ಮನೆಯಲ್ಲೇ ತಯಾರಿಸಿ ರುಚಿಕರ ಮ್ಯಾಂಗೋ ಹಲ್ವಾ..

ಒಂದೆಡೆ ಬೇಸಿಗೆ ಬಂತು, ಬಿಸಿಲ ಝಳ ಹೆಚ್ಚಾಯ್ತು, ಬೇಸಿಗೆಯಲ್ಲಿ ಹೇಗಪ್ಪ ಜೀವನ ಎಂಬ ಟೆನ್ಷನ್. ಇನ್ನೊಂದೆಡೆ ಹಣ್ಣುಗಳ ರಾಜ ಮಾವನ್ನು ಸವಿಯಬಹುದೆಂಬ ಸಂಭ್ರಮ. ಈ ರಾಜನ ಸಾಮ್ರಾಜ್ಯ ಒಂದಾ..? ಎರಡಾ..? ರಸಪುರಿ, ಮಲಗೋವಾ, ಬಾದಾಮಿ, ಆಪುಸ್,.. ಹೀಗೆ ವೆರೈಟಿ ವೆರೈಟಿ ಹಣ್ಣುಗಳನ್ನ ಸವಿಯೋದೇ ಒಂದು ಖುಷಿ.
ಮಾವಿನ ಹಣ್ಣನ್ನ ಸವಿಯೋದ್ರ ಜೊತೆಗೆ, ಅದರಿಂದ ಮಾಡುವ ಖಾಧ್ಯವನ್ನು ಕೂಡ ಮನೆಯಲ್ಲೇ ಮಾಡಿ ಸವಿಯಬಹುದು. ಮಾವಿನ ಹಲವು ಖಾದ್ಯಗಳಲ್ಲಿ ಹಲ್ವಾ ಕೂಡ ಒಂದು. ಈ ಹಲ್ವಾ ರೆಸಿಪಿಯನ್ನು ಹೇಗೆ ಮಾಡೋದು ಅನ್ನೋದನ್ನ ನಾವಿವತ್ತು ಪರಿಚಯಿಸ್ತೀವಿ. ಸಾಧ್ಯವಾದ್ರೆ ಮನೆಯಲ್ಲಿ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿ: 2 ಕಪ್ ನೀರು, 350 ಗ್ರಾಂ ಮಾವಿನ ಹಣ್ಣು, ಅರ್ಧ ಕಪ್ ಕಾರ್ನ್ಫ್ಲೋರ್, 5 ಸ್ಪೂನ್ ತುಪ್ಪ, 160 ಗ್ರಾಂ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, ಅವಶ್ಯಕತೆ ಇದ್ದಲ್ಲಿ ಒಣ ಹಣ್ಣುಗಳ ಮಿಶ್ರಣ.
ಮಾಡುವ ವಿಧಾನ: ಮಾವಿನ ಹಣ್ಣಿನ ಹೋಳುಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬೌಲ್ಗೆ ಈ ಮ್ಯಾಂಗೋಪಲ್ಪ್ ಹಾಕಿ ಇದರೊಂದಿಗೆ ಅರ್ಧಕಪ್ ಕಾರ್ನ್ಫ್ಲೋರ್ ಮತ್ತು ಒಂದು ಕಪ್ ನೀರು ಸೇರಿಸಿ, ಚೆನ್ನಾಗಿ ಮಿಕ್ಸ್ ಆಗುವಂತೆ ಕದಡಿ, ಪಕ್ಕಕ್ಕಿರಿಸಿ.
ಒಂದು ಬಾಣಲೆಗೆ ಒಂದು ಕಪ್ ನೀರು ಮತ್ತು 160 ಗ್ರಾಂ ಸಕ್ಕರೆ ಸೇರಿಸಿ ಸಕ್ಕರೆ ಕರಗುವವರೆಗೂ ಕುದಿಸಿ. ಇದಕ್ಕೆ ಮೊದಲೇ ಮಾಡಿಟ್ಟುಕೊಂಡ ಮಾವಿನ ಹಣ್ಣಿನ ಮಿಶ್ರಣ ಸೇರಿಸಿ. ಒಂದೊಂದು ಟೇಬಲ್ ಸ್ಪೂನ್ ತುಪ್ಪ ಹಾಕುತ್ತ, ನಿಧಾನಕ್ಕೆ ಮಿಕ್ಸ್ ಮಾಡಿ. (ಯಾವುದೇ ಕಾರಣಕ್ಕೂ ಕೈಯಾಡಿಸುವುದನ್ನು ನಿಲ್ಲಿಸಬಾರದು. ಇಲ್ಲವಾದರೆ ಹಲ್ವಾ ಮಿಶ್ರಣ ಬಾಣಲಿಗೆ ಅಂಟಿಕೊಂಡು ಹಲ್ವಾ ರುಚಿ ಹಾಳಾಗುವ ಸಾಧ್ಯತೆ ಇರುತ್ತದೆ). ಹದವಾದ ಹಲ್ವಾ ಮಿಶ್ರಣ ರೆಡಿಯಾದ ಮೇಲೆ, ಚಿಟಿಕೆ ಏಲಕ್ಕಿ ಪುಡಿ ಸೇರಿಸಿ.
ಈ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ, ಅದರ ಮೇಲೆ ಒಣಹಣ್ಣುಗಳನ್ನು ಹಾಕಿ ಒಂದೂವರೆ ಗಂಟೆ ಸೆಟ್ ಆಗಲು ಬಿಡಿ. ಈಗ ಚೌಕಾಕಾರದಲ್ಲಿ ಹಲ್ವಾ ಕತ್ತರಿಸಿ, ಸರ್ವ್ ಮಾಡಿ. ಬರ್ತ್ಡೇ ಪಾರ್ಟಿ, ಪಿಕ್ನಿಕ್, ಟೂರ್ ಹೋಗುವಾಗ ಅಥವಾ ಮನೆಗೆ ಅತಿಥಿಗಳು ಬಂದಾಗ ಥಟ್ ಅಂತಾ ಸ್ವೀಟ್ ಮಾಡೋದಿದ್ರೆ ಈ ರೀತಿ ಹಲ್ವಾ ಮಾಡಿಕೊಡಿ.