ತನ್ನ ರೆಕಾರ್ಡ್​ ತಾನೇ ಬ್ರೇಕ್ ಮಾಡಿದ ಚಾಲೆಂಜಿಂಗ್ ಸ್ಟಾರ್..!

30ಕ್ಕೂ ಅಧಿಕ ಸ್ಟಾರ್ ಕಲಾವಿದರು. ಸಹಸ್ರಾರು ಸಹ ಕಲಾವಿದರು. ನೂರಾರು ತಂತ್ರಜ್ಞರ ಎರಡು ವರ್ಷದ ತಪ್ಪಸ್ಸಿನ ಫಲ  ಕುರುಕ್ಷೇತ್ರ ಸಿನಿಮಾ. ನಿರ್ಮಾಪಕ ಮುನಿರತ್ನ ಡ್ರೀಮ್ ಪ್ರಾಜೆಕ್ಟ್​ ಇದಾಗಿದ್ದು, ಆ ಕನಸು ನನಸಾಗಿಸೋಕ್ಕೆ ಇಡೀ ಚಿತ್ರತಂಡ ಹಗಲಿರುಳು ಸಿನಿಮಾ ಧ್ಯಾನ ಮಾಡಿದೆ.

ನಿರೀಕ್ಷೆಗೂ ಮೀರಿದ ಎಫರ್ಟ್​ ಹಾಕಿದೆ. ಅದರ ಪ್ರತಿಫಲಕ್ಕೆ ಇಂದು ಪ್ರೇಕ್ಷಕ ಮಹಾಶಯರಿಂದ ಶಿಳ್ಳೆ- ಚಪ್ಪಾಳೆಗಳ ಸತ್ಕಾರ, ಪುರಸ್ಕಾರ ಸಿಗ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್​ರ 50ನೇ ಸಿನಿಮಾ ಈ ಮಹಾದೃಶ್ಯಕಾವ್ಯ. ಸಂಗೊಳ್ಳಿ ರಾಯಣ್ಣ ಚಿತ್ರದ ನಂತರ ದರ್ಶನ್ ಈ ರೀತಿಯ ವಿಭಿನ್ನ ಕಥಾನಕಕ್ಕೆ ಕೈಹಾಕಿದರು. ಹಾಗಾಗಿ ಅದರ ನಿರೀಕ್ಷೆ ಕೂಡ ಮುಗಿಲು ಮುಟ್ಟಿತ್ತು. ಇದೀಗ ದಚ್ಚು ಈ ವಿಭಿನ್ನ ಆಯ್ಕೆ, ಕುರುಕ್ಷೇತ್ರಕ್ಕೆ ಅಂದುಕೊಂಡಂತೆ ಪ್ರಶಂಸೆ ಮತ್ತು ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರ್ತಿದೆ. ಮತ್ತೊಮ್ಮೆ ಡಿ ಬಾಸ್ ಫ್ಯಾನ್ಸ್ ಜೊತೆ ಇಡೀ ಕನ್ನಡ ಸಿನಿಪ್ರಿಯರು ದಿಲ್ ಖುಷ್ ಆಗಿದ್ದಾರೆ.

ಅಂದಹಾಗೆ ಕುರುಕ್ಷೇತ್ರ ಪೌರಾಣಿಕ ಸಿನಿಮಾ. ದರ್ಶನ್​ರ ಈ ಹಿಂದಿನ ಕಮರ್ಷಿಯಲ್ ಸಿನಿಮಾಗಳ ಲೆಕ್ಕವೇ ಬೇರೆ, ಈ ಚಿತ್ರದ ಲೆಕ್ಕವೇ ಬೇರೆ. ಬರೀ 2ಡಿ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರನ್ನು ರಂಜಿಸಿ, ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳೋ ಈ ಕಾಲದಲ್ಲಿ, ತ್ರೀಡಿ ಕನಸನ್ನು ನನಸು ಮಾಡಿದ್ದು ಮುನಿರತ್ನ. ಅದಕ್ಕೆ ಸಾಥ್ ಕೊಟ್ಟಿದ್ದು ಡಿ ಬಾಸ್ ದರ್ಶನ್.

2ಡಿ ಜೊತೆ ತ್ರೀಡಿಗೂ ಕೈಹಾಕಿ, ಗಾಸಿಪ್​ಗಳಿಗೆ ಆಹಾರವಾಗಿದ್ದ ಕುರುಕ್ಷೇತ್ರ ಟೀಂ, ಇದೀಗ ತಮ್ಮ ಗತ್ತು ಗೈರತ್ತು ಎಂಥದ್ದು ಅನ್ನೋದನ್ನು ಪ್ರೂವ್ ಮಾಡಿದೆ. ಮಕ್ಕಳಿಂದ ಹಿರಿಯರವರೆಗೆ ಸಿನಿಮಾ ನೋಡಿದವರು ಭೇಷ್ ಅಂತ ಬೆನ್ನು ತಟ್ಟುತ್ತಿದ್ದಾರೆ.

ಇದೆಲ್ಲವೂ ಓಕೆ ಆದರೆ ಕನ್ನಡದ ಜೊತೆ ತೆಲುಗಿನಲ್ಲೂ ವಿಜೃಂಭಿಸಿದ ಕುರುಕ್ಷೇತ್ರ ಬಾಕ್ಸ್ ಅಫೀಸ್​ನಲ್ಲಿ ಕಲೆಕ್ಷನ್ ಮಾಡಿದ್ದಾದರು ಎಷ್ಟು..? ಅಷ್ಟು ಕೋಟಿ, ಇಷ್ಟು ಕೋಟಿ ಅಂತೆಲ್ಲಾ ಹೇಳ್ತಾರಲ್ಲ, ನಿಜಕ್ಕೂ ಕಲೆಕ್ಷನ್ ಆಗಿರೋದೆಷ್ಟು..? ಆಗಬೇಕಿರೋದು ಎಷ್ಟು ಅನ್ನೋದರ ರಿಪೋರ್ಟ್​ಗಾಗಿ ದರ್ಶನ್ ಫ್ಯಾನ್ಸ್ ಜೊತೆ ಇಡೀ ಚಿತ್ರರಂಗ ಕೂಡ ಕಾಯ್ತಿದೆ.

ಕರ್ನಾಟಕ ಹಾಗೂ ಎರಡು ತೆಲುಗು ರಾಜ್ಯದಲ್ಲಿ ಒಟ್ಟೊಟ್ಟಿಗೆ ಒಂದೇ ದಿನ ಕನ್ನಡ ಮತ್ತು ತೆಲುಗಿನಲ್ಲಿ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡ ಕುರುಕ್ಷೇತ್ರ, ಬಾಕ್ಸಾಫೀಸ್ ಧೂಳೆಬ್ಬಿಸ್ತಿದೆ. ಕರ್ನಾಟಕದ 400 ಹಾಗೂ ಆಂಧ್ರದ 300 ಸ್ಕ್ರೀನ್ಸ್​ನಲ್ಲಿ ಸದ್ಯ ದರ್ಬಾರ್ ಮಾಡ್ತಿರೋ ದುರ್ಯೋಧನ, ಮೊದಲ ವಾರದಲ್ಲಿ 1500ಕ್ಕೂ ಅಧಿಕ ಶೋಗಳ ಮೂಲಕ ಬರೋಬ್ಬರಿ 30ಕೋಟಿ ದಾಖಲೆ ಕಲೆಕ್ಷನ್ ಮಾಡಿದೆ.

ಇದನ್ನ ಸ್ಟಾರ್ ಡಿಸ್ಟ್ರಿಬ್ಯೂಟರ್ ರಾಕ್​ಲೈನ್ ವೆಂಕಟೇಶ್ ಅವ್ರೇ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿರೋದು ವಿಶೇಷ. ಇದು ಬರೀ ಕುರುಕ್ಷೇತ್ರ ಚಿತ್ರತಂಡಕ್ಕಷ್ಟೇ ಅಲ್ಲ, ಇಡೀ ಡಿ ಬಾಸ್ ಫ್ಯಾನ್ಸ್ ಪರಿವಾರ ಹಾಗೂ ಚಿತ್ರರಂಗಕ್ಕೆ ವರಮಹಾಲಕ್ಷ್ಮೀಯೇ ನಮ್ಮ ಸ್ಯಾಂಡಲ್​ವುಡ್​ ಬಾಕ್ಸಾಫೀಸ್​ಗೆ ಬಂದು ಕೂತಂತಾಗಿದೆ.


ಅಂದಹಾಗೆ ದರ್ಶನ್ ಕರಿಯರ್​ನಲ್ಲಿ ಹೈಯೆಸ್ಟ್ ಕಲೆಕ್ಷನ್ ಮಾಡಿದ ಸಿನಿಮಾಗಳು ಸಂಗೊಳ್ಳಿ ರಾಯಣ್ಣ ಹಾಗೂ ಇತ್ತೀಚೆಗೆ ರಿಲೀಸ್ ಆದ ಯಜಮಾನ. 2012ರಲ್ಲಿ ಸಂಗೊಳ್ಳಿ ರಾಯಣ್ಣ 40ಕೋಟಿ ಪೈಸಾ ವಸೂಲ್ ಮಾಡಿದರೆ, ಇದೇ ವರ್ಷ ತೆರೆಕಂಡ ಯಜಮಾನ ಸಿನಿಮಾ, 52ಕೋಟಿ ವರ್ಲ್ಡ್​ ವೈಡ್ ಗ್ರಾಸ್ ಕಲೆಕ್ಷನ್ ಮಾಡಿತ್ತು. ಸದ್ಯ ಒಂದೇ ವಾರದಲ್ಲಿ 30ಕೋಟಿ ಬಾಚಿರೋ ಕುರುಕ್ಷೇತ್ರ, ಸದ್ಯದಲ್ಲೇ ದರ್ಶನ್ ದಾಖಲೆಯನ್ನು ದರ್ಶನ್ನೇ ಬ್ರೇಕ್ ಮಾಡುವಂತೆ ಆಗ್ತಿದೆ.

ನಮ್ಮ ಟಿವಿ5 ಸಂದರ್ಶನವೊಂದರಲ್ಲಿ ರಿಲೀಸ್​ಗೂ ಮೊದಲೇ ನಿರ್ಮಾಪಕ ಮುನಿರತ್ನ ಹೇಳಿದಂತೆ ಕುರುಕ್ಷೇತ್ರ ಪ್ರೀ ರಿಲೀಸ್ ಬ್ಯುಸಿನೆಸ್ ಬರೋಬ್ಬರಿ 18ಕೋಟಿ. ಅದೂ ಆಡಿಯೋ ರೈಟ್ಸ್ ಹೊರತಾಗಿ ಅನ್ನೋದು ನಿಮ್ಮ ಗಮನಕ್ಕಿರಲಿ. ಹಿಂದಿ ಡಬ್ಬಿಂಗ್ ರೈಟ್ಸ್ ಹಾಗೂ ಟಿವಿ ರೈಟ್ಸ್ ಮಾತ್ರವೇ 18ಕೋಟಿಗೆ ಸೋಲ್ಡ್ ಔಟ್ ಆಗಿದ್ದಿದ್ದು ನಮ್ಮ ಚಿತ್ರರಂಗದ ಮಟ್ಟಿಗೆ ಹೆಮ್ಮೆಯೇ ಸರಿ.

ವರಮಹಾಲಕ್ಷ್ಮೀ ಹಬ್ಬಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಗ್ರ್ಯಾಂಡ್ ರಿಲೀಸ್ ಆದ ಕುರುಕ್ಷೇತ್ರ ಸಿನಿಮಾ, ಚಿತ್ರತಂಡದ ಪ್ಲ್ಯಾನ್​ನಂತೆ ಈ ವಾರ ತಮಿಳಿನಲ್ಲಿ ರಿಲೀಸ್ ಆಗಿದೆ. ಚಿತ್ರತಂಡ ತಂತ್ರಜ್ಞರು ಹಾಗೂ ಕಲಾವಿದರೊಟ್ಟಿಗೆ ಚೆನ್ನೈಗೇ ಹೋಗಿ ಪ್ರಮೋಷನಲ್     ಆ್ಯಕ್ಟಿವಿಟೀಸ್ ಮಾಡಿಬಂದಿದರು. ಅದ್ರಂತೆ ಅಲ್ಲಿಯೂ ಸಹ ನಮ್ಮ ಹೆಮ್ಮೆಯ ಕುರುಕ್ಷೇತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಮುಂದಿನ ವಾರ ದೇವರ ನಾಡು ಕೇರಳದಲ್ಲಿ ಮಲಯಾಳಂ ಅವತರಣಿಕೆಯ ಕುರುಕ್ಷೇತ್ರ ರಿಲೀಸ್ ಆಗ್ತಿದೆ. ಈಗಾಗ್ಲೇ ಅರ್ಜುನ್ ಸರ್ಜಾ, ಸೋನು ಸೂದ್, ರವಿಶಂಕರ್ ಹಾಗೂ ಸ್ನೇಹ ಇವೆರಡೂ ಚಿತ್ರರಂಗಗಳಿಗೆ ಚಿರಪರಿಚಿತರು. ಅಲ್ಲಿಗೆ ಕುರುಕ್ಷೇತ್ರ ಸೌತ್​ನಲ್ಲಿ ರಂಗೇರೋದ್ರಲ್ಲಿ ಡೌಟೇ ಇಲ್ಲ ಅನ್ನೋದು ಪಕ್ಕಾ ಆಯ್ತು. ಈ ಮೂಲಕ ದರ್ಶನ್ ಪರಭಾಷೆಗೂ ಇಂಟ್ರಡ್ಯೂಸ್ ಆದಂಗಾಯ್ತು.

ಒಂದಷ್ಟು ಮಂದಿ ಕನ್ನಡದ ಜೊತೆ ಜೊತೆಗೆ ಎಲ್ಲಾ ಭಾಷೆಯಲ್ಲೂ ಏಕಕಾಲದಲ್ಲಿ ರಿಲೀಸ್ ಮಾಡಬೇಕಿತ್ತು ಅಂತ ಗೊಣಗಿಕೊಳ್ತಿದ್ರು. ಆದ್ರೆ ಮುನಿರತ್ನ ಹಾಗೂ ರಾಕ್​ಲೈನ್ ಹಂತ ಹಂತವಾಗಿ, ಪಕ್ಕಾ ಪ್ಲ್ಯಾನ್ಡ್ ಆಗಿ ರಿಲೀಸ್ ಮಾಡ್ತಿದ್ದಾರೆ. ನ್ನು ಹಿಂದಿಯಲ್ಲೂ ದೊಡ್ಡ ಮಟ್ಟದಲ್ಲೇ ರಿಲೀಸ್ ಪ್ಲ್ಯಾನ್ ಮಾಡ್ತಿದ್ದು, ಲೇಟ್ ಆದ್ರೂ ಲೇಟೆಸ್ಟ್ ಆಗಿ ಬಿಟೌನ್ ಹೊಕ್ಕಲಿದ್ದಾರೆ ದುರ್ಯೋಧನ ಅನ್ನೋದು ಮಾತ್ರ ಖಾತರಿ ಆಗಿದೆ.

ಅಂದಹಾಗೆ ವಿತರಕರೇ 60ಕೋಟಿ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಅಲ್ಲಿಗೆ ಟಿವಿ ಹಕ್ಕುಗಳು, ಡಬ್ಬಿಂಗ್ ರೈಟ್ಸ್, ಆಡಿಯೋ ರೈಟ್ಸ್ ಹೀಗೆ ಎಲ್ಲವೂ ಸೇರಿ 100ಕೋಟಿ ದಾಟೋದ್ರಲ್ಲಿ ಅನುಮಾನವೇ ಇಲ್ಲ ಅನ್ನೋದು ಕೆಲ ಸಿನಿಪಂಡಿತರ ಲೆಕ್ಕಾಚಾರ.

Recommended For You

About the Author: TV5 Kannada

Leave a Reply

Your email address will not be published. Required fields are marked *