ಡಿ. ಕೆ ಬ್ರದರ್ಸ್‌ಗೆ ಅಭಯ ನೀಡಿದ್ಯಾರು ಗೊತ್ತಾ..?

ನವದೆಹಲಿ:  ಮಾಜಿ ಸಚಿವ ಡಿ. ಕೆ ಶಿವಕುಮಾರ್ ಅರೆಸ್ಟ್ ಆಗಿ ಒಂದು ವಾರ ಆಯ್ತು. ಈಗ ಅವರ ಪುತ್ರಿಗೂ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಈ ನಡುವೆ ಇಂದು ಬೆಂಗಳೂರಿನಲ್ಲಿ ಒಕ್ಕಲಿಗ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿಯಲಿವೆ. ಡಿಕೆ ಬ್ರದರ್ಸ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಮತ್ತೊಮ್ಮೆ ಅಭಯ ನೀಡಿದೆ.

ಇಂದಿಗೆ ಕಾಂಗ್ರೆಸ್ ನಾಯಕ ​​ಡಿ.ಕೆ.ಶಿವಕುಮಾರ್​​ಗೆ ವಿಚಾರಣೆ ಶುರುವಾಗಿ ಒಂದು ವಾರ. ಇಂದು ಕೂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದರು. ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಒಬ್ಬೊಬ್ಬರನ್ನೇ ಕರೆಸಿ ತನಿಖೆ ಮಾಡ್ತಿದ್ದಾರೆ. ಅದರಂತೆ ಸುನೀಲ್​​​ ಶರ್ಮಾ ವಿಚಾರಣೆ ನಡೆಸಿದರು. ವಿಚಾರಣೆಯಲ್ಲಿ ಆಂಜನೇಯ ಹೆಸರು ಬಾಯ್ಬಿಟ್ಟಿದ್ದು, ಶರ್ಮಾ ಹೇಳಿಕೆ ಆಧರಿಸಿ ಆಂಜನೇಯ ಅವರ ಮನೆ ಮೇಲೆ ನಿನ್ನೆ ತಡರಾತ್ರಿ ಅಧಿಕಾರಿಗಳು ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್ ಆಪ್ತ ಕಾರ್ಯದರ್ಶಿ ಆಗಿಯೂ ಕೆಲಸ ಮಾಡ್ತಿದ್ದ ಆಂಜನೇಯ, ದೆಹಲಿಯಲ್ಲಿರುವ ಕರ್ನಾಟಕ ಭವನದ ಸೆಕ್ರೆಟರಿ ಕೂಡ ಆಗಿದ್ದಾರೆ. ಕಳೆದ ಮೂರು ವಾರದಿಂದ ಕರ್ನಾಟಕ ಭವನದತ್ತ ಸುಳಿದಿಲ್ಲ. ಶರ್ಮಾ ಹೇಳಿಕೆ ಆಧರಿಸಿ ಆಂಜನೇಯ ಅವರ ಮನೆಗೆ ನಿನ್ನೆ ರಾತ್ರಿ ಇಡಿ ಅಧಿಕಾರಿಗಳು ಲಗ್ಗೆ ಇಟ್ಟು, ತಪಾಸಣೆ ಮಾಡಿದ್ದಾರೆ.

ಡಿಕೆಶಿ ಮಾತ್ರವಲ್ಲ ಅವರ ಪುತ್ರಿಗೂ ಈಗ ಸಂಕಷ್ಟ ಎದುರಾಗಿದೆ. ಹಿರಿಯ ಪುತ್ರಿ ಐಶ್ವರ್ಯಾಗೆ ಇಡಿ ಸಮನ್ಸ್‌ ನೀಡಿದ್ದು, ನಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸಕ್ಕೆ ಸಮನ್ಸ್‌ ತಲುಪಿಸಲಾಗಿದೆ. ನ್ಯಾಷನಲ್ ಗ್ಲೋಬಲ್ ಕಾಲೇಜಿನಲ್ಲಿ ಪುತ್ರಿ ಐಶ್ವರ್ಯಾ ಹೆಸರಿನಲ್ಲಿ 78 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಡಿಕೆಶಿ ದಾಖಲೆ ಒದಗಿಸಿದ್ದರು. ಈ ಸಂಬಂಧ ವಿಚಾರಣೆಗಾಗಿ ಐಶ್ವರ್ಯಾಗೆ ಇಡಿ ಸಮನ್ಸ್‌ ನೀಡಿದೆ.

ಸಂಕಷ್ಟದಲ್ಲಿ ಸಿಲುಕಿರೋ ಡಿಕೆ ಬ್ರದರ್ಸ್‌ಗೆ ಕಾಂಗ್ರೆಸ್ ಹೈಕಮಾಂಡ್‌ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಡಿಕೆಶಿ ಬಂಧನದ ನಂತರ ಅವರ ಸಹೋದರ ಡಿ.ಕೆ.ಸುರೇಶ್‌ಗೆ ದೂರವಾಣಿ ಕರೆ ಮಾಡಿದ್ದ ಸೋನಿಯಾ, ಇಂದು ದೆಹಲಿಯ 10 ಜನಪಥ್‌ ರಸ್ತೆಯಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಡಿಕೆಶಿ ಆರೋಗ್ಯ, ಅವರ ಮಾನಸಿಕ ಸ್ಥಿತಿ ಬಗ್ಗೆ ಮಾಹಿತಿ ಪಡೆದ ಸೋನಿಯಾ, ಇದು ರಾಜಕೀಯ ದ್ವೇಷ ಎಂಬುದು ತಿಳಿದಿದೆ. ಪಕ್ಷ ನಿಮ್ಮ ಜೊತೆಗಿದೆ. ಕಾನೂನು ಹೋರಾಟ ಮುಂದುವರಿಸಿ, ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಎಂದು ಹೇಳಿದ್ದಾರೆ.

ಡಿಕೆಶಿ ಬಂಧನ ಖಂಡಿಸಿ ವಾರದಿಂದಲೂ ರಾಜ್ಯದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾಳೆ ಬೆಂಗಳೂರಿನಲ್ಲಿ ಒಕ್ಕಲಿಗ ಸಂಘ ಬೀದಿಗಿಳಿಯಲಿವೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇದೆ. ಕರವೇ ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, 35 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಭಾಗವಹಿಸುವ ಸಾಧ್ಯತೆ ಇದೆ.

ರಾಜ್ಯದ ವಿವಿಧೆಡೆಯಿಂದ ಸುಮಾರು 600ಕ್ಕೂ ಹೆಚ್ಚು ವಾಹನಗಳಲ್ಲಿ ಪ್ರತಿಭಟನಾಕಾರರು ಆಗಮಿಸುವ ನಿರೀಕ್ಷೆ ಇದೆ. ಬೆಳಿಗ್ಗೆ 11.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಭದ್ರತೆಗಾಗಿ 2280೦ ಮಂದಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *