ಚಂದ್ರಯಾನ-2 ಏಕೆ..? ವೈಜ್ಞಾನಿಕ ಉದ್ದೇಶ ಏನು..?

ಭಾರತದ ಬಹುನಿರೀಕ್ಷಿತ ಚಂದ್ರಯಾನ-2 ಈಗ ಅಂತಿಮ ಘಟ್ಟ ತಲುಪಿದೆ. ಚಂದ್ರನ ಮೇಲೆ ಇಳಿಯಲು ಕೌಂಟ್‌ಡೌನ್‌ ಶುರುವಾಗಿದ್ದು, ಆ ಕ್ಷಣಕ್ಕಾಗಿ ಭಾರತೀಯರು ಮಾತ್ರವಲ್ಲದೆ, ಇಡೀ ವಿಶ್ವವೇ ತುದಿಗಾಲ ಮೇಲೆ ನಿಂತಿದೆ.

ಈ ಹಿಂದೆ ಭಾರತ ಚಂದ್ರಯಾನ ಕೈಗೊಂಡಿದ್ದರೂ ಚಂದ್ರಯಾನ-2 ಇಡೀ ವಿಶ್ವದ ಗಮನ ಸೆಳೆದಿದೆ. ಸಂಪೂರ್ಣ ದೇಶೀಯ ತಂತ್ರಜ್ಞಾನ ಅಳವಡಿಕೆ ಈ ಬಾರಿಯ ವಿಶೇಷ.

ಚಂದ್ರನ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳಲು ಎಲ್ಲ ದೇಶಗಳೂ ಪ್ರಯತ್ನಿಸುತ್ತಿವೆ. ಇಸ್ರೊ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಬೇರಾವ ದೇಶಗಳೂ ಸಮೀಪಿಸದ ಚಂದ್ರನ ದಕ್ಷಿಣ ಧ್ರುವಪ್ರದೇಶ ತಲುಪಲಾಗುತ್ತಿದೆ. ಇಲ್ಲಿ ನಡೆಯಲಿರುವ ಸಂಶೋಧನೆಗಳು ಭಾರತ ಅಲ್ಲದೆ ಇಡೀ ಮನುಕುಲಕ್ಕೆ ನೆರವಾಗಲಿವೆ. ಇದು ಮತ್ತಷ್ಟು ಯಾನಗಳಿಗೆ ಪ್ರೇರಣೆಯೂ ಆಗಬಲ್ಲದು ಎಂಬುದು ಇಸ್ರೊ ಅಶಾವಾದ.

ಚಂದ್ರ ನಮಗೆ ಅತಿಹತ್ತಿರದ ಆಕಾಶಕಾಯ. ಹೀಗಾಗಿ, ಸಂಶೋಧನೆ ಮತ್ತು ದಾಖಲೀಕರಣ ಸುಲಭ. ಬಾಹ್ಯಾಕಾಶ ಯೋಜನೆಗಳಿಗೆ ಬೇಕಾದ ತಂತ್ರಜ್ಞಾನ ಪರೀಕ್ಷೆಗೊಳಪಡಿಸುವ ಭರವಸೆಯ ಪ್ರಯೋಗಾಲಯವೂ ಆಗಿದೆ. ಹಲವು ಪ್ರಯೋಗಗಳಿಗೆ ಚಂದ್ರಯಾನ ವೇದಿಕೆಯಾಗಲಿದೆ.

ಚಂದ್ರನ ದಕ್ಷಿಣ ಧ್ರುವ ವಿಶಿಷ್ಟ ಮಾತ್ರವಲ್ಲದೆ ವಿಜ್ಞಾನಿಗಳ ಪಾಲಿನ ಕುತೂಹಲದ ಗಣಿ ಕೂಡ. ಈ ಭಾಗ ಕತ್ತಲಿನಿಂದ ಕೂಡಿದೆ. ಮೇಲಾಗಿ ಉತ್ತರ ಭಾಗಕ್ಕೆ ಹೋಲಿಸಿದರೆ, ಇಲ್ಲಿನ ಮೇಲ್ಮೈ ಪ್ರದೇಶದ ವ್ಯಾಪ್ತಿ ದೊಡ್ಡದು. ಶಾಶ್ವತವಾಗಿ ಕತ್ತಲಿನಿಂದ ಕೂಡಿರುವ ಈ ಪ್ರದೇಶದಲ್ಲಿ ನೀರಿನ ಅಸ್ತಿತ್ವ ಇರುವ ಸಾಧ್ಯತೆ ಇದೆ. ದಕ್ಷಿಣ ಧ್ರುವದಲ್ಲಿರುವ ಕುಳಿಗಳು ಬಹಳ ತಂಪಾಗಿದ್ದು, ಸೌರಮಂಡಲ ವ್ಯವಸ್ಥೆ ಸೃಷ್ಟಿಯ ಹಂತದ ದಾಖಲೆಗಳನ್ನೂ ಹೊಂದಿರುವ ಸಾಧ್ಯತೆಯಿದೆ.

ಭೂಗ್ರಹದ ಹುಟ್ಟಿನ ಚರಿತ್ರೆ ಕುರಿತು ಚಂದ್ರ ಅತ್ಯುತ್ತಮ ಮಾಹಿತಿ ಒದಗಿಸುತ್ತಾನೆ. ಹಾಗೆಯೇ ಚಂದ್ರನ ಮೂಲದ ಬಗ್ಗೆ ಮತ್ತಷ್ಟು ಮಾಹಿತಿಯ ಅಗತ್ಯವಿದೆ. ಚಂದ್ರನ ಹುಟ್ಟು ಹಾಗೂ ವಿಕಾಸ ಪ್ರಕ್ರಿಯೆ ಅರಿಯಬೇಕಾದರೆ, ಚಂದ್ರನ ಮೇಲ್ಮೈ ಸಂಯೋಜನೆ ವ್ಯತ್ಯಾಸ ಅರಿಯುವುದು ಅತಿಮುಖ್ಯ. ಚಂದ್ರನಲ್ಲಿ ನೀರಿನ ಕಣಗಳಿವೆ ಎಂಬುದಕ್ಕೆ ಚಂದ್ರಯಾನ-1 ಯೋಜನೆ ಸಾಕ್ಷ್ಯ ನೀಡಿತ್ತು. ಇದೀಗ ಚಂದ್ರನ ಮೇಲ್ಮೈನಲ್ಲಿ ನೀರಿನ ಕಣಗಳ ಹಂಚಿಕೆ ಹಾಗೂ ಪ್ರಸರಣ ತಿಳಿದುಕೊಳ್ಳಬೇಕಿದೆ, ಮೇಲ್ಮೈ ಕೆಳಭಾಗ ಹಾಗೂ ಬಾಹ್ಯಗೋಳದಲ್ಲಿ ನೀರಿನ ಅಣುಗಳ ಇರುವಿಕೆ ಕುರಿತು ನಡೆಯುವ ಸಂಶೋಧನೆಯು ಗ್ರಹದ ನೀರಿನ ಮೂಲ ತಿಳಿಯಲು ಸಹಕಾರಿಯಾಗಲಿದೆ.

ಕೋಟ್ಯಂತರ ವರ್ಷಗಳಿಂದ ಈ ಭಾಗದ ಕುಳಿಗಳ ಮೇಲೆ ಸೂರ್ಯನ ಬೆಳಕಿನ ಸ್ಪರ್ಶವಾಗಿಲ್ಲ. ಇದರಿಂದಾಗಿ ಸೌರವ್ಯೂಹ ಸೃಷ್ಟಿ ರಹಸ್ಯದ ದಾಖಲೆಗಳನ್ನು ಈ ಪ್ರದೇಶ ಕಾಪಿಟ್ಟುಕೊಂಡಿರುವ ಸಾಧ್ಯತೆ ಹೇರಳವಾಗಿದೆ ಎಂಬುದು ವಿಜ್ಞಾನಿಗಳ ನಂಬಿಕೆ. ಇಲ್ಲಿ ಸದಾ ನೆರಳು ಆವರಿಸಿಕೊಂಡಿರುವುದರಿಂದ ನೆಲದ ಕುಳಿಗಳಲ್ಲಿ 1,000 ಲಕ್ಷ ಟನ್‌ ನೀರಿನ ಸಂಗ್ರಹ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ನೆಲದ ಪದರದಲ್ಲಿ ಹೈಡ್ರೋಜನ್‌, ಅಮೋನಿಯಾ, ಮಿಥೇನ್, ಸೋಡಿಯಂ, ಪಾದರಸ ಹಾಗೂ ಬೆಳ್ಳಿ ಅಂಶ ಒಳಗೊಂಡ ನೈಸರ್ಗಿಕ ಸಂಪನ್ಮೂಲಗಳಿರುವ ಸಾಧ್ಯತೆ. ಮುಂದಿನ ಬಾಹ್ಯಾಕಾಶ ಶೋಧಗಳಿಗೆ ಚಂದ್ರನ ಮೇಲಿನ ಈ ಭಾಗವು ಇಳಿದು ಹೊರಡುವ ನಿಲ್ದಾಣವಾಗಿ ಬಳಕೆಯಾಗಬಹುದು.

ಭಾರತದ ಚಂದ್ರನ ಅಧ್ಯಯನ ಅಧ್ಯಾಯ ಆರಂಭವಾಗಿದ್ದು ಚಂದ್ರಯಾನ-1 ಮೂಲಕ. 2008ರ ಅಕ್ಟೋಬರ್ 22ರಂದು ಶ್ರೀಹರಿಕೋಟಾದಿಂದ ಚಂದ್ರಯಾನ ಉಡ್ಡಯನ ಆಗಿತ್ತು. ಆಗಸ್ಟ್ 15, 2003ರಲ್ಲಿ ಪ್ರಧಾನಿ ವಾಜಪೇಯಿ ಚಂದ್ರಯಾನ-1ಗೆ ಅನುಮೋದನೆ ನೀಡಿದ್ದರು.

ಚಂದ್ರನಲ್ಲಿ ನೀರಿನ ಕಣಗಳಿವೆ ಎಂದು ದೃಢಪಟ್ಟಿದ್ದು ಚಂದ್ರಯಾನ-1 ಯೋಜನೆಯಿಂದ. ಒಂದು ಕಾಲದಲ್ಲಿ ಚಂದ್ರನಲ್ಲಿ ದ್ರವರೂಪದ ನೀರು ಇತ್ತು ಎಂದು ಸಂಶೋಧನೆ ತಿಳಿಸಿತ್ತು. ಯೋಜನೆ ಅವಧಿಯಲ್ಲಿ ಸುಮಾರು 25 ಸೌರಜ್ವಾಲೆ ಪತ್ತೆಹಚ್ಚಲಾಗಿತ್ತು. ಟೈಟಾನಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ ಅಲ್ಯುಮಿನಿಯಂ ಮತ್ತು ಕಬ್ಬಿಣದ ಅಂಶ ಗುರುತಿಸಿತ್ತು. ಸಾಕಷ್ಟು ಅಚ್ಚರಿಯ ದತ್ತಾಂಶಗಳನ್ನು ಸಂಗ್ರಹಿಸಿಲಾಗಿದೆ ಎಂದು ಇಸ್ರೊ ತಿಳಿಸಿತ್ತು.

Recommended For You

About the Author: Dayakar

Leave a Reply

Your email address will not be published. Required fields are marked *