ಸತ್ಯವಂತರಿಗೆ ಇದು ಕಾಲವಲ್ಲ – ಸಚಿವ ಸಿ.ಟಿ ರವಿ

ಮೈಸೂರು: ಸತ್ಯವಂತರಿಗೆ ಇದು ಕಾಲವಲ್ಲ, ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಾರ್ಥವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಬುಧವಾರ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯಕ್ಕೆ ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ. ಶಾಂತವೇರಿ ಗೋಪಾಲಗೌಡರು, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂತಹ ಮಹನೀಯರು ಆದರ್ಶವಾಗಿರಬೇಕು ಎಂಬುದನ್ನು ಬೇರೆ ಇನ್ಯಾರು ಆದರ್ಶ ಆಗಬೇಕು ಎಂಬುದನ್ನು ತೀರ್ಮಾನ ಮಾಡಿಕೊಳ್ಳಲಿ ಎಂದು ಸಿ.ಟಿ ರವಿ ಅವರು ಪ್ರತಿಭಟನಾಕಾರರಿಗೆ ಮಾರ್ಮಿಕವಾಗಿ ತಿರುಗೇಟು ನೀಡಿದರು.

ಇಡಿಗೆ ಯಾವ ಜಾತಿ ಇದೆ, ಯಾವ ಪಕ್ಷ ಇದೆ. ಇಡಿ ಹುಟ್ಟುಹಾಕಿದವರು ಯಾರು.? ಇಡಿ ಹುಟ್ಟುಹಾಕಿದ್ದು ಭಾರತೀಯ ಜನತಾ ಪಾರ್ಟಿ ಅಲ್ಲ. ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಸಂಬಂಧ ಡಿ.ಕೆ ಶಿವಕುಮಾರ್ ಅವರನ್ನು ಇಡಿ ತನಿಖೆ ಮಾಡುತ್ತಿದೆ. ತನಿಖೆ ಮಾಡೋದೇ ತಪ್ಪು ಎಂದರೆ ಹೇಗೆ.? ಎಂದು ಪ್ರವಾಸೋದ್ಯಮ ಸಚಿವರು ಪ್ರಶ್ನೆ ಮಾಡಿದರು.

ಅಲ್ಲದೇ ಹೊಸ ಮೋಟಾರು ಕಾಯ್ದೆ ಬಗ್ಗೆ ಮಾತನಾಡಿದ ಅವರು, ತಪ್ಪು ಮಾಡದೇ ಇರುವವರಿಗೆ ದಂಡದ ಪ್ರಶ್ನೆ ಬರುವುದಿಲ್ಲ. ತಪ್ಪು ಮಾಡುವವರಿಗೆ ಟ್ರಾಫಿಕ್ ದಂಡ ಬೀಳುತ್ತೆ. ನಾನೂ ಈ ಮೊದಲು ಸೀಟ್ ಬೆಲ್ಟ್ ಹಾಕುತ್ತಿರಲಿಲ್ಲ. ಟ್ರಾಫಿಕ್ ಫೈನ್ ಜಾಸ್ತಿಯಾದ ಮೇಲೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕುತ್ತಿದ್ದೇನೆ ಎಂದು ಸಿ.ಟಿ ರವಿ ಪರೋಕ್ಷವಾಗಿ ಹೊಸ ಮೋಟಾರು ಕಾಯ್ದೆಯನ್ನು ಸಮರ್ಥಿಸಿಕೊಂಡರು.

ಒಂದು ವೇಳೆ ನಾನು ತಪ್ಪು ಮಾಡಿದರೆ ಮೊದಲು ನನ್ನಂಥವರಿಗೆ ದಂಡ ಹಾಕಬೇಕು. ಮಿನಿಸ್ಟರ್ ಇರಲಿ, ಸಿಎಂ ಇರಲಿ ಎಲ್ಲರಿಗೂ ದಂಡ ಹಾಕಬೇಕು. ದಂಡದ ಹಣದಲ್ಲಿ ರಸ್ತೆ ರಿಪೇರಿ ಮಾಡಬೇಕೆಂಬ ಕೂಗು ಎದ್ದಿದೆ. ಈಗ ಕೂಗು ಎತ್ತಿರುವವರು ಮೊದಲು ದೇಶದಲ್ಲಿ ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ ಎಂದು ನೋಡಿಕೊಳ್ಳಲಿ ಎಂದು ಅವರು ಹೇಳಿದರು.

ಇನ್ನು ಅಮೆರಿಕಾದಲ್ಲಿ ಶೇ.97 ರಷ್ಟು ಜನ ತೆರಿಗೆ ಕಟ್ಟುತ್ತಾರೆ. ನಮ್ಮಲ್ಲಿ ತೆರಿಗೆ ಕದಿಯುವುದು ಹೇಗೆ ಅಂತ ನೂರು ಮಾರ್ಗ ಹುಡುಕುತ್ತಾರೆ. ಆದರೂ ಅಮೆರಿಕದಂತಹ ರಸ್ತೆಗಳನ್ನು ಬಯಸುತ್ತಾರೆ. ಮನಸ್ಥಿತಿ ಬದಲಾಗದ ಹೊರತು ಪರಿಸ್ಥಿತಿ ಬದಲಾಗಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ನುಡಿದರು.

Recommended For You

About the Author: TV5 Kannada

Leave a Reply

Your email address will not be published. Required fields are marked *