ಮದುವೆ ಬೇಕಾದ್ರೆ ಆಮೇಲೇ ಆಗ್ಬಹುದು, ವೋಟ್ ಹಾಕೋಕೆ ಆಗುತ್ತಾ – ಮಧುಮಗ

ದೆಹಲಿ: ಇಂದು ವೋಟಿಂಗ್ ತುಂಬಾ ನಿರಸವಾಗಿತ್ತು. ಯಾಕೊ ವೋಟ್‌ ಮಾಡಲು ರಾಷ್ಟ್ರ ರಾಜಧಾನಿಯ ಹೆಚ್ಚಿನ ಸಂಖ್ಯೆಯ ಮತದಾರರು ಉತ್ಸಾಹ ತೊರಲಿಲ್ಲ. ಆದ್ರೂ ಗಣ್ಯರು, ರಾಜಕೀಯ ನಾಯಕರು ಮತಹಾಕಿದ್ದಾರೆ. ಕೆಲವು ವಿಶೇಷತೆಗಳೂ ನಡೆದಿವೆ.

ದೆಹಲಿ ಎಲೆಕ್ಷನ್ ವೋಟಿಂಗ್ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದೆ. ಜನಸಾಮಾನ್ಯರು ಮಾತ್ರವಲ್ಲದೆ, ರಾಷ್ಟ್ರರಾಜಧಾನಿಯಲ್ಲಿ ನೆಲೆಸಿರೋ ಉನ್ನತ ಅಧಿಕಾರಿಗಳು, ರಾಜಕೀಯ ನಾಯಕರು ಮತಗಟ್ಟೆಗೆ ಆಗಮಿಸಿದ್ದರು. ಬೆಳ್ ಬೆಳಿಗ್ಗೆಯೇ ಸಿಎಂ ಅರವಿಂದ ಕೇಜ್ರಿವಾಲ್ ಕುಟುಂಬ ಸಮೇತ ಬಂದು ವೋಟ್ ಹಾಕಿದರು.

ಉತ್ತರ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿ ಮತ ಚಲಾಯಿಸಿದ ಕೇಜ್ರಿವಾಲ್‌ಗೆ ಮೂರನೇ ಬಾರಿಗೆ ಆಪ್‌ ಸರ್ಕಾರ ರಚಿಸೋ ವಿಶ್ವಾಸ ಇದೆ. ಪಾಂಡವನಗರದಲ್ಲಿ ವೋಟ್‌ ಹಾಕಿದ ಡಿಸಿಎಂ ಮನೀಶ್ ಸಿಸೋಡಿಯಾ ಕೂಡ, ಆಪ್‌ಗೆ ಬಹುಮತ ಬರೋ ನಂಬಿಕೆಯಲ್ಲಿದ್ದಾರೆ.

ಹಾಗೆಯೇ, ಸೋನಿಯಾ ಗಾಂಧಿ ಕುಟುಂಬ ವೋಟ್ ಮಾಡ್ತು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪತಿ ರಾಬರ್ಟ್‌ ವಾದ್ರಾ ಸೇಂಟ್‌ ಕೊಲಂಬ್ಸ್‌ ಶಾಲೆಯಲ್ಲಿ ಹಕ್ಕು ಚಲಾಯಿಸಿದ್ರು. ಪ್ರಿಯಾಂಕಾ ವಾದ್ರಾ ಪುತ್ರ ರೈಹಾನ್ ವಾದ್ರಾ ಮೊಗದಲ್ಲಿ ಮೊದಲ ಬಾರಿಗೆ ಸಾಂವಿಧಾನಿಕ ಹಕ್ಕು ಚಲಾಯಿಸಿದ ಖುಷಿ ಇತ್ತು.

ಔರಂಗಜೇಬ್ ಲೇನ್‌ನ ಬೂತ್‌ನಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರು ಪುತ್ರಿ ಪ್ರತಿಭಾ ಜೊತೆ ಬಂದು ಸಾಂವಿಧಾನಿಕ ಹಕ್ಕು ಚಲಾಯಿಸಿದ್ರು. ಇನ್ನು, ವಿದೇಶಾಂಗ ಸಚಿವ ಜೈಶಂಕರ್, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ವೋಟ್ ಮಾಡಿದ್ರು. 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಅಂತ ನನ್ನ SIXTH ಸೆನ್ಸ್‌ ಹೇಳ್ತಿದೆ ಎಂದಿದ್ದಾರೆ ತಿವಾರಿ.

ನಿರ್ಮಾಣ ಭವನ ಬೂತ್‌ನಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನಿಲ್ ಆರೋರಾ, ಗ್ರೇಟರ್ ಕೈಲಾಶ್ ಬೂತ್‌ನಲ್ಲಿ ದೆಹಲಿ ಲೆಫ್ಟಿನೆಂಟ್ ಗರ್ವನರ್ ಅನಿಲ್ ಬೈಜಲ್ ದಂಪತಿ ಮತಚಲಾಯಿಸಿದ್ರು. ಕೃಷ್ಣಾನಗರದ ರತನ್ ದೇವಿ ಶಾಲೆಯಲ್ಲಿ ತಾಯಿಯೊಂದಿಗೆ ಆಗಮಿಸಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ದನ್‌ ಮತದಾನ ಮಾಡಿದ್ರು.

ಇನ್ನು, ಆಪ್‌ನಿಂದ ಕಾಂಗ್ರೆಸ್‌ಗೆ ಜಿಗಿದು ಚಾಂದನಿ ಚೌಕ್‌ ಕ್ಷೇತ್ರದಿಂದ ಕಣಕ್ಕಿಳಿದಿರೋ ಅಲ್ಕಾ ಲಂಬಾ, ಟಾಗೋರ್‌ ಗಾರ್ಡನ್‌ ಮತಗಟ್ಟೆ ಸಂಖ್ಯೆ 161ರಲ್ಲಿ ವೋಟ್‌ ಮಾಡಿದ್ರು. ಈ ವೇಳೆ ತಮ್ಮ ಮಗನ ಬಗ್ಗೆ ಅವಹೇಳನವಾಗಿ ಮಾತಾಡಿದ ಆಪ್ ಕಾರ್ಯಕರ್ತನ ಕೆನ್ನೆಗೆ ಬಾರಿಸಲು ಮುಂದಾದ್ರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮತ್ತೊಂದು ವಿಶೇಷ ಅಂದರೆ, ವಧುಮಗನೊಬ್ಬ ಕಲ್ಯಾಣಮಂಟಪಕ್ಕೆ ಹೋಗೋ ಮೊದಲು ಮತಗಟ್ಟೆಗೆ ಬಂದು ವೋಟ್‌ ಮಾಡಿ, ಮತದಾನ ಮಹತ್ವದ ಸಂದೇಶ ಸಾರಿದ್ರು. ಮದುವೆ ಬೇಕಾದ್ರೆ ಆಮೇಲೇ ಆಗ್ಬಹುದು, ವೋಟ್ ಹಾಕೋಕೆ ಆಗುತ್ತಾ ಅಂತಾರೆ ಮಧುಮಗ.

ಮಧುಮಗ ಮಾತ್ರವಲ್ಲ, ದೆಹಲಿಯ ಹಿರಿಯ ಮತದಾರರಾದ 111 ವರ್ಷದ ಕಲಿತಾರಾ ಮಂಡಲ್ ಮತ ಚಲಾಯಿಸಿದರು. ಸಿ.ಆರ್.ಪಾರ್ಕ್ ಕ್ಷೇತ್ರದ ಮತಗಟ್ಟೆಗೆ ಕುಟುಂಬದವರೊಂದಿಗೆ ಬಂದು ವೋಟ್‌ ಹಾಕಿದ್ರು. ಆಗ್ಲೋ, ಈಗ್ಲೋ ಸಾಯೋ ವೃದ್ಧೆಯೇ ಬಂದು ವೋಟ್ ಹಾಕಿದ್ರೂ ದೇಶದ ಭವಿಷ್ಯ ಬದಲಿಸಬೇಕಾದ ಯುವಜನತೆ ಮಾತ್ರ ವೋಟ್‌ ಹಾಕಲು ಉತ್ಸಾಹ ತೋರಿಸಿಲ್ಲ. ಇದು ಪ್ರಜಾಪ್ರಭುತ್ವದ ದುರಂತವೇ ಸರಿ. ಈ ಬಾರಿ ದೆಹಲಿಯಲ್ಲಿ ಹೇಳಿಕೊಳ್ಳುವಂತಹ ಮತದಾನ ಆಗಿಲ್ಲ.

ಈ ಮಧ್ಯೆ, ಬಾಲಿವುಡ್ ನಟಿ ತಾಪ್ಸಿ ಪನ್ನು ದೆಹಲಿಯಲ್ಲಿ ಮತದಾನ ಮಾಡಿರೋದಕ್ಕೆ ಆಕ್ಷೇಪಿಸಿದ ಟ್ವಿಟಿಗರ ವಿರುದ್ಧ ತಿರುಗಿಬಿದ್ದಿದ್ದಾರೆ. ಟ್ವಿಟರ್‌ನಲ್ಲಿ ಕುಟುಂಬದವರೊಂದಿಗೆ ಮತದಾನ ಮಾಡಿದ ಫೋಟೋ ಹಾಕಿದ್ದರು. ಇದಕ್ಕೆ ಟ್ವಿಟಿಗರೊಬ್ಬರು, ನೀವಿನ್ನೂ ಮುಂಬೈಗೆ ತಮ್ಮ ಹೆಸರು ವರ್ಗಾಯಿಸಿಲ್ಲವೇ. ಕೆಲಸ ಮಾಡ್ತಿರೋದು ಮುಂಬೈನಲ್ಲಿ ಅಲ್ಲವೆ ಎಂದು ಪ್ರಶ್ನಿಸಿದ್ದರು. ಇಷ್ಟಕ್ಕೆ ಸಿಟ್ಟಾದ ತಾಪ್ಸಿ, ದೆಹಲಿಯಲ್ಲಿಯೂ ವಾಸ ಮಾಡ್ತೀದ್ದೇನೆ. ಮುಂಬೈನಲ್ಲೂ ನೆಲೆಸಿದ್ದೇನೆ. ನನ್ನ ಪೌರತ್ವ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಅಂತ ಖಾರವಾಗಿ ತಿರುಗೇಟು ಕೊಟ್ಟಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *