ಅನರ್ಹ ಶಾಸಕರಿಂದ ಬುದ್ದಿ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ : ಸಿ.ಎಸ್ ಪುಟ್ಟರಾಜು

ಮಂಡ್ಯ: ಅನರ್ಹ ಶಾಸಕ ನಾರಾಯಣಗೌಡ ಅವರಿಂದ ಎಚ್.ಡಿ ದೇವೇಗೌಡ, ಜೆಡಿಎಸ್ ನಾಯಕರಿಗೆ, ಬುದ್ದಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಅವರು ಅನರ್ಹ ಶಾಸಕ ನಾರಾಯಣಗೌಡಗೆ ತಿರುಗೇಟು ನೀಡಿದರು.

ಇತ್ತೀಚಿಗೆ ಅನರ್ಹ ಶಾಸಕ ನಾರಾಯಣಗೌಡ ಹೆಚ್​.ಡಿ.ದೇವೇಗೌಡಗೆ ನಿಮ್ಮ ಮಕ್ಕಳನ್ನು ನಿಯಂತ್ರಿಸಲು ಆಗಲ್ವಾ? ನಿಮಗೆ ನಾಚಿಕೆ ಆಗಬೇಕು? ಎಂದು ಹೇಳಿದ್ದರು ಈ ಬಗ್ಗೆ ಪುಟ್ಟರಾಜು ಕಿಡಿಕಾರಿದ್ದಾರೆ.

ಇನ್ನು ಚೆಲುವರಾಯಸ್ವಾಮಿ ವಿರುದ್ಧವೂ ಕಿಡಿಕಾರಿದ ಪುಟ್ಟರಾಜು, ದೇವೇಗೌಡ, ಕುಮಾರಸ್ವಾಮಿ ಮೇಲೆ ದ್ವೇಷದ ರಾಜಕಾರಣ ಮಾಡಿದ್ದವರು ಎಲ್ಲರೂ ಮನೆಗೆ ಹೋಗಿದ್ದಾರೆ. ಚಲುವರಾಯಸ್ವಾಮಿ ಸಹ ಮನೆಗೆ ಹೋಗಿದ್ದಾರೆ. ಚಲುವರಾಯಸ್ವಾಮಿ ಬಾಳೆ ಎಲೆ ಆಗಬೇಕು. ಎಂಜಲು ಎಲೆ ಆಗಬಾರದು ಎಂದು ಅವರು ಹೇಳಿದರು. ಸಿದ್ದರಾಮಯ್ಯ ಪಕ್ಕ ಕುಳಿತು ಯಡಿಯೂರಪ್ಪಗೆ ಬೈಸೋ ಚಲುವರಾಯಸ್ವಾಮಿ, ಮತ್ತೆ ಯಡಿಯೂರಪ್ಪ ಬಳಿಗೆ ಹೋಗಿ ಅಲ್ಲಿಂದು ಇವರನ್ನು ಬೈಸೋದೇ ಚಲುವರಾಯಸ್ವಾಮಿ ಕೆಲಸ ಎಂದು ಆಕ್ರೋಶ ಹೊರಹಾಕಿದ್ದಾರೆ.

ದೇವೇಗೌಡ ಕುಟುಂಬ ನನಗೆ ಯಾವತ್ತು ಕಿರುಕುಳ ಕೊಟ್ಟಿಲ್ಲ. ಜೆಡಿಎಸ್ ಪಕ್ಷ ನನಗೆ ಶಾಸಕ, ಸಂಸದ, ಮಂತ್ರಿ ಮಾಡಿದೆ. ನಮ್ಮ ಕುಟುಂಬದ ಇಬ್ಬರನ್ನು ಜಿ.ಪಂ. ಸದಸ್ಯರನ್ನಾಗಿ ಮಾಡಿದೆ. ನಾನು ಒಕ್ಕಲಿಗ ಅಲ್ವಾ. ನನ್ನನ್ನು ಜೆಡಿಎಸ್ ಪಕ್ಷ ಬೆಳೆಸಿಲಿಲ್ವಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿಚಾರದಲ್ಲಿ ಕುಮಾರಸ್ವಾಮಿ ಹಗುರ ಹೇಳಿಕೆ ನೀಡಿದ್ದಾರೆಂದು ಚೆಲುವರಾಯಸ್ವಾಮಿ ಆರೋಪಿಸಿದ್ದ ವಿಚಾರವಾಗಿ ಮಾತನಾಡಿದ ಪುಟ್ಟರಾಜು, ಡಿಕೆಶಿ- ಕುಮಾರಸ್ವಾಮಿ ಸಂಬಂಧವನ್ನು ಬೇರ್ಪಡಿಸುವ ಹುನ್ನಾರ ನಡೆಯುತ್ತಿದೆ. ಚಲುವರಾಯಸ್ವಾಮಿ ಚುನಾವಣೆ ಸೋತ ಬಳಿಕ ಗುರುತಿಸಿಕೊಳ್ಳಲು ಇಂತಹ ಹೇಳಿಕೆ ಕೊಡುತ್ತಾರೆ ಎಂದು ಪುಟ್ಟರಾಜು ಆರೋಪಿಸಿದ್ದಾರೆ.

ಅಲ್ಲದೇ ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಬೇಕು. ರೈತರು ಕಾರ್ಖಾನೆ ಆರಂಭವಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ಕಾರ್ಖಾನೆ ಒಂದು ವಾರದಲ್ಲಿ ಆರಂಭವಾಗಬೇಕು. ಇಲ್ಲದಿದ್ದರೆ ದಸರಾ ನಡೆಯಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಪುಟ್ಟರಾಜು ಅವರು ಎಚ್ಚರಿಕೆ ನೀಡಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *