ಮಂಗಳೂರಿನಲ್ಲಿ ಸಂಘಟನೆಗಳಿಂದ ನಾಳೆ ಬೃಹತ್ ಸಮಾವೇಶ..!?

ಮಂಗಳೂರು: ಪೌರತ್ವ ವಿಚಾರದಲ್ಲಿ ರಕ್ತಪಾತಕ್ಕೆ ಸಾಕ್ಷಿಯಾಗಿದ್ದ ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಗಳು ನಾಳೆ ಬೃಹತ್ ಸಮಾವೇಶ ಆಯೋಜಿಸಿವೆ. ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಡಿಸೆಂಬರ್ 19ರ ಹಿಂಸಾಚಾರ, ಗೋಲಿಬಾರ್, ಕರ್ಫ್ಯೂ ಘಟನೆಯಿಂದ ಬೆಂದು ಹೋಗಿದ್ದ ಮಂಗಳೂರಿನಲ್ಲಿ ಮತ್ತೆ ಪೌರತ್ವ ಕಾಯ್ದೆಯ ಬಿಸಿ ಕಾಣಿಸಿಕೊಂಡಿದೆ. ವಿವಿಧ ಮುಸ್ಲಿಂ ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ನಾಳೆ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಪೌರತ್ವ ಬಿಸಿಯಿಂದಾಗಿ ಸಮಾವೇಶ ಶಕ್ತಿ ಪ್ರದರ್ಶನವಾಗಿ ಮಾರ್ಪಡುವ ಸಾಧ್ಯತೆಯಿದೆ. ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ನಗರ ಹೊರವಲಯದ ಅಡ್ಯಾರ್ ಬಳಿ ಭಾರೀ ಸಿದ್ಧತೆ ಮಾಡಲಾಗಿದೆ.

ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇರುವುದರಿಂದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಕೆಎಸ್‌ಆರ್‌ಪಿ, ಸಿಎಆರ್, ಆರ್‌ಎಎಫ್ ತುಕಡಿ ಕರೆಸಲಾಗಿದ್ದು, ಮಂಗಳೂರಿನಲ್ಲಿ 3,800 ಪೊಲೀಸರು ಬೀಡುಬಿಟ್ಟಿದ್ದಾರೆ. ಇದಲ್ಲದೆ, ಆಸುಪಾಸಿನ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.

ಗೋಲಿಬಾರ್‌ನಿಂದಾಗಿ ಪೊಲೀಸರ ವಿರುದ್ಧ ಭಾರೀ ಆಕ್ರೋಶ ಕೇಳಿಬಂದಿದೆ. ಇದರಿಂದಾಗಿ ಮಂಗಳೂರು ನಗರದ ಒಳಗೆ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದರು. ನಂತರ ಜಿಲ್ಲೆಯ ವಿವಿಧ ಕಡೆ ಮುಸ್ಲಿಂ ಸಂಘಟನೆಗಳು ಪ್ರತಿಭಟನಾ ಸಮಾವೇಶ ಏರ್ಪಡಿಸಿ, ಮೂಲೆ ಮೂಲೆಯ ಯುವಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದವು. ಇದೀಗ ಕೊನೆಯದಾಗಿ ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಬೃಹತ್ ಮೈದಾನದಲ್ಲಿ ಸಮಾವೇಶ ಏರ್ಪಡಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡಿನಿಂದಲೂ ಜನ ಆಗಮಿಸಲಿದ್ದಾರೆ. ಹೀಗಾಗಿ ನಾಳೆ ಮಂಗಳೂರಿನ ವಾಹನ ಸಂಚಾರ ಬಹುತೇಕ ಅಸ್ತವ್ಯಸ್ತ ಆಗುವ ಸಾಧ್ಯತೆಯಿದೆ.

ಒಂದೆಡೆ ಶಕ್ತಿ ಪ್ರದರ್ಶನ, ಮತ್ತೊಂದೆಡೆ ಕೇಂದ್ರ ಸರ್ಕಾರದ ವಿರುದ್ಧ ಒತ್ತಡ ಹೇರುವ ನಿಟ್ಟಿನಲ್ಲಿ ಪ್ರತಿಭಟನಾ ಸಮಾವೇಶ ನಡೆಯುತ್ತಿದೆ. ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸರಿಗೆ ಸವಾಲಾಗಲಿದೆ.

Recommended For You

About the Author: user

Leave a Reply

Your email address will not be published. Required fields are marked *