Top

ಮ್ಯಾಂಗೋ ಮಟ್ಕಾ ಕುಲ್ಫಿ ಮಾಡೋದು ಎಷ್ಟು ಸುಲಭ ಗೊತ್ತಾ..?

ಮ್ಯಾಂಗೋ ಮಟ್ಕಾ ಕುಲ್ಫಿ ಮಾಡೋದು ಎಷ್ಟು ಸುಲಭ ಗೊತ್ತಾ..?
X

ಬೇಸಿಗೆಯಲ್ಲಿ ಬಿಸಿಲಿನ ದಾಹ ತೀರಿಸಿಕೊಳ್ಳೋಕ್ಕೆ ಜನ ಎಳನೀರು, ನಿಂಬೆ ಶರಬತ್ತು, ಫ್ರೆಶ್ ಜ್ಯೂಸ್, ಹಣ್ಣು- ಹಂಪಲುಗಳ ಮೊರೆ ಹೋಗ್ತಾರೆ. ಯಾಕಂದ್ರೆ ಅವ್ರಿಗೆ ಈ ಎಲ್ಲ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು, ದೇಹವನ್ನು ತಂಪಾಗಿರಿಸಲು, ಬಿಸಿಲ ಝಳದಿಂದ ಕಾಪಾಡಲು ಸಹಕಾರಿಯಾಗಿದೆ ಅಂತಾ ಗೊತ್ತು. ಆದ್ರೆ ಮಕ್ಕಳಿಗೆ ಇದೆಲ್ಲಾ ಕೊಟ್ರೆ ತಿನ್ನೋಕ್ಕೆ ಹಿಂದುಮುಂದು ನೋಡ್ತಾರೆ. ನೀವು ಏನೇ ಅಂದ್ರು ಹಣ್ಣು ಹಂಪಲುಗಳು ಮಕ್ಕಳಿಗೆ ರುಚಿಸೋದೇ ಇಲ್ಲ.

ಅದೂ ಅಲ್ಲದೇ ಈಗೇನಿದ್ರೂ ಜಂಕ್‌ಫುಡ್ ಜಮಾನ. ಹಣ್ಣು- ಹಂಪಲು, ತರಕಾರಿಗಿಂತ ಹೊರಗೆ ಸಿಗೋ ತಂಪು ಪಾನೀಯ, ಐಸ್‌ಕ್ರೀಮ್, ಕುಲ್ಫಿ, ಫಾಲೂದಾಗಳ ಮೇಲೇನೆ ಮಕ್ಕಳ ಕಣ್ಣಿರತ್ತೆ. ಅದಕ್ಕೆ ತಾಯಂದಿರು ಮನೆಯಲ್ಲೇ ಇದನ್ನೆಲ್ಲ ತಯಾರಿಸೋದನ್ನ ಕಲಿತರೆ ಒಳ್ಳೆಯದು. ಖರ್ಚು ಕಮ್ಮಿಯಾಗತ್ತೆ, ಮಕ್ಕಳಿಗೆ ಆರೋಗ್ಯಕರ ತಿನಿಸು ಕೊಟ್ಟ ಹಾಗೆಯೂ ಆಗತ್ತೆ.

ಈಗ ಬೇಸಿಗೆಗಾಲಾನೂ ಹತ್ತಿರ ಬಂತು. ಮಾವಿನ ಹಣ್ಣಿನ ಸೀಸನ್ನೂ ಬಂತು. ಹಾಗಾಗಿ ಮಾವಿನ ಹಣ್ಣಿನ ಕುಲ್ಫಿ ಮತ್ತು ಮಡಿಕೆ ಉಪಯೋಗಿಸಿ ಮ್ಯಾಂಗೋ ಮಟ್ಕಾ ಕುಲ್ಫಿ ಮಾಡೋದು ಹೇಗೆ ಅನ್ನೋದನ್ನ ಕಲಿಯೋಣ ಬನ್ನಿ.

ಬೇಕಾಗುವ ಸಾಮಗ್ರಿ: 3/4 ಕಪ್‌ ಮಾವಿನ ಹಣ್ಣಿನ ಹೋಳುಗಳು, ಅರ್ಧ ಕಪ್ ಹಾಲು, ಅರ್ಧ ಕಪ್ ಕ್ರೀಮ್, ಅರ್ಧ ಕಪ್ ಕಂಡೆನ್ಸ್ ಮಿಲ್ಕ್, ಚಿಟಿಕೆ ಏಲಕ್ಕಿ ಪುಡಿ, 5-6 ಎಸಳು ಕೇಸರಿ ದಳ ನೆನೆಸಿದ ಒಂದು ಚಿಕ್ಕ ಸ್ಪೂನ್ ನೀರು, ಗಾರ್ನಿಷ್ ಮಾಡಲು ಸಣ್ಣಗೆ ಹೆಚ್ಚಿದ ಬಾದಾಮಿ, ಗೋಡಂಬಿ, ಪಿಸ್ತಾ, 5-6 ಕೇಸರಿ ದಳ. ಕುಲ್ಫಿ ಮಿಶ್ರಣ ಹಾಕಲು ಚಿಕ್ಕ ಮಡಿಕೆ, ಕುಲ್ಫಿ ಟ್ರೇ.

ಮಾಡುವ ವಿಧಾನ: ಮಾವಿನ ಹೋಳುಗಳು, ಹಾಲು, ಕ್ರೀಮ್, ಕಂಡೆನ್ಸ್ ಮಿಲ್ಕ್, ಏಲಕ್ಕಿ ಪುಡಿ, ಕೇಸರಿ ನೀರು ಸೇರಿಸಿ ರುಬ್ಬಿ, ಸಾಫ್ಟ್, ಸ್ಮೂತ್ ಆದ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಮಡಿಕೆಗೆ ಮತ್ತು ಕುಲ್ಫಿ ಟ್ರೇಗೆ ತುಂಬಿಸಿ, ಇದರ ಮೇಲೆ ಬಾದಾಮಿ, ಗೋಡಂಬಿ, ಪಿಸ್ತಾ, ಕೇಸರಿ ದಳಗಳನ್ನು ಹಾಕಿ ಗಾರ್ನಿಷ್ ಮಾಡಿ, ಪ್ಲಾಸ್ಟಿಕ್‌ನಿಂದ ಕವರ್ ಮಾಡಿ, 8 ತಾಸುಗಳ ಕಾಲ ಫ್ರೀಜರ್‌ನಲ್ಲಿರಿಸಿ, ನಂತರ ಸವಿಯಲು ಕೊಡಿ.

ಈ ರೆಸಿಪಿಯಲ್ಲಿ ಬೇಕಾದ್ರೆ ಚೀಯಾ ಸೀಡ್ಸ್ ಅಂದ್ರೆ ಕಾಮ ಕಸ್ತೂರಿ ಬೀಜಗಳನ್ನೂ ಬಳಸಿಕೊಳ್ಳಬಹುದು. ಕುಲ್ಫಿ ತಯಾರಿಸುವ 30 ನಿಮಿಷ ಮುನ್ನ ಹಾಲಲ್ಲಿ ಅಥವಾ ನೀರಲ್ಲಿ ಒಂದು ಸ್ಪೂನ್ ಚಿಯಾ ಸೀಡ್ಸ್ ನೆನೆಸಿಡಿ. ನಂತರ ಕುಲ್ಫಿ ಮಿಶ್ರಣಕ್ಕೆ ನೆನೆಸಿದ ಚೀಯಾ ಸೀಡ್ಸ್ ಹಾಕಿ ಕುಲ್ಫಿ ತಯಾರಿಸಬಹುದು. ಚೀಯಾ ಸೀಡ್ಸ್ ದೇಹಕ್ಕೆ ತಂಪು ಮಾತ್ರವಲ್ಲದೇ, ತೂಕ ಇಳಿಸುವುದರಲ್ಲಿಯೂ ಸಹಕಾರಿಯಾಗಿದೆ.

Next Story

RELATED STORIES