ಆರೋಗ್ಯ ಸ್ಥಿತಿ ಕುರಿತು ಮಾತನಾಡಿ ಅನುಕಂಪ ಗಿಟ್ಟಿಸುವ ಯತ್ನ ಯಾರಿಗೂ ಹಿಡಿಸದು- ಸುರೇಶ್ ಕುಮಾರ್

ಇಂದಿನದು ದಿಢೀರನೆ ಉದ್ಭವವಾದ ಸ್ಥಿತಿಯಲ್ಲ. ಸುಮಾರು 13 ತಿಂಗಳ ಹೆಪ್ಪುಗಟ್ಟಿದ ಅಸಮಧಾನ ಈ ಸ್ಥಿತಿಗೆ ಬಂದು ನಿಂತಿದೆ. ಕೊನೆ-ಕೊನೆಗೆ ಸರಕಾರವೇ ಇಲ್ಲವೆನ್ನುವ ಸನ್ನಿವೇಶ ಬಂದೊದಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

1) ಈ ಸರ್ಕಾರದ ರಚನೆಯ ಮೂಲ ಉದ್ದೇಶಕ್ಕೆ ಸದುದ್ದೇಶವಿರಲಿಲ್ಲ.‌ ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ನಕಾರಾತ್ಮಕ ಉದ್ದೇಶ ಮಾತ್ರ ಈ ಹೊಂದಾಣಿಕೆಗೆ (ಕೆಲವರು ಇದನ್ನು ಕೂಡಿಕೆಯೆಂದೂ ಕರೆಯುತ್ತಾರೆ)ಇದ್ದದ್ದು. ನಕಾರಾತ್ಮಕ ಉದ್ದೇಶಕ್ಕೆ ಒಂದು ವ್ಯವಸ್ಥೆಯನ್ನು ಬಹಳ ದೂರ/ಕಾಲ ಕರೆದುಕೊಂಡು ಹೋಗುವ ಸಾಮರ್ಥ್ಯ ಇರುವುದಿಲ್ಲ.‌

2) ಪ್ರಾರಂಭದಿಂದಲೂ ಈ ಸರ್ಕಾರದ ಮೈತ್ರಿ ಪಕ್ಷಗಳ ನಡುವೆ ಢಾಳಾಗಿ ಎದ್ದು ಕಾಣುತ್ತಾ ಬಂದದ್ದು ಪರಸ್ಪರ ಅಪನಂಬಿಕೆ.‌ ಕುಮಾರಸ್ವಾಮಿಯವರು ಆಗಾಗ ನೀಡುತ್ತಿದ್ದ ಹೇಳಿಕೆಗಳು, ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದರಾಮಯ್ಯನವರು ತಮ್ಮ ಆಪ್ತರಿಗೆ (ಇಡೀ ರಾಜ್ಯಕ್ಕೆ ತಿಳಿಸುವಂತೆ) ಹೇಳಿದ ಕಿವಿಮಾತುಗಳು. ಇದಕ್ಕೆ ಉದಾಹರಣೆ.‌

3) ಸಮನ್ವಯ ಸಮಿತಿ ಎಂಬುದು ತನ್ನ ಜವಾಬ್ದಾರಿಯಲ್ಲಿ ಸಂಪೂರ್ಣ ಸೋತಿದೆ. ಸಮನ್ವಯ ಸಮಿತಿಯ ಅಧ್ಯಕ್ಷರ ಮನಸ್ಸಿನಲ್ಲಿಯೇ ಸಮನ್ವಯತೆ ಕಾಣಲೇ ಇಲ್ಲ. ಮೈತ್ರಿ ಪಕ್ಷಗಳ ಅಧ್ಯಕ್ಷರನ್ನೇ ಸಮನ್ವಯ ಸಮಿತಿಯ‌ ಒಳಗೆ ಬಿಡದ ಈ ಅಧ್ಯಕ್ಷರಿಂದ ಸಮನ್ವಯ ಹೇಗೆ ಸಾಧ್ಯವಾಗುತ್ತಿತ್ತು?

4) ಲೋಕೋಪಯೋಗಿ ಸಚಿವರ ಒರಟಾಟ ಪ್ರದರ್ಶನ. ತನ್ನನ್ನು ಕೇಳುವವರು ಯಾರೂ ಇಲ್ಲ ಎನ್ನುವ ರೀತಿಯಲ್ಲಿ ಎಲ್ಲಾ ಸಚಿವರ ಖಾತೆಗಳಿಗೂ “ಕನ್ನ” ಹಾಕುತ್ತಿದ್ದ ಈ ಲೋಕೋಪಯೋಗಿ ಸಚಿವರ ದುಂಡಾವರ್ತನೆಗೆ ಯಾರೂ ಕಡಿವಾಣ ಹಾಕಲಿಲ್ಲ.

5) ಕುಮಾರಸ್ವಾಮಿಯವರ ಬಾಯಿಂದ ಮೊದಲಿನಿಂದ ಹೊರಬೀಳುತ್ತಿದ್ದ “ನಾನೊಬ್ಬ ಸಾಂದರ್ಭಿಕ ಶಿಶು”, ” ನಾನೊಬ್ಬ ಕೇವಲ ಕ್ಲರ್ಕ್”ಎಂಬ ಮಾತುಗಳು ಓರ್ವ ಮುಖ್ಯಮಂತ್ರಿಯ ಮೇಲೆ ಇರಬೇಕಾದ ವಿಶ್ವಾಸವನ್ನು ಕಸಿದುಕೊಂಡವು.

6) ಮುಖ್ಯವಾಗಿ ಈ ಮೈತ್ರಿ ಸರ್ಕಾರದ ಆಮ್ಲಜನಕ ಕೊಳವೆ ಹಿಡಿದಿದ್ದ ಓರ್ವ ನಾಯಕರಿಗೆ ಈ ಸರಕಾರ ಮುಂದುವರಿಯುವುದೇ ಇಷ್ಟವಿರಲಿಲ್ಲ.‌

7) ಮುಖ್ಯಮಂತ್ರಿಗಳು ಶಾಸಕರ ಅಳಲನ್ನು ಕೇಳುವ ವ್ಯವಧಾನ ತೋರಲೇ ಇಲ್ಲ.‌

8) ಕಾಂಗ್ರೆಸ್ ಕಡೆಯಿಂದ ಸಚಿವ ಸಂಪುಟದಲ್ಲಿ ನಾಯಕರಾಗಿದ್ದವರು “Zero Traffic” ಗುಂಗಿನಲ್ಲಿಯೇ ಇದ್ದುಬಿಟ್ಟರು.

9) ಶಾಸಕರ ಕ್ಷೇತ್ರಗಳಿಗೆ ನೀಡಿದ ಅನುದಾನದಲ್ಲಿ ಎದ್ದು ಕಂಡ ತಾರತಮ್ಯ.

10) ನಾಯಕನೊಬ್ಬ ತನ್ನ ಆರೋಗ್ಯ ಸ್ಥಿತಿ ಕುರಿತು ಆಗಾಗ ಮಾತನಾಡಿ ಅನುಕಂಪ ಗಿಟ್ಟಿಸುವ ಯತ್ನ ಯಾರಿಗೂ ಹಿಡಿಸದು.‌

11) ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಮಣಿಸಲೋಸುಗ ಮಾಡಿಕೊಂಡ ಮೈತ್ರಿ ಕಾರ್ಯಕರ್ತರ ನಡುವೆ ಕಾಣದೆ ದಾರುಣ ಸೋಲಿನ ನಂತರ ಮೈತ್ರಿಯಲ್ಲಿ ಬಿರುಕು ಹೆಚ್ಚಾಯಿತು.‌

12) ಒಟ್ಟಾರೆ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ, ಲೋಕೋಪಯೋಗಿ ಸಚಿವ. ಇವರುಗಳು ಧಾರಾಳವಾಗಿ ಈ ದುಸ್ಥಿತಿಗೆ ತಮ್ಮ ಯೋಗದಾನ ಎರೆದಿದ್ದಾರೆ.‌

ಒಟ್ಟಿನಲ್ಲಿ ಇಂದು ಐಸಿಯು ನಲ್ಲಿರುವ ಈ ಸರ್ಕಾರದ ವೆಂಟಿಲೇಟರ್ ಸ್ಪೀಕರ್ ಕಛೇರಿಯಲ್ಲಿದೆ. ಈಗ ಯಾರು ಏನು ಮಾಡಿದರೂ ಈಗ ಇದು ಒಡೆದ ಕನ್ನಡಿ, ಒಡೆದ ಮನಸ್ಸುಗಳು.

Recommended For You

About the Author: TV5 Kannada

Leave a Reply

Your email address will not be published. Required fields are marked *