ಈ ಸರ್ಕಾರ ಬೇಕಾಗಿರೋದು ದೇವೇಗೌಡರ ಕುಟುಂಬ, ಪರಮೇಶ್ವರ್​ಗೆ

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಎಂಟಿಬಿ ನಾಗರಾಜ್, ಈ ಸರ್ಕಾರ ಬೇಕಾಗಿರೋದು ದೇವೇಗೌಡರ ಕುಟುಂಬ, ಪರಮೇಶ್ವರ್ ಮತ್ತು ನಿಮಗೆ ಅಂತ ಚಾಟಿ ಬೀಸಿದರು.

ನಾನು ಹೆಸರಿಗಷ್ಟೆ ಮಿನಿಸ್ಟರ್ ಆಗಿದ್ದೆ. ಇಲಾಖೆಯಲ್ಲಿ ಸಿಎಂ ಹಾಗೂ ರೇವಣ್ಣ ಮೂಗು ತೂರಿಸಿದರು. ನನಗೆ ತಿಳಿಯದಂತೆ ಅಧಿಕಾರಿಗಳ ವರ್ಗಾವಣೆ ಮಾಡಿದರು. ಅರ್ಧಕ್ಕೆ ನಿಂತಿರುವ ರಾಜೀವ್ ಗಾಂಧಿ ವಸತಿ ಯೋಜನೆ ಮನೆಗಳ ನಿರ್ಮಾಣಕ್ಕೆ 1,200 ಕೋಟಿ ರೂಪಾಯಿ ಅನುದಾನ ಕೇಳಿದ್ರೂ ಸಿಎಂ ಕ್ಯಾರೆ ಎನ್ನಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ, ಇದಕ್ಕೆ ಡಿಕೆಶಿ, ಇದೊಂದು ಸಾರಿ ನನ್‌ ಮಾತ್‌ ಕೇಳಿ. ಮುಂದೆ ನಾನಿದ್ದೀನಿ, ಏನೂ ತೊಂದರೆ ಆಗದಂತೆ ನೋಡ್ಕೋತ್ತೀನಿ. ಕುಮಾರಸ್ವಾಮಿ, ರೇವಣ್ಣ ಬಳಿ ನಾನೇ ಮಾತಾಡಿಸ್ತೀನಿ ಅಂತ ಹೇಳಿದರೂ ಎಂಟಿಬಿ ಪಟ್ಟು ಸಡಿಲಿಸಲಿಲ್ಲ.

ಸುಮಾರು 4 ಗಂಟೆಗಳ ಸುದೀಘ್ರ ಚರ್ಚೆ ಬಳಿಕ ಕೊನೆಗೆ ಡಿಕೆಶಿ ಮುಂದೆ ಒಂದು ಬೇಡಿಕೆ ಇಟ್ಟ ಎಂಟಿಬಿ, ಸಿದ್ದರಾಮಯ್ಯಗೆ ಅಥವಾ ಕಾಂಗ್ರೆಸ್‌ಗೆ ಸಿಎಂ ಸ್ಥಾನ ಬಿಟ್ಟು ಕೊಡೋದಾದ್ರೆ ಮನಸು ಬದಲಿಸ್ತೀನಿ ಅಂದರು. ಆದರೆ, ಇದಕ್ಕೆ ಕಾಂಗ್ರೆಸ್‌ ನಾಯಕರಿಂದ ಯಾವುದೇ ಸ್ಪಷ್ಟ ಉತ್ತರ ಸಿಗಲಿಲ್ಲ.

ಡಿಕೆಶಿ, ಪರಮೇಶ್ವರ್‌, ಕೃಷ್ಣ ಭೈರೇಗೌಡ ಮನವೊಲಿಕೆಗೆ ಎಂಟಿಬಿ ಸೊಪ್ಪು ಹಾಕ್ತಿಲ್ಲ ಅಂತ ಗೊತ್ತಾದಾಗ ಸಿದ್ದರಾಮಯ್ಯ ಕರೆ ಮಾಡಿದರು. ನಿಮ್ಮಂಥ ಹಿರಿಯರೇ ಪಕ್ಷ ಬಿಟ್ಟು ಹೋದ್ರೆ ಹೇಗೆ ಅಂತ ಕೇಳಿದಾಗ, ನಿಮ್ಮ ಜೊತೆಯೇ ಖುದ್ದು ಮಾತನಾಡಬೇಕಿದೆ. ಬಂದು ಭೇಟಿಯಾಗ್ತೀನಿ ಅಂತ ಹೇಳಿ ಎಂಟಿಬಿ ಫೋನ್ ಇಟ್ರು. ಸಿದ್ದು ನಿವಾಸಕ್ಕೆ ಹೊರಡುವ ಮೊದಲು ಮಾತನಾಡಿದ ಅವರು, ಅಸಮಾಧಾನ ಎಲ್ಲ ಪಕ್ಷದಲ್ಲೂ ಇದ್ದಿದ್ದೆ. ಕಾಂಗ್ರೆಸ್‌ನಲ್ಲೇ ಉಳಿಯುವ ಪ್ರಯತ್ನ ಮಾಡ್ತೀನಿ. ಸುಧಾಕರ್ ಜೊತೆನೂ ಮಾತನಾಡಿ ಮನವೊಲಿಸೋ ಕೆಲಸ ಮಾಡ್ತೀನಿ ಅಂದರು.

ಸಿದ್ದು ಕರೆ ಮಾಡಿದ ಬಳಿಕ ಡಿಕೆಶಿ, ಪರಮೇಶ್ವರ್‌ ಅವರೊಂದಿಗೆ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಎಂಟಿಬಿ ಆಗಮಿಸಿದರು. ನಂತರ ಆಪ್ತನ ಮನವೊಲಿಕೆಗೆ ಸಿದ್ದು ಮುಂದಾದ್ರು. ನನಗಿಂತಾ ಸಿನಿಯರ್ ಇದ್ದೀಯಾ, ಯಾಕಪ್ಪಾ ಪಕ್ಷ ಬಿಟ್ಟು ಹೋಗ್ತಿಯಾ..? ಕಾಂಗ್ರೆಸ್‌ನಲ್ಲೇ ಇರು, ಆತುರದ ನಿರ್ಧಾರ ಬೇಡ. ಅಸಮಾಧಾನಗಳೆಲ್ಲವೂ ಸರಿ ಹೋಗುತ್ತೆ ಎಂದು ಬುದ್ದಿವಾದ ಹೇಳಿದರು. ಆಗಲೂ ಕುಮಾರಸ್ವಾಮಿ, ರೇವಣ್ಣ ವಿರುದ್ಧ ಟಿಎಂಬಿ ಅಸಮಾಧಾನ ಹೊರಹಾಕಿದರು.

ನನ್ನ ಜೊತೆ ರಾಜೀನಾಮೆ ನೀಡಿದ ಡಾ.ಸುಧಾಕರ್‌ ಕೂಡ ರಾಜೀನಾಮೆ ಹಿಂಪಡೆಯಲು ಒಪ್ಪಿದರೆ ನಾನು ಕೂಡ ಹಿಂಪಡೆಯುತ್ತೇನೆ. ಹೀಗಾಗಿ, ಅವರನ್ನೂ ಮನವೊಲಿಸಬೇಕು. ನನ್ನ ಇಲಾಖೆಯಲ್ಲಿ ರೇವಣ್ಣ ಹಸ್ತಕ್ಷೇಪ ಮಾಡೋದು ತಡೆಯಬೇಕು. ಅಲ್ಲದೆ ಬೇರೆ ಯಾರೂ ಮೂಗು ತೂರಿಸಬಾರದು. ಈಗ ಮತ್ತೆ ನನಗೆ ಈ ಹಿಂದೆ ನೀಡಿದ ಇಲಾಖೆಯನ್ನೇ ನೀಡಬೇಕು. ನನ್ನ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಬೇಕು ಎಂದು ಷರತ್ತು ಹಾಕಿದ್ದಾರೆ.

ಈ ಷರತ್ತುಗಳಿಗೆ ಒಪ್ಪಿದ ಸಿದ್ದರಾಮಯ್ಯ, ಆಯ್ತು ಸಿಎಂ ಕುಮಾರಸ್ವಾಮಿ ಹಾಗೂ ರೇವಣ್ಣನಿಗೆ ಹೇಳ್ತಿನಿ ಎಂದು ಅಭಯ ನೀಡಿದರು. ರೇವಣ್ಣನ ಮೇಲೆ ವಿಪರೀತ ಕಂಪ್ಲೆಂಟ್ ಬರ್ತಿವೆ, ಅವನನ್ನು ಕರೆದು ಬುದ್ಧಿ ಹೇಳುತ್ತೀನಿ ಎಂದು ಸಮಾಧಾನ ಮಾಡಿದರು. ಮಾತುಕತೆ ಸಕ್ಸಸ್‌ ಆದ ಬಳಿಕ ಜಮೀರ್‌ ಅಹ್ಮದ್‌ ಜೊತೆ ಎಂಟಿಬಿ ನಾಗರಾಜ್‌ ತೆರಳಿದ್ರು. ಕೊನೆಗೂ ಕಾಂಗ್ರೆಸ್ ತೊರೆದು ಹೋಗಿದ್ದ ಎಂಟಿಬಿ ನಾಗರಾಜ್‌ ಅವರನ್ನ ಮತ್ತೆ ಕಾಂಗ್ರೆಸ್‌ ಮನೆಗೆ ಕರೆತರುವಲ್ಲಿ ಪಕ್ಷದ ನಾಯಕರು ಯಶಸ್ಸು ಕಂಡಿದ್ದಾರೆ.

Recommended For You

About the Author: TV5 Kannada

Leave a Reply

Your email address will not be published. Required fields are marked *