ಸೆ.18ಕ್ಕೆ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ: ಇಂದು ಕಾಂಗ್ರೆಸ್‌ನ ಟ್ರಬಲ್‌ ಶೂಟರ್ ಡಿ.ಕೆ. ಶಿವಕುಮಾರ್ ಪಾಲಿಗೆ ಅಮಂಗಳ. ಇಂದು ಜಾಮೀನು ಸಿಗಬಹುದು ಅಂತ ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದು ಡಿ.ಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರಿಗೆ ನಿರಾಸೆ ಆಗಿದೆ. ವಾದ-ಪ್ರತಿವಾದ ಆಲಿಸಿದ ದೆಹಲಿಯ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟ್‌, ನಾಳೆಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ, ಡಿಕೆಶಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ದೆಹಲಿಯ ರೋಸ್‌ ಅವೆನ್ಯೂ ರಸ್ತೆಯಲ್ಲಿರುವ ಇಡಿ ಕೋರ್ಟ್‌ ಮುಂದೆ ನಾಳೆ ಮತ್ತೆ ಜಾಮೀನು ಅರ್ಜಿ ಮತ್ತೆ ವಿಚಾರಣೆಗೆ ಬರಲಿದೆ. ಇಂದು ಮೂವರು ವಕೀಲರು ಡಿಕೆಶಿ ಪರ ವಾದ ಮಾಡಿದ್ರೂ ಜಾಮೀನು ಸಿಗಲಿಲ್ಲ. ನಾಳೆ ಮಧ್ಯಾಹ್ನ 3 ಗಂಟೆಗೆ ಜಾಮೀನು ಅರ್ಜಿ ವಿಚಾರಣೆ ನಡೆಸಲಿರುವ ಕೋರ್ಟ್‌, ಡಿಕೆಶಿಗೆ ಜಾಮೀನು ನೀಡಬೇಕೋ(?) ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೋ ಅಂತ ತೀರ್ಮಾನಿಸಲಿದೆ.

ಅನಾರೋಗ್ಯದಿಂದ ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಾಗಿದ್ದ ಡಿಕೆಶಿ ಅವರನ್ನು ಮಧ್ಯಾಹ್ನ ಆಸ್ಪತ್ರೆಯಿಂದಲೇ ನೇರವಾಗಿ ಕೋರ್ಟ್‌ಗೆ ಕರೆತರಲಾಯ್ತು. ಆದರೆ, ಜಾಮೀನು ಸಿಗದಿದ್ದರಿಂದ ಮತ್ತೆ ನ್ಯಾಯಾಧೀಶರ ಸೂಚನೆ ಮೇರೆಗೆ ಅದೇ ಆಸ್ಪತ್ರೆಗೆ ಪೊಲೀಸರು ಕರೆತಂದರು. ಆಸ್ಪತ್ರೆಯಲ್ಲೇ ಉಳಿಯುವಂತೆ ವೈದ್ಯರು ಸೂಚಿಸಿದರೆ ಅದುವೇ ಅಂತಿಮ. ಇಲ್ಲವಾದಲ್ಲಿ ತಿಹಾರ್ ಜೈಲಿಗೆ ಹೋಗಬೇಕಾಗಬಹುದು. ಅವರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ವೈದ್ಯರು ನಿರ್ಧರಿಸಲಿದ್ದಾರೆ.

ಮೊದಲಿಗೆ ಇಡಿ ಪರ ವಾದ ಮಂಡಿಸಿದ ನಟರಾಜ್, ಡಿಕೆಶಿಗೆ ಅನೇಕ ವ್ಯವಹಾರಗಳಿವೆ. ಇವುಗಳಿಗೆ ಆದಾಯದ‌ ಮೂಲ ಯಾವುದು ಅಂತ ಸ್ಪಷ್ಟಪಡಿಸಿಲ್ಲ. ಈ ಹಣ ‌ಎಲ್ಲಿಂದ‌ ಬಂತು ಅಂತಲೂ ಹೇಳಿಲ್ಲ. 800 ಕೋಟಿ ರೂಪಾಯಿಯಷ್ಟು ಅವ್ಯವಹಾರ‌‌ ನಡೆದಿದೆ. ಹಾಗಾಗಿ, ಜಾಮೀನು‌ ನೀಡದೆ‌ ಮತ್ತಷ್ಟು ವಿಚಾರಣೆಗೆ ಅವಕಾಶ ‌ನೀಡಿ ಎಂದು ಕೋರಿದರು. 23 ವರ್ಷ ವಯಸ್ಸಿನ ಅವರ ಮಗಳು 108 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ‌ ಎಂಬುದು ನಂಬಲು ಅಸಾಧ್ಯವಾದದ್ದು ಅಂತಲೂ ಹೇಳಿದರು.

ನಾವು ವಿಚಾರಣೆಗೆ 9 ಜನರ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ತನಿಖೆ ವೇಳೆ ಸಾಕಷ್ಟು ದಾಖಲೆ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ವ್ಯವಹಾರಗಳ ಎಲ್ಲ ಮಾಹಿತಿ ಪಡೆಯಲಾಗಿದೆ. ಅಪರಾಧ ಪಿತೂರಿಯ ಹಿನ್ನೆಲೆಯಲ್ಲೇ 143 ಕೋಟಿ ರೂಪಾಯಿ ಬಳಕೆಯಾದ ಬಗ್ಗೆ ನಮಗೆ ಮಾಹಿತಿ ದೊರೆತಿದೆ. ಇದೆಲ್ಲವೂ ಅನ್ ಅಕೌಂಟೆಡ್ ನಗದು ವ್ಯವಹಾರವಾಗಿದೆ. ಆದರೆ, ವಿಚಾರಣೆ ಸಂದರ್ಭ ಡಿಕೆಶಿ‌ ಹಾಗೂ ಇತರರು ಸಮರ್ಪಕ ಉತ್ತರ ‌ನೀಡಿಲ್ಲ. ಇದರಿಂದ ಡಿಕೆಶಿ ಜಾಮೀನು ನೀಡಬಾರದು ಅಂತ ಇಡಿ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು.

ಇಡಿ ವಕೀಲರ ನಂತರ ಡಿಕೆಶಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಡಿಕೆಶಿ ಏಳು ಬಾರಿ ಶಾಸಕರಾಗಿ ಸಾರ್ವಜನಿಕ ಸೇವೆಯಲ್ಲಿದ್ದು, ಯಾವುದೇ ಲಾಭ ಬಯಸಿಲ್ಲ. ಸಮಾಜದಲ್ಲಿ ಅನೇಕ ಸ್ಥಾನಮಾನ ‌ಹೊಂದಿದ್ದವರು. 41 ಲಕ್ಷ ಮಾತ್ರ ಅವರ ಮನೆಯಲ್ಲಿ ದೊರೆತಿದೆ. ಅದಕ್ಕೆ ತೆರಿಗೆಯ‌ನ್ನೂ ಕಟ್ಟಲಾಗಿದೆ. ಆದರೂ ಅವರ ವಿರುದ್ಧ ಇಲ್ಲಸಲ್ಲದ ಪ್ರಕರಣ ದಾಖಲಿಸಲಾಗಿದೆ. ಅದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬಾರದು. ಆದಾಯ ತೆರಿಗೆ ಕಾಯ್ದೆಯು ಶೆಡ್ಯೂಲ್‌ನಲ್ಲಿ ಇಲ್ಲವೆಂಬ ಕಾರಣದಿಂದ ಹಣ ಅಕ್ರಮ ವರ್ಗಾವಣೆ ತಡೆ‌ ಕಾಯ್ದೆ ದಾಖಲಿಸಲಾಗಿದೆ. ಇದು ಸರಿಯಲ್ಲ ಎಂದು ಕೋರ್ಟ್‌ಗೆ ತಿಳಿಸಿದರು.

ಕರ್ನಾಟಕ‌ ಹೈಕೋರ್ಟ್ ಈ ಪ್ರಕರಣಗಳ ವಿಚಾರಣೆಗೆ ಆದಾಯ ತೆರಿಗೆ ಇಲಾಖೆಗೆ ತಡೆ‌ ನೀಡಿದೆ. ಆದರೂ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ.‌ ಆರೋಗ್ಯ ಸ್ಥಿತಿ ಹದಗೆಟ್ಟರೂ ಆರೋಪಿ ಹೇಳಿದರೂ ತನಿಖಾಧಿಕಾರಿಗಳು ಕಿವಿಗೊಡುತ್ತಿಲ್ಲ. ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಗೆ ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಜಾಮೀನು‌ ನೀಡಿ ಮನೆಗೆ ಕಳುಹಿಸಿದೆ. ಅವರದ್ದು ಗರಿಷ್ಠ 7 ವರ್ಷ ಶಿಕ್ಷೆಗೆ ಅರ್ಹವಾದ ಅಪರಾಧ ಆಗಲಿದ್ದರೂ ಅವರಿಗೆ ರಿಯಾಯಿತಿ ನೀಡಲಾಗಿದೆ. ಡಿಕೆಶಿ ಅವರು ಅಂಥ ಗುರುತರ ಅಪರಾಧ‌ ಮಾಡಿಲ್ಲ. ಯಾವುದೇ ಷರತ್ತು ಬೇಕಾದರೂ ಹಾಕಿ. ಆದರೆ, ಜಾಮೀನು‌ ನೀಡಿ ಎಂದು ರೋಹ್ಟಗಿ ‌ಮನವಿ ಮಾಡಿದರು.

ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ ನಾಳೆಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿತು. ಇದರೊಂದಿಗೆ ಡಿಕೆಶಿ ಬೆಂಬಲಿಗರಲ್ಲಿ ನಿರಾಸೆ ಮೂಡಿತು. ನಾಳೆ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Recommended For You

About the Author: TV5 Kannada

Leave a Reply

Your email address will not be published. Required fields are marked *