ಕುಮಾರಸ್ವಾಮಿ ಗಮನಕ್ಕೆ ಬಾರದೆ ಇದು ನಡೆದಿಲ್ಲ – ಅನರ್ಹ ಶಾಸಕರು

ರಾಜ್ಯ ರಾಜಕಾರಣದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ಕಿಚ್ಚೆಬ್ಬಿಸಿದೆ. ಮೂರು ಪಕ್ಷಗಳ ನಡುವೆ ಆರೋಪ – ಪ್ರತ್ಯಾರೋಪ ಜೋರಾಗಿದೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಫೋನ್ ಕದ್ದಾಲಿಕೆ ಆಗಿರೋದು ನೂರಕ್ಕೇ ನೂರಷ್ಟು ಸತ್ಯ ಅಂತ ಬಿಜೆಪಿಯವರು ಹೇಳಿದ್ದು, ನಾನವನಲ್ಲ ಅಂತಿದ್ದಾರೆ ಮಾಜಿ ಸಿಎಂ. ಕಾಂಗ್ರೆಸ್‌ನವರು ತನಿಖೆಯಾಗಲಿ ಅಂತ ಹೇಳ್ತಿದ್ದಾರೆ.

ಈ ನಡುವೆ, ಪುತ್ರನ ವಿರುದ್ಧ ಆರೋಪ ಮಾಡಿರುವ ಬಿಜೆಪಿ ನಾಯಕರ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಗರಂ ಆಗಿದ್ದಾರೆ. ಅವರ ಬಂಡವಾಳವೂ ನನಗೆ ಗೊತ್ತಿದೆ ಎಂದು ಗುಡುಗಿದ್ದಾರೆ. ಯಾರ ಕಾಲದಲ್ಲಿ ಏನೇನು ಆಗಿದೆ ಅಂತ ಗೊತ್ತಿದೆ. ಫೋನ್ ಕದ್ದಾಲಿಕೆ ಬಗ್ಗೆ ಸಾಕಷ್ಟು ಮಾತನಾಡಬಲ್ಲೆ ಎಂದಿದ್ದಾರೆ.

ಈ ನಡುವೆ, ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಆ ಬಗ್ಗೆ ನನಗೆ ಗೊತ್ತಿಲ್ಲ. ತನಿಖೆಯಾಗಲಿ. ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಬಹುತೇಕ ಕಾಂಗ್ರೆಸ್ ನಾಯಕರ ಅಭಿಪ್ರಾಯವೂ ಇದೇ ಆಗಿದೆ.

ಇತ್ತ, ಬಿಜೆಪಿ ನಾಯಕರು ತನಿಖೆಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಅಥವಾ ಶಾಸಕರ ಹೆದರಿಸಲು ಹೀಗೆ ಮಾಡಿದರೆ ಅವರಿಗೆ ಶಿಕ್ಷೆಯಾಗಲೇಬೇಕು ಅಂತಿದ್ದಾರೆ.

ಇತ್ತ, ಶ್ರೀರಾಮುಲು ಕೂಡ ನನ್‌ ಫೋನ್‌ಗೂ ಕನ್ನ ಹಾಕಿದ್ದಾರೆ ಅಂತಿದ್ದಾರೆ. ಟ್ಯಾಪಿಂಗ್ ಲಿಸ್ಟ್‌ನಲ್ಲಿ ನನ್ನ ಹೆಸರೂ ಇತ್ತು. ಸಿಎಂ ಯಡಿಯೂರಪ್ಪ ದೆಹಲಿಯಿಂದ ಬಂದ ಮೇಲೆ ತನಿಖೆಗೆ ಬಗ್ಗೆ ನಿರ್ಧಾರ ತಗೋಬಹುದು ಅಂತ ರಾಮುಲು ಹೇಳಿದ್ದಾರೆ.

ಈ ಮಧ್ಯೆ, ಅನರ್ಹ ಶಾಸಕರು ಇದೊಂದು ಪರಮ ನೀಚ ಕೆಲಸ ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಬಳಿಯೇ ಗುಪ್ತಚರ ಇರುತ್ತೆ. ಕುಮಾರಸ್ವಾಮಿ ಗಮನಕ್ಕೆ ಬಾರದೆ ಇದು ನಡೆದಿಲ್ಲ ಎಂದಿದ್ದಾರೆ.  ಎಚ್.ವಿಶ್ವನಾಥ್‌. ನಮಗೆ ಬ್ಲಾಕ್‌ಮೇಲ್ ಮಾಡಲಾಗಿದೆ ಎಂದು ಅನರ್ಹ ಶಾಸಕರು ಆರೋಪಿಸಿದ್ದಾರೆ.

ಈ ನಡುವೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಫೋನ್ ಕದ್ದಾಲಿಕೆ ಪ್ರಕರಣದ ತನಿಖಾ ವರದಿ ನೀಡಲು ಡಿಜಿ- ಐಜಿಪಿ ನೀಲಮಣಿ ರಾಜು ತೀರ್ಮಾನಿಸಿದ್ದಾರೆ.

ಪ್ರಕರಣದಲ್ಲಿ ಹಲವರು ಹೆಸರು ಕೇಳಿಬರುತ್ತಿದೆ. ಸಿಸಿಬಿ ಪ್ರಾಥಮಿಕ ತನಿಖೆಯಲ್ಲಿ ಒಬ್ಬ ಐಪಿಎಸ್, ಒಬ್ಬ ಡಿವೈಎಸ್‌ಪಿ ಹಾಗೂ ಮೂವರು ಇನ್‌ಸ್ಪೆಕ್ಟರ್‌ಗಳ ಹೆಸರು ಪ್ರಸ್ತಾಪ ಆಗಿದೆ. ಆಯುಕ್ತ ಭಾಸ್ಕರ್ ರಾವ್ ಕೊಟ್ಟ ದೂರಿನನ್ವಯ ಈಗಾಗಲೇ ತನಿಖೆ ಮುಕ್ತಾಯ ಮಾಡಿರುವ ಸಿಸಿಬಿ, ಈಗಾಗಲೇ ಡಿಜಿ- ಐಜಿಪಿ ನೀಲಮಣಿರಾಜುಗೆ ಪ್ರಾಥಮಿಕ ವರದಿ ಹಸ್ತಾಂತರಿಸಲಾಗಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.