3-0 ಅಂತರದಿಂದ ವೆಸ್ಟ್​ ಇಂಡೀಸ್​​ಅನ್ನು​ ಕ್ಲೀನ್ ಸ್ವೀಪ್ ಮಾಡಿದ ವಿರಾಟ್​ ಪಡೆ

ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಕೊನೆಯ ಟ್ವೆಂಟಿ-20 ಪಂದ್ಯದಲ್ಲಿ ನಾಯಕ ವಿರಾಟ್​ ಕೊಹ್ಲಿ , ಯುವ ವಿಕೆಟ್​ ಕೀಪರ್​ ರಿಷಬ್​ ಪಂತ್​ ಆರ್ಧಶತಕದಾಟ, ದೀಪಕ್​ ಚಹರ್​ 4ಕ್ಕೆ 3 ಅತ್ಯುತ್ತಮ ಬೌಲಿಂಗ್​ನಿಂದ 7 ವಿಕೆಟ್​​​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 3-0 ಅಂತರದಲ್ಲಿ ಯಂಗ್​ ಟೀಮ್ ಇಂಡಿಯಾ, ಕ್ರಿಕೆಟ್​ ದೈತ್ಯರನ್ನ ಕ್ಲೀನ್‌ಸ್ವೀಪ್‌ ಮಾಡಿದೆ.

ಇನ್ನು ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್​​ ಆಯ್ದುಕೊಂಡ ವಿರಾಟ್​ ಕೊಹ್ಲಿ, ಆರಂಭಿಕ ಆಟಗಾರ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಖಲೀಲ್ ಅಹ್ಮದ್​ಗೆ ವಿಶ್ರಾಂತಿ ನೀಡಿ. ಕೆಎಲ್ ರಾಹುಲ್, ಚಹರ್​ ಬ್ರದರ್ಸ್​ಗೆ ಆಡುವ ಹನ್ನೊಂದರಲ್ಲಿ ಸ್ಥಾನ ನೀಡಿದರು.

ಟಾಸ್‌ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ವಿಂಡೀಸ್​ಗೆ ದೀಪಕ್​ ಚಹರ್​ ಶಾಕ್ ನೀಡಿದ್ರು.. ಈ ಮೂಲಕ ಸತತ ಮೂರನೇ ಪಂದ್ಯದಲ್ಲೂ ವಿಂಡೀಸ್ ಆರಂಭಿಕರು ನಿರಾಸೆ ಮೂಡಿಸಿದರು. ಆರಂಭಿಕರಾದ ಸುನಿಲ್ ನರೈನ್ (2) ಹಾಗೂ ಎವಿನ್ ಲೆವಿಸ್ (10) ಹೊರದಬ್ಬಿದ ದೀಪಕ್ ಚಹರ್ ಡಬಲ್ ಆಘಾತ ನೀಡಿದರು. ನಂತರ ಅಪಾಯಕಾರಿ ಶಿಮ್ರಾನ್ ಹೆಟ್ಮಾಯೆರ್‌ರನ್ನು (1) ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಈ ಮೂಲಕ 14 ರನ್​ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ವಿಂಡೀಸ್​ ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ಕ್ರೀಸಿಗಿಳಿದ ಕೀರಾನ್ ಪೊಲಾರ್ಡ್ ಆಕ್ರಮಣಕಾರಿಯಾಗಿ ಆಡುವ ಮೂಲಕ ತಿರುಗೇಟು ನೀಡಿದರು. ಬಿರುಸಿನ ಆಟವಾಡಿದ ಪೊಲಾರ್ಡ್‌ಗೆ ನಿಕೋಲಸ್ ಪೂರನ್ ಉತ್ತಮ ಸಾಥ್ ನೀಡಿದರು.. ಈ ವೇಳೆ 17 ರನ್ ಗಳಿಸಿ ಬ್ಯಾಟಿಂಗ್​ ನಡೆಸುತ್ತಿದ್ದ ಪೂರನ್‌ ವಿಕೆಟ್​ ಕಬಳಿಸಿದ ನವದೀಪ್ ಸೈನಿ, ಪೋಲಾರ್ಡ್-ನಿಕೋಲಸ್​​​ರ 66 ರನ್‌ಗಳ ಜತೆಯಾಟಕ್ಕೆ ಬ್ರೇಕ್​ ಹಾಕಿದರು. ಇನ್ನೊಂದೆಡೆ ದಿಟ್ಟ ಇನ್ನಿಂಗ್ಸ್ ಕಟ್ಟಿದ ಕೀರಾನ್ ಪೊಲಾರ್ಡ್ 40 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು.

ಇನ್ನು​ 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್​ನೊಂದಿಗೆ 58 ರನ್ ಗಳಿಸಿ ಬ್ಯಾಟಿಂಗ್​ ನಡೆಸುತ್ತಿದ್ದ ಪೋಲಾರ್ಡ್​ಗೆ ಸೈನಿ ಪೆವಿಲಿಯನ್ ದಾರಿ ತೋರಿಸಿದರು. ಈ ಬೆನ್ನಲ್ಲೆ ಬ್ರಾಥ್​ವೈಟ್ ಸಿಕ್ಸರ್​ ಸಿಡಿಸಿ ಅಪಾಯಕಾರಿ ಆಗುವ ಲಕ್ಷಣ ತೋರಿದರು. ಆದರೆ, ಪಾದಾರ್ಪಣೆ ಪಂದ್ಯದಲ್ಲಿ ವಿಂಡೀಸ್​ ನಾಯಕ ಬ್ರಾಥ್​ವೇಟ್​ ಔಟ್​ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಚೊಚ್ಚಲ ವಿಕೆಟ್​ ಪಡೆದರು.​ ಸ್ಲಾಗ್​​ ಓವರ್​​ನಲ್ಲಿ ಅಬ್ಬರಿಸಿದ ರೋಮನ್ ಪಾವಲ್ 20 ಎಸೆತಗಳಲ್ಲಿ 32 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. ಕೊನೆಯ ಓವರ್​ನಲ್ಲಿ 16 ರನ್​ ಚಚ್ಚಿದ ಪರಿಣಾಮ ವಿಂಡೀಸ್ 20 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಇನ್ನು ವಿಂಡೀಸ್​ ನೀಡಿದ್ದ ಟಾರ್ಗೆಟ್​​ ಬೆನ್ನತ್ತಿದ ಟೀಮ್ ಇಂಡಿಯಾ ಸತತ ಮೂರನೇ ಪಂದ್ಯದಲ್ಲೂ ಆರಂಭಿಕ ಅಘಾತ ಅನುಭವಿಸಿತು. ಶಿಖರ್​ ಧವನ್ ಕೇವಲ 3 ರನ್​​ ಗಳಿಸಿ ಒಶಾನೆ ಥಾಮಸ್​ ಬೌಲಿಂಗ್​ನಲ್ಲಿ ಕಾಟ್ರೆಲ್​ಗೆ ಕ್ಯಾಚ್​ ನೀಡಿದ ಹೊರ ನಡೆದರು. ಇದಾದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್‌ 20 ರನ್​ ಗಳಿಸಿದ್ದಾಗ ಅಲೆನ್​ ಬೌಲಿಂಗ್​ನಲ್ಲಿ ವಿಕೆಟ್​ ಕೀಪರ್​ಗೆ ಕ್ಯಾಚ್​ ನೀಡಿದ ಪೆವಿಲಿಯನ್ ಸೇರಿದರು.

ಈ ವೇಳೆ ನಾಯಕ ವಿರಾಟ್​ ಕೊಹ್ಲಿ ಜೊತೆಗೂಡಿದ ರಿಷಭ್​ ಪಂತ್ ಶತಕದ ಜೊತೆಯಾಟದಿಂದ​ ಆರಂಭಿಕ ಆಘಾತದಿಂದ ತಂಡವನ್ನ ಪಾರು ಮಾಡಿದ್ರು. ವಿಂಡೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ-ಪಂತ್ ಜೋಡಿ ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿದರು. 37 ಎಸೆತಗಳಲ್ಲಿ ಅರ್ಧಶತಕ ಸಿಡಿದ ವಿರಾಟ್​ ಕೊಹ್ಲಿ ಸರಣಿಯಲ್ಲಿ ಮೊದಲ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು. ಅಲ್ದೇ ಟಿ20 ಕ್ರಿಕೆಟ್​​ನಲ್ಲಿ 21ನೇ ಅರ್ಧಶತಕ ಸಿಡಿದ ಸಾಧನೆ ಮಾಡಿದರು. ಈ ಮೂಲಕ ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿ ಮತ್ತೆ ಅಗ್ರಸ್ಥಾನಕ್ಕೇರಿದರು.

ಕೊಹ್ಲಿ ಬೆನ್ನಲ್ಲೇ ಉದಯೋನ್ಮುಖ ಪಂತ್ ಕೂಡಾ 37 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು. ಈ ನಡುವೆ ಗೆಲುವಿನ ಸನಿಹದಲ್ಲಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್​ಗೆ ಹೆಜ್ಜೆ ಹಾಕಿದರು. ಬಳಿಕ ಮನೀಶ್ ಪಾಂಡೆ ಜೊತೆ ಸೇರಿದ ರಿಷಬ್ ಪಂತ್ ಸಿಕ್ಸರ್‌ನೊಂದಿಗೆ ಗೆಲುವಿನ ದಡ ಸೇರಿಸಿದರು. ಈ ಮೂಲಕ 19.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಟೀಮ್ ಇಂಡಿಯಾ ಪರ ಅತ್ಯುತ್ತಮ ದಾಳಿ ಸಂಘಟಿಸಿದ ದೀಪಕ್​ ಚಹರ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರೆ. ಸರಣಿಯಲ್ಲಿ ಗಮನ ಸೆಳೆದ ಕೃನಾಲ್​ ಪಾಂಡ್ಯಾ ಮ್ಯಾನ್​ ಆಫ್​ ದಿ ಸಿರೀಸ್​ ಅವಾರ್ಡ್​ ತಮ್ಮದಾಗಿಸಿಕೊಂಡರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.