ಮೈತ್ರಿಗೆ ಬಿಗ್ ಶಾಕ್ – ನಾವ್ಯಾರೂ ಪಕ್ಷ ಬಿಡಲ್ಲ ಎಂದ ಶಾಸಕರು

ರಿವರ್ಸ್ ಆಪರೇಷನ್ ಭಯದಿಂದ ರೆಸಾರ್ಟ್‌ನಲ್ಲಿ ಬಿಜೆಪಿ ದಂಡು ಬೀಡುಬಿಟ್ಟಿದೆ. ಬಹುಮತ ಕಳೆದುಕೊಂಡಿರುವ ಸಿಎಂ ಕುಮಾರಸ್ವಾಮಿ, ಸೋಮವಾರ ವಿಶ್ವಾಸಮತ ಯಾಚಿಸಲಿ ಅಂತ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ವಿಶ್ವಾಸಮತ ಯಾಚಿಸ್ತೀನಿ ಅಂತ ಸಿಎಂ ಹೇಳ್ತಿದ್ದಂತೆ ರೆಸಾರ್ಟ್‌ ಸೇರಿರುವ ಬಿಜೆಪಿ ಮುಖಂಡರು ದೋಸ್ತಿಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಸಾಗುವ ರಸ್ತೆಯಲ್ಲಿರುವ ರಮಡಾ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಕಮಲ ಪಾಳಯ ಮುಂದಿನ ನಡೆ ಕುರಿತು ಸಮಗ್ರವಾಗಿ ಚರ್ಚೆ ಮಾಡುತ್ತೀದೆ.

ಐಷರಾಮಿ ರೆಸಾರ್ಟ್‌ನಲ್ಲಿ 3 ದಿನಗಳ ಕಾಲ ರೂಂ ಬುಕ್‌ ಆಗಿವೆ. ಬುಧವಾರದವರೆಗೂ ಇಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆ ಇದೆ. ವೈಭವಯುತ ಹೋಟೆಲ್‌ನಲ್ಲಿ ಶಾಸಕರು ಜಾಲಿ ಮೂಡ್‌ನಲ್ಲಿದ್ದಾರೆ. ಒಂದೊಂದು ಟೀ, ಕಾಫಿಗೂ ನೂರಾರು ರೂಪಾಯಿ, ಒಂದೊಂದು ಊಟಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡ್ತಿದ್ದಾರೆ.

ಡಾಲರ್ಸ್‌ ಕಾಲೋನಿ ನಿವಾಸದಿಂದ ನೇರವಾಗಿ ರೆಸಾರ್ಟ್‌ಗೆ ಬಂದ ಯಡಿಯೂರಪ್ಪ ಪಕ್ಷದ ಮುಖಂಡರು, ಶಾಸಕರೊಂದಿಗೆ ಮುಂದಿನ ಹೋರಾಟದ ಬಗ್ಗೆ ಸಮಾಲೋಚನೆ ನಡೆಸಿದರು. ಅತೃಪ್ತರ ಸೆಳೆಯಲು ದೋಸ್ತಿಗಳ ಕಾರ್ಯಾಚರಣೆ ನಡೆಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿದೆ. ಶಾಸಕ ರಾಮಲಿಂಗಾರೆಡ್ಡಿ ಸೆಳೆಯುವ ಪ್ರಯತ್ನ ಮುಂದುವರಿಸಿದೆ.

ರಾಮಲಿಂಗಾ ರೆಡ್ಡಿ ಜೊತೆ ಮಾತುಕತೆಗೆ ತೆರಳಿದ್ದ ಎಸ್‌.ಆರ್.ವಿಶ್ವನಾಥ್ ವಾಪಸ್‌ ಬಂದು ವರದಿ ಒಪ್ಪಿಸುತ್ತಿದ್ದಂತೆಯೇ ಯಡಿಯೂರಪ್ಪ ಮುಖ ಅರಳಿತು. ನಗುಮೊಗದೊಂದಿಗೆ ಕ್ಯಾಮೆರಾಕ್ಕೆ ಫೋಸ್‌ ಕೊಟ್ಟು, ಮಾಧ್ಯಮದವರ ಜೊತೆ ಹರಟೆ ಹೊಡೆದ್ರು. ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್‌ಗೆ ಬೆಂಬಲ ನೀಡಿಲ್ಲ ಅಂತ ರಾಮಲಿಂಗಾ ರೆಡ್ಡಿ ಅವರು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಯಾರೂ ಕೂಡ ರಾಜೀನಾಮೆ ವಾಪಸ್ ಪಡೆಯಲ್ಲ ಅಂತಲೂ ಹೇಳಿದ್ದಾರಂತೆ.

ಶಾಸಕರೊಂದಿಗಿನ ಚರ್ಚೆ ಬಳಿಕ ಮಾತನಾಡಿದ ಯಡಿಯೂರಪ್ಪ, ಮಂಗಳವಾರ ಸುಪ್ರೀಂಕೋರ್ಟ್ ತೀರ್ಪು ನೋಡಿಕೊಂಡು ಮುಂದೆ ಹೆಜ್ಜೆ ಇಡೋದಾಗಿ ಹೇಳಿದರು. ರಾಮಲಿಂಗಾ ರೆಡ್ಡಿ ಸೇರಿದಂತೆ ಒಟ್ಟು 18 ಶಾಸಕರ ಬೆಂಬಲ ಸರ್ಕಾರಕ್ಕೆ ಇಲ್ಲ. ಕುಮಾರಸ್ವಾಮಿ ಬಹುಮತ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಮನವೊಲಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ ಬಿಎಸ್‌ವೈ, ಈಗಾಗಲೇ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಹೀಗಾಗಿ, ಅವರು ಈ ಹಂತದಲ್ಲಿ ಹಿಂದೆ ಸರಿಯಲ್ಲ ಎಂಬ ವಿಶ್ವಾಸ ಇದೆ. ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಹೋಗೋದು ಒಳ್ಳೆಯದು ಎಂದರು.

ರಿವರ್ಸ್ ಆಪರೇಷನ್ ಸುದ್ದಿ ಹರಿದಾಡ್ತಿದ್ದಂತೆ ರೆಸಾರ್ಟ್‌ನಲ್ಲಿರುವ ಬಿಜೆಪಿ ಶಾಸಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ನಿರಂಜನ್ ಮೂರ್ತಿ, ರಾಜೂ ಗೌಡ, ಗೂಳಿಹಟ್ಟಿ ಶೇಖರ್, ಸೋಮನಗೌಡ ಪಾಟೀಲ್ ಸಾಸನೂರ, ಎಂ.ಎಸ್.ಸೋಮಲಿಂಗಪ್ಪ, ಪೂರ್ಣಿಮಾ ಶ್ರೀನಿವಾಸ್, ಬೆಳ್ಳಿ ಪ್ರಕಾಶ್, ಬಸವರಾಜ್ ದಡೇಸೂಗೂರ್ ಮಾತನಾಡಿ, ನಾವ್ಯಾರೂ ಬಿಜೆಪಿ ಬಿಟ್ಟು ಹೋಗಲ್ಲ ಎಂದು ಹೇಳುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದರು.

ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಡಾಲರ್ಸ್‌ ಕಾಲೋನಿ ನಿವಾಸಕ್ಕೆ ಯಡಿಯೂರಪ್ಪ ವಾಪಸ್‌ ಆದ್ರು. ಇದಾದ ಕೆಲ ಹೊತ್ತಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ರೆಸಾರ್ಟ್‌ಗೆ ಆಗಮಿಸಿದರು. ಮಧ್ಯಾಹ್ನದ ಭರ್ಜರಿ ಊಟ ಮಾಡಿ ನಿದ್ದೆಯಲ್ಲಿದ್ದ ಶಾಸಕರು ತಡಬಡಾಯಿಸಿಕೊಂಡು ಎದ್ದು ಸದಾನಂದಗೌಡರ ಭೇಟಿಗೆ ರೆಡೆಯಾದರು. ಸೋಮವಾರದ ನಂತರ ಕಾರ್ಯತಂತ್ರದ ಕುರಿತು ಚರ್ಚೆಯಾಯ್ತು. ಕೆಲವೇ ದಿನಗಳಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತೆ. ಕಾಂಗ್ರೆಸ್, ಜೆಡಿಎಸ್​ನ್ನು ಯಾರೇ ಸಂಪರ್ಕಿಸಿದರೂ ಕೂಡಲೆ ತಿಳಿಸಿ ಅಂತ ಸೂಚಿಸಿದರು ಎಂದು ತಿಳಿದುಬಂದಿದೆ.

Recommended For You

About the Author: Dayakar

Leave a Reply

Your email address will not be published. Required fields are marked *