್ಯರಾಗಿ ಸಚಿವರಿಗೆ ಬಿಸಿಮುಟ್ಟಿಸಿದ ಲೆಹರ್​ ಸಿಂಗ್​ ಸಿರೋಯಾ

ಬೆಂಗಳೂರು: ರಾಜೀನಾಮೆ ನೀಡಿದ ಎಲ್ಲಾ 17 ಶಾಸಕರ ಫೋಟೋ ಇಟ್ಟು ಹಾರ ಹಾಕಿ ಗೌರವಿಸಬೇಕು ಎಂದು ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರು ಹೇಳಿದರು.

ವಿಧಾನಸೌಧದಲ್ಲಿ ನಡೆದ ವಿಧಾನ ಪರಿಷತ್​ ಕಲಾಪದಲ್ಲಿಂದು ಮಾತನಾಡಿದ ಅವರು, ಒಂದೂವರೆ ವರ್ಷದ ಅಪವಿತ್ರ ಸರ್ಕಾರ ಬೀಳಲು‌ ಕಾರಣರಾಗಿದ್ದಕ್ಕೆ ನಿಜಕ್ಕೂ ಅವರಿಗೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಈ ಮಾತು ಕೇಳುತ್ತಿದ್ದಂತೆ ಕಾಂಗ್ರೆಸ್​ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸರ್ಕಾರದಿಂದ ಯಾವುದೇ ಸಾಧನೆಯಾಗಿಲ್ಲ, ಸರ್ಕಾರವನ್ನು ಹೊಗಳಲು ನಾಚಿಕೆ ಆಗಲ್ವಾ ನಿಮಗೆ ಎಂದು ಕಿಡಿಕಾರಿದರು.

ಮತ್ತೆ ಮಾತು ಮುಂದುವರೆಸಿದ ಲೆಹನ್​ ಸಿಂಗ್​ ಅವರು, ಕಾಂಗ್ರೆಸ್, ಜೆಡಿಎಸ್​ನವರು ಇನ್ನು ಮುಂದೆ ಪ್ರತಿಪಕ್ಷದಲ್ಲಿ ಕೂರುವುದನ್ನು ರೂಢಿಸಿಕೊಳ್ಳಿ. ಮುಂದಿನ ಮೂರು ವರ್ಷ ಯಡಿಯೂರಪ್ಪ ಸರ್ಕಾರ ಭದ್ರವಾಗಿರಲಿದೆ ಎಂದರು.

ಸಿ.ಎಂ. ಇಬ್ರಾಹಿಂ ಭಾಷಣ ಪ್ರಸ್ತಾಪಿಸಿ, ಇಂದಿರಾಗಾಂಧಿ ವಿಚಾರವನ್ನು ಅನಗತ್ಯವಾಗಿ ಪ್ರಸ್ತಾಪಿಸಿದ್ದಾರೆ. ಸಿಎಎ ವಿದೇಶದಿಂದ ಬರುವ ಮುಸ್ಲಿಮರಿಗೆ ಅನ್ವಯವಾಗಲಿದೆ. ಇಲ್ಲಿನ ಮುಸ್ಲಿಮರಿಗೆ ಸಮಸ್ಯೆ ಆಗಲ್ಲ, ರಾಜ್ಯ, ಕೇಂದ್ರದ‌ ಮೋದಿ ಸರ್ಕಾರದ ನೀತಿ ಅನುಸರಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮಾತನಾಡಿ, ನೀವು ಬೇಗ ಮುಗಿಸಿ ಆಮೇಲೆ ಚಿತ್ರದುರ್ಗಕ್ಕೆ ಹೋಗಬೇಕಲ್ಲ ಎಂದು ಲೆಹರ್​ ಸಿಂಗ್​ ಅವರಿಗೆ ಹೇಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಲೆಹರ್​ ಸಿಂಗ್​ ಅವರು, ಇಲ್ಲ ನಾನು ರಾತ್ರಿ ಹೋಗ್ತೇನೆ ಎಂದಾಕ್ಷಣ ಸದನದ ಸದಸ್ಯರೆಲ್ಲರೂ ನಗೆಗಡಲಲ್ಲಿ ತೇಲಿತು.

ನಮ್ಮ ಸರ್ಕಾರ ಬಂದ ನಂತರ ಪ್ರವಾಹ ಬಂತು 3 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಸಿಎಂ ನೇತೃತ್ವದಲ್ಲಿ ಒಂದೊಂದು ಸಮಿತಿ ಮಾಡಬೇಕು. ಸಮರ್ಪಕ ಹಣ ಹಂಚಿಕೆಗೆ ಪ್ರಯತ್ನಿಸೋಣ ಎಂದು ಲೆಹರ್​ ಸಿಂಗ್ ಅವರು ತಮ್ಮ ವಿಶಿಷ್ಟ ಭಾಷಾ ಶೈಲಿಯಿಂದ ಸದನದ ಗಮನ ಸೆಳೆದರು.

ಆಡಳಿತ ಪಕ್ಷದ ಸಚಿವರಿಗೆ ಮಾತಿನ ಚಾಟಿ ಬೀಸಿದ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಅವರು, ಬೆಂಗಳೂರಿನಲ್ಲಿ ಇಂದು ಸಂಚಾರ ದಟ್ಟಣೆ ಹೆಚ್ಚಾಗಿದೆ ಇದರ ಬಗ್ಗೆ ಯಾರು ಚಿಂತಿಸುತ್ತಿಲ್ಲ, ಜನ ಸಾಮಾನ್ಯರು ಸಂಚಾರ ದಟ್ಟಣೆಯಿಂದ ತೀವ್ರ ತೊಂದರೆ ಅನುಭವಿಸುತ್ತಾರೆ. ಆದರೆ, ಸಚಿವರು ಟ್ರಾಫಿಕ್ ಫ್ರೀ ಮಾಡಿಕೊಂಡು ಎಸ್ಕಾರ್ಟ್ ಮೂಲಕ ಹೋಗುತ್ತಾರೆ. ಆದರೆ, ಜನಸಾಮಾನ್ಯರು ಗಂಟೆ ಗಟ್ಟಲೇ ಟ್ರಾಫಿಕ್ ನಲ್ಲಿ ಕಾಯಬೇಕು. ಶಾಸಕನಾಗಿ ನಾನೇ 45 ನಿಮಿಷ ಕಬ್ಬನ್ ಪಾರ್ಕ್ ಸಿಗ್ನಲ್​ ನಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೆ. ಇನ್ನು ಜನ ಸಾಮಾನ್ಯರ ಗತಿ ಏನಾಗಬೇಕು. ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಸುರೇಶ್ ಅವರನ್ನು ಸೇರಿಸಿಕೊಂಡೆ ಹೇಳುತ್ತಿದ್ದೇನೆ ಎಂದು ಆಡಳಿತ ಪಕ್ಷದ ಸದಸ್ಯರಾಗಿ ಸಚಿವರಿಗೆ ಲೆಹರ್ ಸಿಂಗ್ ಸಿರೋಯಾ​ ಅವರು ಬಿಸಿಮುಟ್ಟಿಸಿದರು.

Recommended For You

About the Author: user

Leave a Reply

Your email address will not be published. Required fields are marked *