ಭಾರತ ತಂಡದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ಸಂಕಷ್ಟ..!

ಭಾರತ ತಂಡ ಯಶಸ್ವಿ ಲೆಗ್ ಸ್ಪಿನ್ನರ್, ಮಾಜಿ ನಾಯಕ ಅನಿಲ್ ಕುಂಬ್ಳೆ ವಿರುದ್ಧದ ದೂರಿನ ತನಿಖೆ ನಡೆಸಲು ಪಾಸ್ಪೋರ್ಟ್ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಆ ಮೂಲಕ ಕುಂಬ್ಳೆಗೆ ಸಂಕಷ್ಟ ಎದುರಾಗಿದೆ.

ಚೇತನಾ ಕುಂಬ್ಳೆ ಮಗಳ ಪಾಸ್ಪೋರ್ಟ್ ನವೀಕರಣಕ್ಕೆ ಸಹಿ ಹಾಕಿರುವ ಅನಿಲ್‌ ಕುಂಬ್ಳೆ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಾಸ್ಪೋರ್ಟ್ ಪ್ರಾಧಿಕಾರಕ್ಕೆ ನಿರ್ದೇಶನ ಕೋರಿ ಕುಮಾರ್ ಜಾಗಿರ್ದಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಸ್ಪಷ್ಟವಾದ ದಾಖಲೆಗಳಿದ್ದರೂ, ಪಾಸ್ಪೋರ್ಟ್ ಪ್ರಾಧಿಕಾರ ಉದ್ದೇಶಪೂರ್ವಕವಾಗಿ ತನಿಖೆ ನಡೆಸಿಲ್ಲವೆಂದು ಹೈಕೋರ್ಟ್ ಅಭಿಪ್ರಾಯ ಪಟ್ಟು ತನಿಖೆ ನಡೆಸುವಂತೆ ಪ್ರಾಧಿಕಾರಕ್ಕೆ ಆದೇಶಿಸಿದೆ.

ಏನಿದು ಪ್ರಕರಣ..?

ಚೇತನಾ ರಾಮತೀರ್ಥ ಈ ಮೊದಲು ಕುಮಾರ್ ಜಾಗಿರ್ದಾರ್‌ರನ್ನ ವಿವಾಹವಾಗಿದ್ದರು. ಈ ವೇಳೆ ಅವರಿಗೆ ಪುತ್ರಿ ಜನಿಸಿದ್ದು, ತದನಂತರ ಚೇತನಾ, ಕುಮಾರ್ ಜಾಗಿರ್ದಾರ್ ಜೊತೆ ವಿಚ್ಛೇದನ ಪಡೆದು, ಅನಿಲ್ ಕುಂಬ್ಳೆಯವರನ್ನ ವಿವಾಹವಾದರು. ನಂತರ ಚೇತನಾ- ಕುಮಾರ್ ಪುತ್ರಿಯ ಪಾಸ್‌ಪೋರ್ಟ್‌ಗೆ, ಅನಿಲ್ ಕುಂಬ್ಳೆ ಸಹಿ ಹಾಕಿದ್ದು, ಇದು ತಪ್ಪು, ತನ್ನ ಮಗಳ ಪಾಸ್‌ಪೋರ್ಟ್‌ಗೆ ಅನಿಲ್ ಕುಂಬ್ಳೆ ಸಹಿ ಹಾಕಬಾರದಿತ್ತೆಂದು ಜಾಗಿರ್ದಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಪಾಸ್ಪೋರ್ಟ್ ಕಾಯ್ದೆಯ ಅನ್ವಯ ಅಪ್ರಾಪ್ತರ ಪಾಸ್ಪೋರ್ಟ್‌ಗೆ ತಂದೆ ತಾಯಿ ಸಹಿ ಹಾಕಬೇಕು. ಅನಿಲ್ ಕುಂಬ್ಳೆ ನಾನೇ ತಂದೆ ಎಂದು ಸಹಿ ಹಾಕಿದ್ದಾರೆ ಎಂದು ಆರೋಪಿಸಿ ಕ್ರಮ ತೆಗೆದುಕೊಳ್ಳಲು ಚೇತನ ಮೊದಲ ಪತಿ ಕುಮಾರ್ ಜಾಗಿರ್ದಾರ್ 2012ರ ಜನವರಿ 10ರಂದು ಪಾಸ್ಪೋರ್ಟ್ ಪ್ರಾಧಿಕಾರಕ್ಕೆ ದೂರು ನೀಡಿದ್ದರು.

ವಂಚನೆ, ನಕಲಿ ದಾಖಲೆ ಸಲ್ಲಿಕೆ ಆರೋಪದ ಮೇಲೆ ಕುಮಾರ್ ಜಾಗಿರ್ದಾರ್ ದೂರಿನ ಆಧಾರ ಮೇಲೆ ಚೇತನಾ ಕುಂಬ್ಳೆಗೆ ಶೋಕಾಸ್ ನೋಟಿಸ್ ನೀಡಿದ್ದ ಪಾಸ್ಪೋರ್ಟ್ ಪ್ರಾಧಿಕಾರ, ಚೇತನ ಮಗಳ ಪಾಸ್ಪೋರ್ಟ್ ಹಿಂಪಡೆದಿತ್ತು.

ಆದ್ರೆ ಅನಿಲ್ ಕುಂಬ್ಳೆ ವಿರುದ್ಧ ದೂರು ನೀಡಿದ್ದರು ಕ್ರಮ ತೆಗೆದುಕೊಂಡಿಲ್ಲ.ಹೀಗಾಗಿ ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ರು. ಇದನ್ನು ಮಾನ್ಯ ಮಾಡಿದ ಹೈಕೋರ್ಟ್ ಕುಂಬ್ಳೆ ವಿರುದ್ಧ ತನಿಖೆಗೆ ಆದೇಶಿದೆ.

ಮಂಜುನಾಥ್, ಟಿವಿ5 ಕನ್ನಡ

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.