ಪ್ಯಾರಿಸ್‌ನಲ್ಲೇ ಕೇಂದ್ರ ಸಚಿವ ರಾಜನಾಥ್‌ ಸಿಂಗ್​ ಆಯುಧ ಪೂಜೆ

ನವದೆಹಲಿ: ಭ್ರಷ್ಟಾಚಾರ ಆರೋಪ ಹೊತ್ತಿರುವ ರಫೇಲ್ ಯುದ್ಧವಿಮಾನಗಳು ಭಾರತೀಯ ಸೇನೆ ಸೇರಲು ಇನ್ನೆರಡೇ ದಿನ ಬಾಕಿ. 36 ಜೆಟ್‌ಗಳ ಪೈಕಿ ಮೊದಲ ಹಂತದಲ್ಲಿ 4 ಸಿದ್ಧವಾಗಿದ್ದು, ಮಂಗಳವಾರ ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ. ಇದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ಯಾರೀಸ್‌ಗೆ ಹೋಗ್ತಿದ್ದು, ಅಲ್ಲಿಯೇ ಆಯುಧ ಪೂಜೆ ನೆರವೇರಿಸಲಿದ್ದಾರೆ.

ಪ್ರತಿಷ್ಟಿತ ರಫೇಲ್‌ ಯುದ್ಧ ವಿಮಾನ ಭಾರತೀಯ ಸೇನೆಗೆ ಸೇರ್ಪಡೆಗೆ ಇನ್ನೂ 2 ದಿನಗಳಷ್ಟೇ ಬಾಕಿ. ಮೊದಲ ಬ್ಯಾಚ್‌ನ ರಫೇಲ್ ಜೆಟ್ ವಿಮಾನಗಳನ್ನು ಬರಮಾಡಿಕೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫ್ರಾನ್ಸ್‌ಗೆ ತೆರಳುತ್ತಿದ್ದಾರೆ. ಪ್ಯಾರಿಸ್‌ನಲ್ಲೇ ಆಯುದ್ಧ ಪೂಜೆ ನೆರವೇರಿಸಲು ಸಿದ್ಧವಾಗಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ದಸರಾ ಹಾಗೂ ಆಯುಧ ಪೂಜೆ ನಡೆಯುತ್ತಿರುವುದು ಆಕಸ್ಮಿಕ ಘಟನೆ.

ರಾಜನಾಥ್‌ ಸಿಂಗ್ ಗೃಹ ಸಚಿವರಾಗಿದ್ದಾಗಲೂ ದಸರಾ ಸಂದರ್ಭದಲ್ಲಿ ಆಯುಧ ಪೂಜೆ ನೆರವೇರಿಸಿದ್ದರು. ಈಗ ರಕ್ಷಣಾ ಸಚಿವರಾಗಿದ್ದು, ಹಿಂದಿನ ಸಂಪ್ರದಾಯ ಮುಂದುವರಿಸಲಿದ್ದಾರೆ. ಭಾರತೀಯ ಸೇನೆಗೆ ರಫೇಲ್‌ ಜೆಟ್‌ ಸೇರ್ಪಡೆ ಮಾಡಿಕೊಳ್ಳಲು ಪ್ಯಾರೀಸ್‌ಗೆ ಹೋಗುತ್ತಿದ್ದು, ಅಲ್ಲಿಯೇ ಆಯುಧ ಪೂಜೆ ನೆರವೇರಿಸಲಿದ್ದಾರೆ. ಈ ಬಗ್ಗೆ ರಕ್ಷಣಾ ಇಲಾಖೆಯ ರಾಜನಾಥ್‌ ಸಿಂಗ್‌ ಆಪ್ತವಲಯ ಮಾಹಿತಿ ನೀಡಿದೆ.

ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಜೊತೆ ರಾಜನಾಥ್ ಸಭೆ ನಡೆಸಲಿದ್ದು, ಫ್ರಾನ್ಸ್‌ ಸೇನೆಯ ಉನ್ನತಾಧಿಕಾರಿಗಳು ಮತ್ತು ರಫೇಲ್‌ ಉತ್ಪಾದಕ ಕಂಪೆನಿ ಡಸಾಲ್ಟ್ ಏವಿಯೇಷನ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆ ನಂತರ ಭಾರತಕ್ಕೆ ರಫೇಲ್‌ ಹಸ್ತಾಂತರಿಸಲಾಗುತ್ತದೆ. 36 ರಫೇಲ್ ಜೆಟ್‌ ಪೂರೈಸಲು ಭಾರತ ಮತ್ತು ಫ್ರಾನ್ಸ್‌ ನಡುವೆ 2016ರ ಸೆಪ್ಟೆಂಬರ್‌ನಲ್ಲಿ 59 ಸಾವಿರ ಕೋಟಿ ರೂಪಾಯಿ ಒಪ್ಪಂದ ಆಗಿದೆ. ಮೊದಲ ಹಂತದಲ್ಲಿ 4 ಜೆಟ್‌ ಸಿದ್ಧವಾಗಿದ್ದು, ಮಂಗಳವಾರ ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ. ಇವು ಮುಂದಿನ ಏಪ್ರಿಲ್ – ಮೇ ತಿಂಗಳಲ್ಲಿ ಹಾರಾಟ ನಡೆಸಲಿವೆ. ಎಲ್ಲ 36 ಜೆಟ್‌ಗಳು 2022ರ ಸೆಪ್ಟೆಂಬರ್‌ ವೇಳೆಗೆ ಭಾರತೀಯ ಸೇನೆ ಸೇರಲಿವೆ.

ರಫೇಲ್ ಯುದ್ಧ ವಿಮಾನ ಬರಮಾಡಿಕೊಳ್ಳಲು ಭಾರತೀಯ ವಾಯುಪಡೆ ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಂಡಿದೆ. ವಾಯುನೆಲೆಗಳಲ್ಲಿ ಮೂಲಸೌಕರ್ಯ ಒದಗಿಸಲಾಗಿದ್ದು, ಪೈಲಟ್‌ಗಳಿಗೆ ತರಬೇತಿ ನೀಡಲಾಗಿದೆ. ಹರಿಯಾಣದ ಅಂಬಾಲ ಮತ್ತು ಪಶ್ಚಿಮಬಂಗಾಳದ ಹಸಿಮರ ವಾಯುನೆಲೆಯಲ್ಲಿ ತಲಾ ಒಂದು ರಫೇಲ್‌ ಕಾರ್ಯನಿರ್ವಹಿಸಲಿವೆ. ಇವು ಪಶ್ಚಿಮ ಮತ್ತು ಪೂರ್ವ ವಲಯಗಳ ನೋಡಿಕೊಳ್ಳಲಿವೆ.

22 ವರ್ಷಗಳ ಹಿಂದೆ ರಷ್ಯಾದಿಂದ ಸುಖೋಯ್-30 ಯುದ್ಧ ವಿಮಾನ ಆಮದು ಮಾಡಿಕೊಳ್ಳಲಾಗಿತ್ತು. 1997ರ ಜೂನ್‌ನಲ್ಲಿ ಭಾರತೀಯ ಸೇನೆ ಸೇರಿದ್ದವು. ಅಲ್ಲಿಂದೀಚಿಗೆ ವಿದೇಶದಿಂದ ಯಾವುದೇ ಫೈಟರ್‌ ಜೆಟ್‌ ಖರೀದಿಸಿರಲಿಲ್ಲ. ಈಗ ರಫೇಲ್ ಖರೀದಿಸಲಾಗಿದೆ. ಇಸ್ರೇಲಿ ಹೆಲ್ಮೆಟ್, ಮೌಂಟೆಡ್‌ ಡಿಸ್‌ಪ್ಲೇ, ರೆಡಾರ್‌ ಎಚ್ಚರಿಕೆಯ ಸ್ವೀಕೃತಿ, ಲೋ ಬ್ಯಾಂಡ್‌ ಜಾಮ್ಮರ್ಸ್, 10 ಗಂಟೆ ಕಾಲ ದತ್ತಾಂಶ ಸಂಗ್ರಹಿಸುವ ಸಾಮರ್ಥ್ಯವುಳ್ಳ ರೆಕಾರ್ಡರ್, ಪತ್ತೆ ಹಚ್ಚುವಿಕೆ ಸಾಧನ ಒಳಗೊಂಡಂತೆ ಹಲವು ಮಾರ್ಪಾಡುಗಳೊಂದಿಗೆ ರಫೇಲ್‌ ಬರುತ್ತಿವೆ.

ರಫೇಲ್ ಯುದ್ಧ ವಿಮಾನ ಖರೀದಿಯ ಮೌಲ್ಯದ ಬಗ್ಗೆ ಕಾಂಗ್ರೆಸ್‌ ಆಕ್ಷೇಪ ಎತ್ತಿದ್ದು, 30 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ಇದೇ ಪ್ರಮುಖ ಅಸ್ತ್ರವಾಗಿತ್ತು. ಆದರೆ, ಮೋದಿ ಸರ್ಕಾರ ಕಾಂಗ್ರೆಸ್ ಆರೋಪ ನಿರಾಕರಿಸಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *