ರಾಜಕಾರಣಿಗಳು, ಪತ್ರಕರ್ತರು, ಪೊಲೀಸರ ಪೋನ್ ಕದ್ದಾಲಿಕೆ .?ಕುಮಾರಸ್ವಾಮಿ ಹೇಳಿದ್ದು ಹೀಗೆ..?

ಮೈತ್ರಿ ಸರ್ಕಾರ ರಕ್ಷಿಸಿಕೊಳ್ಳಲು ಪೊಲೀಸರ ಮೂಲಕ ತಮ್ಮ ದೂರವಾಣಿ ಕದ್ದಾಲಿಸಲಾಗಿದೆ ಎಂದು ಬಿಜೆಪಿ ನಾಯಕರು ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆಡಿಯೋ ಪ್ರಕರಣದ ನಂತರ ಈ ಕದ್ದಾಲಿಕೆ ಆರೋಪಕ್ಕೆ ಮತ್ತಷ್ಟು ಬಲಬಂದಿದೆ. ಈಗಾಗಲೇ ಡಿಜಿಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲೂ ದೂರವಾಣಿ ಕದ್ದಾಲಿಕೆ ಬಗ್ಗೆ ಉಲ್ಲೇಖವಾಗಿದೆ.

ಈ ಹಿಂದಿನ ಪೊಲೀಸ್ ಆಯುಕ್ತರ ಸೂಚನೆಯಂತೆ ಕೆಲವರ ದೂರವಾಣಿ ಕದ್ದಾಲಿಕೆ ಮಾಡಿರೋದಾಗಿ ತನಿಖಾಧಿಕಾರಿ ಮುಂದೆ ಇನ್‌ಸ್ಪೆಕ್ಟರ್ ಮಿರ್ಜಾ ಅಲಿ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಈ ಹಿಂದಿನ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಕುಮಾರಸ್ವಾಮಿಗೆ ಇದೀಗ ಸಂಕಷ್ಟ ಎದುರಾಗಿದೆ. ಸಿಎಂ ಯಡಿಯೂರಪ್ಪ ವಿಶೇಷ ತನಿಖಾ ತಂಡ ರಚಿಸಲು ಮುಂದಾಗಿದರೆ, ಕುಮಾರಸ್ವಾಮಿ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡುವ ಸಾಧ್ಯತೆ ಇದೆ.

ಇತ್ತ, ಅನರ್ಹ ಶಾಸಕರು ಕೂಡ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಪೋನ್ ಕದ್ದಾಲಿಕೆ ಬಗ್ಗೆ ನನಗೆ ಮೊದಲೇ ಅನುಮಾನ ಇತ್ತು. ಆದ್ದರಿಂದ ಪೋನ್‌ ಆಫ್‌ ಮಾಡಿಟ್ಟುಕೊಂಡಿದ್ದೆ ಎಂದಿದ್ದಾರೆ ಎಂಟಿಬಿ ನಾಗರಾಜ್. ಅದೇ ರೀತಿ ಎಚ್‌.ವಿಶ್ವನಾಥ್ ಕೂಡ ಆರೋಪ ಮಾಡಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದವನ ದೂರವಾಣಿ ಕದ್ದಾಲಿಕೆ ಮಾಡಿದ್ದಾರೆ. ನಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿಲ್ವಾ..? ಎಂದು ಪ್ರಶ್ನಿಸಿದ್ದಾರೆ. ಹೀಗೆ ಕದ್ದಾಲಿಕೆ ಮಾಡಿ ಅತೃಪ್ತ ಶಾಸಕರಿಗೆ ಸಿಎಂ ಕಚೇರಿಯಿಂದಲೇ ಬ್ಲಾಕ್ ಮೇಲ್ ಮಾಡಲಾಯ್ತು ಎಂದು ದೂರಿದ್ದಾರೆ.

ಆಪರೇಷನ್‌ ಕಮಲ ಗುರಿಯಾಗಿಟ್ಟುಕೊಂಡು ಪೋನ್ ಕದ್ದಾಲಿಕೆ ಮಾಡಲಾಗಿದೆಯಂತೆ. ಶಾಸಕರು, ಪತ್ರಕರ್ತರು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಜನರ ಪೋನ್‌ ಸಂಭಾಷಣೆ ಕದ್ದು ಕೇಳಿಸಿಕೊಳ್ಳಲಾಗಿದೆ ಎಂದು ಹೇಳಲ್ತಾಗಿದೆ.

ಯಾವ ಅತೃಪ್ತ ಶಾಸಕರ ಜೊತೆ ಬಿಜೆಪಿಯ ಯಾರು ಸಂಪರ್ಕದಲ್ಲಿದ್ದಾರೆಂಬ ಆಧಾರದ ಮೇಲೆ ಪೋನ್‌ ಕದ್ದಾಲಿಸಲಾಗಿದೆಯಂತೆ. ಬಿಜೆಪಿಯ ಆರ್.ಅಶೋಕ್, ಎಸ್.ಆರ್.ವಿಶ್ವನಾಥ್, ಅಶ್ವಥ್ ನಾರಾಯಣ್, ಅನರ್ಹ ಶಾಸಕರಾದ ಎಚ್‌.ವಿಶ್ವನಾಥ್, ಸೋಮಶೇಖರ್, ಬೈರತಿ ಬಸವರಾಜು, ಎಂಟಿಬಿ ನಾಗರಾಜ್ ಹಾಗೂ ಕೆಲ ಪತ್ರಕರ್ತರ ಫೋನ್ ಟ್ಯಾಪ್ ಮಾಡಲಾಗಿತ್ತಂತೆ.

ಬಿಜೆಪಿ ನಾಯಕರು ಮತ್ತು ಅತೃಪ್ತ ಶಾಸಕರಲ್ಲದೇ ಮೈತ್ರಿ ಸರ್ಕಾರದ ಭಾಗವಾಗಿದ್ದ ಕಾಂಗ್ರೆಸ್‌ನ ಕೆಲ ನಾಯಕರ ಪೋನ್ ಕೂಡ ಕುಮಾರಸ್ವಾಮಿ ಕದ್ದಾಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಸಹಾಯಕರ ಪೋನ್ ಕದ್ದಾಲಿಸಿರೋದು ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಮೇಲೆ ಕುಮಾರಸ್ವಾಮಿಗೆ ವಿಶ್ವಾಸ ಇರಲಿಲ್ವಾ ಎಂಬ ಪ್ರಶ್ನೆಯೂ ಮೂಡಿದೆ.

ಆದರೆ, ಕಾಂಗ್ರೆಸ್ ಮುಖಂಡರು ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ, ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರವೂ ನಮ್ಮ ಫೋನ್ ಕದ್ದಾಲಿಕೆ ಮಾಡಿತ್ತು. ರಾಜ್ಯ ಸರ್ಕಾರವೂ ಮಾಡಿರಬಹುದು. ಅದರಲ್ಲಿ ವಿಶೇಷವೇನಿದೆ..? ಅಂತಿದ್ದಾರೆ. ಟ್ಯಾಪಿಂಗ್‌ ಆಗಿದರೆ ಯಡಿಯೂರಪ್ಪ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ಆದರೆ, ಬಿಜೆಪಿ ನಾಯಕರ ಆರೋಪ ತಳ್ಳಿಹಾಕಿರುವ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ. ಮುಖ್ಯಮಂತ್ರಿ ಅಧಿಕಾರ ಶಾಶ್ವತವಲ್ಲ ಎಂದು ಪದೇ ಪದೇ ಹೇಳುತ್ತಿದ್ದವನು ನಾನು. ಈ ಕುರ್ಚಿಗಾಗಿ ಟೆಲಿಫೋನ್ ಕದ್ದಾಲಿಕೆ ಮಾಡಿ ಅಧಿಕಾರ ಉಳಿಸಿಕೊಳ್ಳುವ ಅವಶ್ಯಕತೆ ನನಗಿರಲಿಲ್ಲ. ಈ ವಿಚಾರದಲ್ಲಿ ಕೆಲವರು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೆಲ್ಲರ ನಡುವೆ, ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ, ಯಾವುದನ್ನೂ ಸ್ಪಷ್ಟವಾಗಿ ಹೇಳಿಲ್ಲ. ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.