ಬಡ ರೈತನ ಮಗ – ಇಸ್ರೋ ಅಧ್ಯಕ್ಷ ಕೆ ಶಿವನ್‌ ಬಾಲ್ಯ ಹೇಗಿತ್ತು ಗೊತ್ತಾ?

ಬೆಂಗಳೂರು:  ಇನ್ನೇನು ಚಂದ್ರಯಾನ-2 ಯಶಸ್ವಿ ಆಗೇ ಬಿಡ್ತು ಅನ್ನುವಷ್ಟತ್ತಿಗೆ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿತು. ಅದು ಭಾರತೀಯರ ಬೆಟ್ಟದಷ್ಟು ನಿರೀಕ್ಷೆಗೆ ತಣ್ಣೀರೆರಚಿದ ಕ್ಷಣ. ಹಗಲು ರಾತ್ರಿ ತನು ಮನ ಧನ ಸಮರ್ಪಿಸಿ ತನ್ನ ಇಡೀ ತಂಡದ  ಜೊತೆ ಚಂದ್ರಯಾನಕ್ಕಾಗಿ ಕೆಲಸ ಮಾಡಿದ್ದ ಆ ಜೀವಕ್ಕೆ ಅತೀವ ನಿರಾಸೆ ಆಗಿ ಬಿಡ್ತು. ನಿರಾಸೆಯಿಂದ ಗಳಗಳನೇ ಅಳುತ್ತಿದ್ದರು ಇಸ್ರೋ ಅಧ್ಯಕ್ಷ ಕೆ. ಶಿವನ್.
ಪ್ರಧಾನಿ ಮೋದಿ ಮಗುವಿನಂತೆ ಅಪ್ಪಿ ಶಿವನ್ ರನ್ನು ಸಂತೈಸಿದರು. ಶಿವನ್ ಗೆ ಧೈರ್ಯ ಹೇಳಿ ಇನ್ನೊಮ್ಮೆ ಪ್ರಯತ್ನಿಸೋಣ ಡೋಂಟ್ ವರಿ ಎಂದು ಹೇಳಿ ಮೋದಿ ತೆರಳಿದರು. ಇವತ್ತು ವಾಟ್ಸಾಪ್ ಫೇಸ್ ಬುಕ್ ನಲ್ಲಿ ಎಲ್ಲಿ ನೋಡಿದರೂ ಶಿವನ್ ರನ್ನು ಮೋದಿ ಸಂತೈಸುತ್ತಿರೋ ದೃಷ್ಯಗಳು ಕಂಡು ಬಂದವು.
ಸಾಮಾನ್ಯ ಬಡ ರೈತನ ಮಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಅಧ್ಯಕ್ಷನಾದ ಹಿಂದೆ ಅದೆಷ್ಟು ಸವಾಲುಗಳಿದ್ದವು ಗೊತ್ತೆ? ಜಗತ್ತಿನ ಯಾವ ವಿಶ್ವವಿದ್ಯಾಲಯಗಳೂ ಕಲಿಸದ ಪಾಠಗಳನ್ನು ಬಡತನ ಕಲಿಸುತ್ತದೆ ಎಂಬ ಮಾತಿದೆ. ಬಡತನ, ಸಾಧಿಸುವ ಛಲ ಶಿವನ್ ರನ್ನು ಸಾಧನೆಯ ಶಿಖರದ ತುತ್ತತುದಿಗೇರಿಸಿದೆ.
ಶಿವನ್  ತಮಿಳು ನಾಡಿನ ಕನ್ಯಾಕುಮಾರಿ ಜಿಲ್ಲೆಯ ಸರಕ್ಕಲ್ ವಿಲೈ ಎಂಬ  ಪುಟ್ಟ ಗ್ರಾಮದಲ್ಲಿ ಜನಿಸಿದರು. ಶಿವನ್ ಪೂರ್ತಿ ಹೆಸರು ಕೈಲಾಸವಡಿವೋ ಶಿವನ್. ಅಪ್ಪ ರೈತ. ಬಡ ಕುಟುಂಬದಲ್ಲಿ ಜನಿಸಿದ ಶಿವನ್ ಗೆ ಸಾಧನೆಯ ತುಡಿತ. ಏನಾದರೂ ಮಾಡಿ ದೊಡ್ಡ ಸಾಧನೆ ತಮ್ಮದಾಗಿಸಿಕೊಳ್ಳಬೇಕೆಂಬ ಉತ್ಸಾಹ. ಬಡತನದ ಕಾರಣ ಶಿವನ್​ರ ಸಹೋದರ ಹಾಗೂ ಇಬ್ಬರು ಸಹೋದರಿಯರಿಗೆ ವಿದ್ಯಾಭ್ಯಾಸ ಮುಂದುವರೆಸೋದು ಸಾಧ್ಯ ಆಗಿರಲಿಲ್ಲ.ಓದುವ ಅಭಿಲಾಷೆ  ಇದ್ದ ಕಾರಣ  ಶಿವನ್ ಛಲ ಬಿಡದೇ ವಿದ್ಯಾಭ್ಯಾಸ ಮುಂದುವರೆಸಿದರು.
ಓದುವುದರ ಜೊತೆ ಬಿಡುವಿನಲ್ಲಿ ತಂದೆಯ ಜೊತೆ ಗದ್ದೆ ಕೆಲಸ ಮಾಡ್ತಿದರು. ಮಗನ ಓದುವ ಉತ್ಸಾಹ ಕಂಡು ತಂದೆ ಕೂಡಾ ಸ್ಕೂಲ್ ಗೆ ಹೋಗೋದು ಬೇಡ ಅನಲಿಲ್ಲ. ಹಾಕಿಕೊಳ್ಳೋದಕ್ಕೆ ಒಂದು ಜೊತೆ ಚಪ್ಪಲಿ, ಒಳ್ಳೆ ಬಟ್ಟೆಯೂ ಶಿವನ್ ಬಳಿ ಇರಲಿಲ್ಲ.
ಶಿವನ್ ಹೇಳುತ್ತಾರೆ “ನಾನು ಚಪ್ಪಲಿ ಹಾಗೂ ಶೂ ಗಳಿಲ್ಲದೇ ನನ್ನ ಬಾಲ್ಯ ಕಳೆದಿದ್ದೇನೆ ”  ಕಾಲೇಜಿಗೆ ಹೋಗುವ ಸಮಯದಲ್ಲಿ ಹಾಕಿಕೊಳ್ಳಲು ಒಂದೊಳ್ಳೆ ಬಟ್ಟೆ ಇರಲಿಲ್ಲ. ಪ್ಯಾಂಟ್ ಇಲ್ಲದ ಕಾರಣ ಕೇವಲ ಪಂಚೆ( ಲುಂಗಿ) ಉಟ್ಟುಕೊಂಡೇ ನನ್ನ ಇಡೀ ಡಿಗ್ರಿ ಮುಗಿಸಿದ್ದೀನಿ, ಲುಂಗಿ ಉಡುತ್ತಿದ್ದ ಶಿವನ್ ರನ್ನು ನೋಡಿ ಕಾಲೇಜು ಗಹ ಗಹಿಸಿ ನಕ್ಕರೂ ಅವರು ತಲೆಕೆಡಿಸಿಕೊಂಡಿರಲಿಲ್ಲ.  ತಮ್ಮ ಗುರಿ ಸಾಧನೆಯೊಂದೇ ಅವರ ತಲೆಯಲ್ಲಿತ್ತು.
ಮದ್ರಾಸ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ( MIT) ಯಲ್ಲಿ ಏರೋನಾಟಿಕಲ್ ಇಂಜನಿಯರಿಂಗ್ ಪದವಿಗೆ ಪ್ರವೇಶ ಪಡೆದಾಗಲೇ ಶಿವನ್ ಮೊದಲ ಬಾರಿ ಪ್ಯಾಂಟ್ ಹಾಕಿದ್ದು,  ಪ್ರಾಥಮಿಕ, ಪ್ರೌಡ ಶಿಕ್ಷಣ ತಮಿಳು ಮಾಧ್ಯಮದಲ್ಲಿ ಪೂರೈಸಿದ ಶಿವನ್  ನಾಗರಕೊಯ್ಲ್ ನ ಎಸ್ ಟಿ ಹಿಂದೂ ಕಾಲೇಜಿನಲ್ಲಿ ಪದವಿ ಪಡೆದರು. 1980 ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( MIT) ಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಪಡೆದರು.ನಂತರ ಸ್ನಾತಕೋತ್ತರ ಪದವಿ ಪೂರೈಸಿದರು. ಬಾಂಬೆಯ IIT ಬಾಂಬೆ ವಿಶ್ವವಿದ್ಯಾಲಯದಿಂದ 2006 ರಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ವಿಷಯದಲ್ಲಿ ಪಿ.ಹೆಚ್ ಡಿ ಪಡೆದರು.
1982  ರಲ್ಲಿ ಇಸ್ರೋ ಸೇರಲು ಯಶಸ್ವಿಯಾದ ಶಿವನ್, ಇಸ್ರೋದ ಎಲ್ಲಾ ರಾಕೇಟ್ ಪ್ರೋಗ್ರಾಂಗಳಲ್ಲೂ ಕೆಲಸ ಮಾಡಿದರು. ನಂತರ ಅವರ ಚಾಣಾಕ್ಷತನ, ಕಾರ್ಯಕ್ಷಮತೆ, ಅನುಭವಕ್ಕೆ ಇಸ್ರೋ ಅಧ್ಯಕ್ಷ ಪಟ್ಟ ಒಲಿದು ಬಂತು. ಇಸ್ರೋ ಅಧ್ಯಕ್ಷರಾಗುವ ಮೊದಲು ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಶಿವನ್ ರಾಕೇಟ್ ಎಕ್ಸಫರ್ಟ್ ಎಂದೇ ಫೇಮಸ್ ಆಗಿದ್ದಾರೆ. ತಮ್ಮ ಫ್ರೀ ಟೈಂ ನಲ್ಲಿ ತಮಿಳು ಗೀತೆಗಳನ್ನು ಕೇಳುತ್ತಾರೆ. ನಟ ರಾಜೇಶ್ ಖನ್ನಾ‌ ಅಭಿನಯದ ‘ಆರಾಧನ’ ಶಿವನ್ ಅವರ ಫೇವರೀಟ್ ಫಿಲ್ಮ್.
ಚಂದ್ರಯಾನ- 2 ಕ್ಕಾಗಿ ಶಿವನ್ ತಿಂಗಳುಗಟ್ಟಲೇ ನಿದ್ದೆ ಬಿಟ್ಟು ಕೆಲಸ ಮಾಡಿದ್ದರು. ಪರಿಶ್ರಮ ಪಟ್ಟಿದ್ದರು. ಆದರೆ ಕೊನೇ ಕ್ಷಣದಲ್ಲಿ ಅದೇನಾಯ್ತೋ… ಚಂದ್ರನ  ಸ್ಪರ್ಷ ಸಾಧ್ಯವೇ ಆಗಲಿಲ್ಲ. ಆದರೆ ಶಿವನ್ ಸರ್ ನಿಮ್ಮ ಜೊತೆ ಇಡೀ ಭಾರತ ಇದೆ. ಪ್ರಯತ್ನ ಫಲ ನೀಡಿಲ್ಲ. ಆದರೆ ಮುಂದೆ ಯಶಸ್ಸು ಸಿಕ್ಕೇ ಸಿಗುತ್ತದೆ. ಆಗಿದ್ದಾಗಿ ಹೋಯ್ತು. ಚಂದ್ರನ ಕಡೆ ಮತ್ತೊಂದು ರಾಕೇಟ್ ಹಾರಿಸಿಯೇ ಬಿಡೋಣ ಏ‌ನಂತೀರಿ‌‌.
ಪವನ್ ಕುಮಾರ್,  ರಾಜಕೀಯ ವರದಿಗಾರರು, ಟಿವಿ 5 ಕನ್ನಡ

Recommended For You

About the Author: Dayakar

Leave a Reply

Your email address will not be published. Required fields are marked *