ಕುತೂಹಲ ಮೂಡಿಸಿದ ಅಮಿತ್ ಶಾ ಪಟ್ಟಿ,15 ಮಂದಿಗೆ ಲಕ್‌ ..!

ಸರ್ಕಾರ ರಚನೆಯಾಗಿ 23 ದಿನ ಕಳೆದಿದೆ. ಸಚಿವ ಸಂಪುಟ ವಿಸ್ತರಣೆ ಮಾತ್ರ ಆಗಿಲ್ಲ. ಹಲವು ದಿನಗಳಿಂದ ಮಂತ್ರಿ ಆಗೋಕೆ ಕಾಯ್ತಿರೋ ಆಕಾಂಕ್ಷಿಗಳಿಗೆ ಒಂದು ಕಡೆ ಆನಂದ ,ಇನ್ನೊಂದು ಕಡೆ ತಳಮಳ ಉಂಟಾಗಿದೆ.

ಬಿಜೆಪಿ ಸರ್ಕಾರ ರಚನೆಯಾಗಿ ಸುಮಾರು 23 ದಿನಗಳ ನಂತರ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದೆ. ಸಿಎಂ ಯಡಿಯೂರಪ್ಪ ಪಟ್ಟು ಹಿಡಿದು ದೆಹಲಿಯಲ್ಲಿ ಕುಳಿತು ಬಿಜೆಪಿ ವರಿಷ್ಠ ಅಮಿತ್‌ ಶಾ ಅವರಿಂದ ಸಮ್ಮತಿ ಪಡೆದು ಬಂದಿದ್ದಾರೆ. ಆದರೆ, ಯಾರಿಗೆ ಸಚಿವ ಅವಕಾಶ ನೀಡಲಾಗುತ್ತೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಮಂಗಳವಾರ ಪ್ರಮಾಣವಚನ ದಿನವೇ ಬಹಿರಂಗವಾಗಲಿದೆ.

ಯಡಿಯೂರಪ್ಪ ನೀಡಿರುವ ಪಟ್ಟಿ ಪರಿಶೀಲಿಸಿದ ನಂತರ ನಾಳೆ ಸಚಿವರ ಪಟ್ಟಿ ಫೈನಲ್‌ ಮಾಡಲಿದ್ದಾರೆ ಅಮಿತ್ ಶಾ. ಅಲ್ಲಿಯವರೆಗೂ ಎಲ್ಲವೂ ಸಸ್ಪೆನ್ಸ್. ಈಗ ಅರ್ಧ ಸಂಪುಟ ಮಾತ್ರ ವಿಸ್ತರಣೆಯಾಗ್ತಿದ್ದು, ಮೊದಲ ಹಂತದಲ್ಲಿ ಸುಮಾರು 13ರಿಂದ 15 ಮಂದಿಗೆ ಮಂತ್ರಿಭಾಗ್ಯ ಒಲಿಯೋ ಸಾಧ್ಯತೆ ಇದೆ.

ಈ ನಡುವೆ, ಒಂದೆಡೆ ಕೆಲ ಆಕಾಂಕ್ಷಿಗಳ ಮುಖದಲ್ಲಿ ಸಂತೋಷ ಎದ್ದು ಕಾಣ್ತಿದ್ರೆ, ಮತ್ತೆ ಹಲವರಲ್ಲಿ ಆತಂಕ ಗೋಚರಿಸುತ್ತಿದೆ. ಆಕಾಂಕ್ಷಿಗಳ ದಂಡು ಯಡಿಯೂರಪ್ಪ ಮನೆಗೆ ಲಗ್ಗೆ ಇಡುತ್ತಿದೆ. ಬೆಳಿಗ್ಗೆಯಿಂದಲೂ ಧವಳಗಿರಿ ನಿವಾಸಕ್ಕೆ ಆರ್.ಅಶೋಕ್, ಗೋವಿಂದ ಕಾರಜೋಳ, ವಿ.ಸೋಮಣ್ಣ, ರಾಜುಗೌಡ, ಎಸ್.ಆರ್.ವಿಶ್ವನಾಥ್, ರಾಮಣ್ಣ ಲಮಾಣಿ, ಪ್ರಭು ಚೌವ್ಹಾಣ್ ಸೇರಿದಂತೆ ಹಲವು ನಾಯಕರು ಭೇಟಿ ನೀಡಿ, ಸಚಿವ ಸ್ಥಾನದ ಬಗ್ಗೆ ಚರ್ಚಿಸಿದರು. ಆದರೆ, ಯಾರಿಗೂ ಯಡಿಯೂರಪ್ಪ ಭರವಸೆ ನೀಡಿಲ್ಲ. ಎಲ್ಲದಕ್ಕೂ ವರಿಷ್ಠರ ಕಡೆ ಬೆರಳು ಮಾಡಿ ತೊರಿಸಿ, ಕಾದು ನೋಡೊಣ ಎಂದಷ್ಟೆ ಹೇಳಿದ್ದಾರೆ.

ಅತ್ತ, ಬೆಳಗಾವಿಯಲ್ಲಿ ಮಾತನಾಡಿರೋ ಉಮೇಶ್ ಕತ್ತಿ, ನನಗೆ ಮಾತ್ರ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಗೆ 4 ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದೇನೆ. ಮೊದಲ ಹಂತದಲ್ಲಿ ಎರಡಾದ್ರೂ ಸಿಗಬೇಕು ಎಂದಿದ್ದಾರೆ.

ಬಹಳಷ್ಟು ಶಾಸಕರು ಲಾಬಿ ನಡೆಸುತ್ತಿದ್ದರೂ ಯಾರು ಅಸಮಾಧಾನ ಹೊರಹಾಕುತ್ತಿಲ್ಲ. ಒಂದು ವೇಳೆ ಈಗಲೇ ಅಸನಾಧಾನ ಹೊರಹಾಕಿದರೆ ಮುಂದೆ ಸಿಗುವ ಸ್ಥಾನವು ಕೈತಪ್ಪುವ ಆತಂಕದಲ್ಲಿದ್ದಾರೆ.

ಅಮಿತ್‌ ಶಾ ಅಂತಿಮಗೊಳಿಸುವ ಸಚಿವ ಪಟ್ಟಿ ಬಗ್ಗೆ ಸ್ವತಃ ಸಿಎಂ ಯಡಿಯೂರಪ್ಪ ಅವರಲ್ಲೇ ಕುತೂಹಲ ಮೂಡಿರೋದು ಸುಳ್ಳಲ್ಲ. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜ್ಯಪಾಲ ವಜೂಬಾಯಿ ವಾಲಾ ಸಮಯ ನಿಗದಿ ಮಾಡಿದ್ದಾರೆ.

Recommended For You

About the Author: Dayakar

Leave a Reply

Your email address will not be published. Required fields are marked *