ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಮುಂದುವರಿದ ಕಸರತ್ತು…ದೆಹಲಿಯಲ್ಲಿ ಸಿದ್ದರಾಮಯ್ಯ..!

 ದೆಹಲಿ: ಕಳೆದ ಒಂದು ತಿಂಗಳಿಂದ  ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದ ಹೈಕಮಾಂಡ್, ಕೊನೆಯಲ್ಲಿ ಸಿದ್ದರಾಮಯ್ಯ ಮಾತು ಕೇಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರೆಯಲು ನಿರ್ಧಾರಿಸಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬುಲಾವ್ ಮೇರೆಗೆ ದೆಹಲಿಯಲ್ಲಿ ಬೀಡುಬಿಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇಂದು ಸೋನಿಯಾಗಾಂಧಿ ಅವರನ್ನು ಮೀಟ್ ಮಾಡಿ ಚರ್ಚಿಸಲಿದ್ದಾರೆ.

ಉಪಚುನಾವಣಾ ಸೋಲಿನ ನೈತಿಕ ಹೊಣೆಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರೂ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಹೈ ಕಮಾಂಡ್‌ ಜೊತೆಗೆ ಸಿದ್ದರಾಮಯ್ಯ ಭೇಟಿ ನಡೆದಿಲ್ಲ.

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿಕೆ ಶಿವಕುಮಾರ್‌ ಹಾಗೂ ಎಂಬಿ ಪಾಟೀಲ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಬಹುತೇಕ ಡಿ.ಕೆ ಶಿವಕುಮಾರ್​​ಗೆ ಕೆಪಿಸಿಸಿ ಪಟ್ಟ ಕಟ್ಟಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಂಬಿ ಪಾಟೀಲ್‌ ಹೆಸರೂ ಮುನ್ನಲೆಗೆ ಬಂದಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಕಸರತ್ತು ಗೊಂದಲಕ್ಕೆ ಕಾರಣವಾಗಿತ್ತು.

ಇದೀಗ ಕೊನೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಆಯ್ಕೆ ಅಂತಿಮಗೊಳಿಸುವ ವಿಚಾರವಾಗಿ ಸಿದ್ದರಾಮಯ್ಯರಿಗೆ ಹೈಕಮಾಂಡ್‌ ಬುಲಾವ್ ನೀಡಿದೆ.

ಇಂದು ಸಿದ್ದರಾಮಯ್ಯ ಜೊತೆ ಸೋನಿಯಾಗಾಂಧಿ ಚರ್ಚೆ ನಡೆಸಲಿದ್ದಾರೆ. ಇನ್ನು ಡಿಕೆಶಿಗೂ ಹೈಕಮಾಂಡ್ ನಿಂದ ಕರೆ ಬಂದಿದ್ದು ಇಂದು ದೆಹಲಿಗೆ ಹಾರಲಿದ್ದಾರೆ. ಒಂದು ತಿಂಗಳಿಂದ ನಡೆದ ಸರ್ಕಸ್ ಗೆ ಇಂದು ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆಯುವ ಸಾಧ್ಯತೆಯಿದೆ. ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಅವರೇ ಮುಂದುವರಿಯುವಂತೆ ಹೈಕಮಾಂಡ್ ಸೂಚಿಸುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಡಿಕೆ ಶಿವಕುಮಾರ್ ಅಥವಾ ಎಂಬಿ ಪಾಟೀಲ್‌ಗೆ ನೀಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ದೆಹಲಿ ಭೇಟಿ ಕುತೂಹಲ ಕೆರಳಿಸಿದೆ.

Recommended For You

About the Author: user

Leave a Reply

Your email address will not be published. Required fields are marked *