ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಮಾಜಿ ಡಿಸಿಎಂ

ಬೆಂಗಳೂರು: ರಾಜ್ಯದಲ್ಲಿ ನೆರೆಹಾವಳಿಯಿಂದ ತೀವ್ರವಾದ ಸಂಕಷ್ಟ ಎದುರಾಗಿದೆ. ಎರಡೂವರೆ ಲಕ್ಷ ಜನ ಮನೆ ತೊರೆದಿದ್ದಾರೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ನಗರದ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. 33 ಮಂದಿ ಪ್ರವಾಹದಿಂದ ಸಾವನ್ನಪ್ಪಿದ್ದಾರೆ.  ಸಾವಿರಾರು ಜಾನುವಾರುಗಳು ಸಾವನ್ನಪ್ಪಿವೆ. ಕೊಡಗು, ಕರಾವಳಿಯಲ್ಲೂ ಅತಿವೃಷ್ಠಿ ಹಾನಿಮಾಡಿದೆ.  ಕೊಡಗಿನಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ.  ಇಂತ ಪರಿಸ್ಥಿತಿಯಲ್ಲಿ ಸಂಪುಟ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ,  ಸಚಿವರಿದ್ದರೆ ಜಿಲ್ಲೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಿತ್ತಿದ್ದರು ಆದರೆ ಇನ್ನೂ ಸಂಪುಟವನ್ನೂ ರಚನೆ ಮಾಡಿಲ್ಲ ಎಂದು ಕಿಡಿಕಾರಿದರು.

ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಗೆ ಸರ್ಕಾರ ಉರುಳಿಸುವ ಕಾಳಜಿ ಈಗಿಲ್ಲ,  ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪರಮೇಶ್ವರ್ ಆರೋಪ ಮಾಡಿದರು.

ಸಿಎಂ ಒಬ್ಬರೇ ಹೀಗ ಎಲ್ಲಾ ಕಡೆ ಓಡಾಡೋಕೆ ಸಾಧ್ಯ,  ಯಾಕೆ ಸಂಪುಟ ರಚನೆ ಆಗ್ತಿಲ್ಲ ಅನ್ನೋದನ್ನು ಯಡಿಯೂರಪ್ಪನವರೇ ಬಹಿರಂಗ ಪಡಿಸಬೇಕು.  ಸಿಎಂ ಇಳಿವಯಸ್ಸಿನಲ್ಲೂ ಓಡಾಡುತ್ತಿದ್ದಾರೆ ಆದರೆ ಅವರಿಗೆ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂದರು.

ಪ್ರಧಾನಿಯವರು ರಾಜ್ಯಕ್ಕೆ ಭೇಟಿ ನೀಡಬೇಕಿತ್ತು, ವೈಮಾನಿಕ ಸಮೀಕ್ಷೆಯನ್ನು ಮಾಡಬೇಕಿತ್ತು, ಆದರೆ ಸದಾನಂದಗೌಡರು 129 ಕೋಟಿ ಬಿಡುಗಡೆ ಮಾಡಿದ್ದೇವೆ ಅಂದಿದ್ದಾರೆ.  ಮಡಿಕೇರಿಯಲ್ಲಿ ಅತಿವೃಷ್ಠಿಯಾದಾಗ ಸಾವಿರಾರು ಕೋಟಿ ನಷ್ಟವಾಗಿತ್ತು 2500 ಕೋಟಿ ಅನುದಾನ ಕೇಳಿದ್ದೆವು, ಆಗ ನಮಗೆ ನೀಡಿದ್ದು 900 ಕೋಟಿ ಮಾತ್ರ, ಇವತ್ತು ನಿಮ್ಮದೇ ಸರ್ಕಾರವಿದೆ.  ಯಾಕೆ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳುತ್ತಿದ್ದೀರ.  ಜನ 25 ಸಂಸದರನ್ನು ನಿಮಗೆ ಕೊಟ್ಟಿದ್ದಾರೆ.  ಇಷ್ಟೊಂದು ಸಂಸದರನ್ನು ನೀಡಿದ್ದರೂ ರಾಜ್ಯಕ್ಕೆ ಅನುದಾನ ಯಾಕಿಲ್ಲ,  ತಕ್ಷಣವೇ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕೇಂದ್ರಕ್ಕೆ ಮಾಜಿ ಡಿಸಿಎಂ ಪರಮೇಶ್ವರ್ ಒತ್ತಾಯ ಮಾಡಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.