‘ವಿರಾಟ್​’ ರೂಪಕ್ಕೆ ಸಚಿನ್, ಪಾಂಟಿಂಗ್ ದಾಖಲೆ ಉಡೀಸ್.!

ಕೊಲ್ಕತ್ತಾ: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರತದ ಕ್ರಿಕೆಟ್ ಕಾಶಿ ಕೋಲ್ಕತ್ತಾದ ಈಡನ್ ಅಂಗಳದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಶತಕ ಸಿಡಿಸಿ ಹಲವಾರು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡರು.

ಮೊದಲ ದಿನದಾಟದ ಪಂದ್ಯದಲ್ಲಿ ಆಪಾದ್ಬಂಧವನಾಗಿ ಬಂದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಜೊತೆ ಇನ್ನಿಂಗ್ಸ್ ಕಟ್ಟಿ ತಂಡದ ಕುಸಿತವನ್ನ ತೆಡೆದಿದರು. ದಿನದಾಟದ ಅಂತ್ಯದವರೆಗೂ ಆಡಿದ ವಿರಾಟ್ ಅರ್ಧ ಶತಕ ಸಿಡಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು.

ಎರಡನೇ ದಿನದಾಟದ ಪಂದ್ಯದಲ್ಲಿ ರಹಾನೆ ಜೊತೆ ಬ್ಯಾಟಿಂಗ್ ಮುಂದುವರೆಸಿದ ವಿರಾಟ್ ಬಾಂಗ್ಲಾ ಬೌಲಿಂಗ್ ಅಟ್ಯಾಕನ್ನು ಧೂಳಿಪಟ ಮಾಡಿದರು. ರಹಾನೆ ಜೊತೆ 99 ರನ್​ಗಳ ಜೊತೆಯಾಟ ಆಡಿದ ಕೊಹ್ಲಿ ಬೌಂಡರಿಗಳ ಸುರಿಮಳೆಗೈದರು.

ಬಾಂಗ್ಲಾ ಬೌಲರ್ಸ್​ಗಳ ಬೆವರಿಳಿಸಿದ ಕಿಂಗ್ ಕೊಹ್ಲಿ 159 ಎಸೆತದಲ್ಲಿ ಶತಕ ಸಿಡಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ 27ನೇ ಟೆಸ್ಟ್ ಶತಕ ಸಿಡಿಸಿದ ಸಾಧನೆ ಮಾಡಿದರು. ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಇಡೀ ಡ್ರೆಸಿಂಗ್ ರೂಮ್ ಎದ್ದು ವಿರಾಟ್ ಕೊಹ್ಲಿಗೆ ಚಪ್ಪಾಳೆ ಹೊಡೆದು ಅಭಿನಂದಿಸಿತು. ಇದರೊಂದಿಗೆ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್​ ಅವರ ದಾಖಲೆಯನ್ನ ಸರಿಗಟ್ಟಿದರು.

ಸಚಿನ್ ಕೂಡ 27 ಶತಕ ಪೂರೈಸಲು 141 ಇನ್ನಿಂಗ್ಸ್ ತೆಗೆದುಕೊಂಡಿದ್ದರು. 194 ಎಸೆತ ಎದುರಿಸಿದ ವಿರಾಟ್ ಕೊಹ್ಲಿ 18 ಬೌಂಡರಿಗಳನ್ನು ಸಿಡಿಸಿದರು. ಒಟ್ಟು 136 ರನ್ ಕಲೆ ಹಾಕಿದರು. ಅಲ್ಲದೇ ಪಿಂಕ್ ಬಾಲ್​ನಲ್ಲಿ ಮೊದಲ ಬಾರಿ ಆಡಿದ ವಿರಾಟ್ ಮೊದಲ ಪಂದ್ಯದಲ್ಲೆ ಶತಕ ವೀರಾನಾಗಿ ಹೊರಹೊಮ್ಮಿದರು. ಇದರೊಂದಿಗೆ ಪಿಂಕ್ ಬಾಲ್​ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಭಾರತೀಯ ಬ್ಯಾಟ್ಸ್​ಮನ್ ಎಂಬ ಗೌರವಕ್ಕೆ ಪಾತ್ರರಾದರು.

ಟೆಸ್ಟ್​ ಫಾರ್ಮೆಟ್​​ನಲ್ಲಿ ಲಾಲ್​ ಅಮರ್​ನಾಥ್ 1934ರಲ್ಲಿ ಮೊದಲ ಟೆಸ್ಟ್ ಶತಕ ಸಿಡಿಸಿದ್ದರೆ, ಇದೀಗ ಪಿಂಕ್ ಬಾಲ್​ನಲ್ಲಿ ಕೊಹ್ಲಿ ಶತಕ ಸಿಡಿಸಿದ್ದಾರೆ. ಏಕದಿನ ಆವೃತ್ತಿಯಲ್ಲಿ ಕ್ರಿಕೆಟ್​ ದಂತ ಕಪಿಲ್​ದೇವ್ 1983ರಲ್ಲಿ ಶತಕ ಹೊಡೆದರೆ, ಹೊನಲು ಬೆಳಕಿನ ಏಕದಿನ ಪಂದ್ಯದಲ್ಲಿ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೆಖರ್ ಮೊದಲ ಶತಕ ಸಿಡಿಸಿದರು, ಇನ್ನು 2010ರಲ್ಲಿ ಪವರ್ ಹಿಟ್ಟರ್ ಸುರೇಶ್ ರೈನಾ ಟಿ20 ಫಾರ್ಮೆಟ್​ನಲ್ಲಿ ಮೊದಲ ಶತಕ ಸಿಡಿಸಿದ್ರು. ಟಿ20 ಹೊನಲು ಬೆಳಕಿನ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ ತಂಡದ ಮೊದಲ ಬ್ಯಾಟ್ಸ್​ ಮನ್ ಎನಿಸಿದ್ದಾರೆ.

ಬಾಂಗ್ಲಾ ವಿರುದ್ಧ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಆಸಿಸ್ ತಂಡದ ರಿಕಿ ಪಾಟಿಂಗ್ ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ. ರಿಕಿ ಪಾಂಟಿಂಗ್ ನಾಯಕನಾಗಿ ಟೆಸ್ಟ್ ನಲ್ಲಿ 19 ಶತಕ ಸಿಡಿಸಿದ್ರು. ಇದೀಗ ವಿರಾಟ್ ಕೊಹ್ಲಿ ನಾಯಕನಾಗಿ 20ನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಇಷ್ಟೆ ಅಲ್ಲ ವಿರಾಟ್ ಕೊಹ್ಲಿ ಈ ಶತಕದೊಂದಿಗೆ 70ನೇ ಅಂತಾರಾಷ್ಟ್ರೀಯ ಶತಕ ವೇಗವಾಗಿ ಸಿಡಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 70 ನೇ ಅಂತಾರಾಷ್ಟ್ರೀಯ ಶತಕ ಸಿಡಿಸಲು 649 ಇನ್ನಿಂಗ್ಸ್ ತೆಗೆದುಕೊಂಡರೆ, ಸಚಿನ್ ತೆಂಡೂಲ್ಕರ್ 505 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ಇದೀಗ ವಿರಾಟ್ ಕೊಹ್ಲಿ 439 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಅಂದರೆ, ಸಚಿನ್​ಗಿಂತ 66 ಇನ್ನಿಂಗ್ಸ್ ಮುಂಚಿತವಾಗಿ ವಿರಾಟ್​ 70ನೇ ಶತಕ ಸಿಡಿಸಿದ್ದಾರೆ. ಒಟ್ಟಾರೆ ಇದುವರೆಗೂ ರೆಡ್​ ಬಾಲ್​ನಲ್ಲಿ ರನ್ ಮಳೆ ಸುರಿಸುತ್ತಿದ್ದ ವಿರಾಟ್ ಇದೀಗ ಪಿಂಕ್ ಚೆಂಡಿನಲ್ಲೂ ಅಬ್ಬರಿಸಿದ್ದಾರೆ.

Recommended For You

About the Author: user

Leave a Reply

Your email address will not be published. Required fields are marked *