ಅಧಿಕಾರಿಗಳಿಗೆ ತಲೆನೋವಾಯ್ತು ಸಿಎಂ ಯಡಿಯೂರಪ್ಪ ಆದೇಶ..!

ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಐಟಿ ಕಾರಿಡಾರ್‌ನಲ್ಲಿ ಮೊದಲು ಮೆಟ್ರೋ ಮುಗಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಸಿಎಂ ಮುಂದೆ ತಲೆಯಾಡಿಸಿ ಬಂದಿರೋ ಅಧಿಕಾರಿಗಳು, ಈಗ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರೋ ಸಿಎಂ ಯಡಿಯೂರಪ್ಪ, ನಗರಕ್ಕೆ ಸಂಬಂಧಿಸಿದ ಒಂದೊಂದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸ್ತಿದ್ದಾರೆ. ಇದೇ ರೀತಿ BMRCL ಸಭೆ ನಡೆಸಿದಾಗ ಮೆಟ್ರೋ ಎರಡನೇ ಹಂತದ ಪ್ರಗತಿಗೆ ಸಿಎಂ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಯಾವ ಮಾರ್ಗ ಮುಖ್ಯ, ಯಾವುದು ಮುಖ್ಯವಲ್ಲ ಅಂತ ಗೊತ್ತಿಲ್ವಾ ನಿಮ್ಗೆ ಅಂತ ಅಧಿಕಾರಿಗಳ ಮೇಲೆ ರೇಗಾಡಿದ್ದಾರೆ.

ಮೆಟ್ರೋ ಅಧಿಕಾರಿಗಳ ಮೇಲೆ ಸಿಎಂ ರೇಗಾಡುವುದಕ್ಕೆ ಮುಖ್ಯ ಕಾರಣ, ಹೆಚ್ಚು ಬೇಡಿಕೆ ಇರೋ ಐಟಿ ಕಾರಿಡಾರ್‌ಗಳಲ್ಲೇ ಮೆಟ್ರೋ ಕಾಮಗಾರಿ ವಿಳಂಬವಾಗಿ ಸಾಗ್ತಿರೋದು.  ಮುಖ್ಯವಾಗಿ ಬೈಯಪ್ಪನಹಳ್ಳಿ – ವೈಟ್ ಫೀಲ್ಡ್ ಮಾರ್ಗದಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗ್ತಿದೆ. ಹೀಗಾಗಿ ಮೊದಲು ಐಟಿ ಬಿಟಿ ಕಾರಿಡಾರ್‌ನಲ್ಲೇ ಮೆಟ್ರೋ ಮುಗಿಸಲು ಸಿಎಂ ಸೂಚಿಸಿದ್ದಾರೆ. ಆದರೆ ಸಿಎಂ ಮುಂದೆ ಎಲ್ಲವನ್ನೂ ಒಪ್ಪಿಕೊಂಡಿರೋ ಅಧಿಕಾರಿಗಳು, ಈಗ ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಹೇಗಪ್ಪಾ ಡೆಡ್ ಲೈನ್ ಒಳಗೆ ಕಾಮಗಾರಿ ಮುಗಿಸೋದು ಅಂತ ಟೆನ್ಷನ್‌ಗೆ ಒಳಗಾಗಿದ್ದಾರೆ.

ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗದಲ್ಲಿ ಇನ್ನೂ ಹೇಳಿಕೊಳ್ಳುವಂತಾ ಕೆಲಸ ಆಗಿಲ್ಲ. ಕೆಆರ್ ಪುರಂ ನಲ್ಲಿ ಮೆಟ್ರೋಗೆ ಇನ್ನೂ ಸಾಕಷ್ಟು ಅಡೆತಡೆಗಳು ಎದುರಾಗ್ತಲೇ ಇದೆ. ಹೀಗಾಗಿ ಸಿಎಂ ಹೇಳಿದಂತೆ 2021ಕ್ಕೆ ಈ ಮಾರ್ಗ ಮುಗಿಸೋದು ಕಷ್ಟ ಅಂತ ಮೆಟ್ರೋ ಅಧಿಕಾರಿಗಳಿಗೆ ತಲೆನೋವಾಗಿದೆ.

ಪ್ರಯಾಣಿಕರ ಬೇಡಿಕೆ ಆಧಾರದ ಮೇಲೆ ಐಟಿ ಕಾರಿಡಾರ್‌ನಲ್ಲಿ ಮೆಟ್ರೋ ಕಾಮಗಾರಿ ಮುಗಿಸಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ, ಸಿಎಂ ಏನೇ ಸೂಚನೆ ಕೊಟ್ರೂ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗದ ಮೆಟ್ರೋ 2021ಕ್ಕೆ ಮುಗಿಯೋದು ಸಾಧ್ಯವೇ ಇಲ್ಲ.

Recommended For You

About the Author: TV5 Kannada

Leave a Reply

Your email address will not be published. Required fields are marked *