ಹೀನಾಯ ಸೋಲಿನ ಬಳಿಕ ಎಚ್ಚೆತ್ತ ಕಾಂಗ್ರೆಸ್‌ ಹೈಕಮಾಂಡ್‌

ಬೆಂಗಳೂರು: ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್‌ ಎಚ್ಚೆತ್ತುಕೊಂಡಿದೆ. ರಾಜ್ಯದಲ್ಲಿ ಮತ್ತೆ ಪಕ್ಷ ಬಲಪಡಿಸಲು ಇಡೀ ಕೆಪಿಸಿಸಿಯನ್ನೇ ವಿಸರ್ಜಿಸಿದೆ. ದೆಹಲಿಯಲ್ಲಿ ರಾಹುಲ್‌ – ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಬಳಿಕ ಕಾಂಗ್ರೆಸ್‌ ಎಚ್ಚೆತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯ ಎರಡು ದಿನದಲ್ಲೇ ಹಲವು ರಾಜ್ಯಗಳ ಕಾಂಗ್ರೆಸ್ ಘಟಕ ವಿಸರ್ಜಿಸಿರುವ ಮುನ್ಸೂಚನೆ ನೀಡಿತ್ತು. ಅದರಂತೆ ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವಿಸರ್ಜಿಸಿ, ರಾಜ್ಯದ ಕೈ ನಾಯಕರಿಗೆ ಬಿಗ್‌ ಶಾಕ್‌ ಕೊಟ್ಟಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಮತ್ತು ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರ ಸ್ಥಾನಗಳಿಗೆ ಮಾತ್ರ ಯಾವುದೇ ಧಕ್ಕೆ ಇಲ್ಲ. ಇವರೆಡೂ ಸ್ಥಾನ ಹೊರತುಪಡಿಸಿ ಉಳಿದ ಪದಾಧಿಕಾರಿಗಳ ಒಳಗೊಂಡ ಎಲ್ಲಾ ಸಮಿತಿ ವಿಸರ್ಜಿಸಲಾಗಿದೆ.

ಹೈಕಮಾಂಡ್‌ ಆದೇಶ ಹೊರಡಿಸಿದ ತಕ್ಷಣದಿಂದಲೇ ಪದಾಧಿಕಾರಿಗಳ ಅವಧಿ ಅಂತ್ಯವಾಗಿದೆ. 310 ಪದಾಧಿಕಾರಿಗಳಿಗೆ ಕೊಕ್‌ ನೀಡಲಾಗಿದ್ದು, ಈಗ ಕೇವಲ 170 ಪದಾಧಿಕಾರಿಗಳ ಬದಲಾವಣೆ ಮಾಡಲಾಗ್ತಿದೆ. ಮುಂದೆ ಹಂತ ಹಂತವಾಗಿ ಎಲ್ಲಾ ಪದಾಧಿಕಾರಿಗಳ ಬದಲಾವಣೆಗೆ ಚಿಂತಿಸಲಾಗಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ತಳಮಟ್ಟದಿಂದ ಪಕ್ಷ ಸಂಘಟಿಸುವ ದೃಷ್ಟಿಯಿಂದಾಗಿ ಕಾಂಗ್ರೆಸ್‌ ಹೈಕಮಾಂಡ್‌ ಈ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಖಾಲಿ ಸ್ಥಾನಗಳಿಗೆ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ದಕ್ಷತೆಯಿಂದ ಕೆಲಸ ನಿರ್ವಹಿಸುವವರಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ.

ಹೈಕಮಾಂಡ್‌ ನಿರ್ಧಾರದಿಂದಾಗಿ ಹಲವು ವರ್ಷಗಳಿಂದ ಬೇರು ಬಿಟ್ಟಿದ್ದ ಹಲವು ಪದಾಧಿಕಾರಿಗಳು ಹುದ್ದೆ ಕಳೆದುಕೊಳ್ಳಲಿದ್ದಾರೆ. ಬಿ.ಎಲ್.ಶಂಕರ್, ವಿ.ಆರ್.ಸುದರ್ಶನ್, ರಾಣಿ ಸತೀಶ್, ಭೋಸರಾಜು, ವಿ.ವೈ.ಘೋರ್ಪಡೆ, ಡಿ.ಆರ್.ಪಾಟೀಲ್, ಪ್ರೊ.ರಾಧಾಕೃಷ್ಣ, ರಾಮಲಿಂಗಾ ರೆಡ್ಡಿ, ಹೆಚ್.ಕೆ.ಪಾಟೀಲ್, ಮೋಟಮ್ಮ, ಪ್ರೊ.ಬಿ.ಕೆ.ಚಂದ್ರಶೇಖರ್, ಗೋವಿಂದರಾಜ್, ಎಲ್.ಹನುಮಂತಯ್ಯ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಕೆಪಿಸಿಸಿ ವಿಸರ್ಜನೆ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಮಾತುಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಕೇಳಿಬರ್ತಿವೆ. ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ ಸಿದ್ದು, ಚುನಾವಣೆ ಸೋಲಿನ ವಾಸ್ತವಾಂಶ ಬಿಚ್ಚಿಟ್ಟರು. ಕೆಲ ನಾಯಕರು ಸ್ಪಂದಿಸದ ಕಾರಣ ಪಕ್ಷಕ್ಕೆ ಸೋಲಾಯ್ತು.

ಹೀಗಾಗಿ, ಇಡೀ ಕೆಪಿಸಿಸಿಯನ್ನೇ ವಿಸರ್ಜಿಸಿ, ಹೊಸ ಸಮಿತಿ ರಚಿಸಿದರೆ ಮುಂದೆ ರಾಜ್ಯದಲ್ಲಿ ಸದೃಢವಾಗಿ ಪಕ್ಷ ಕಟ್ಟಬಹುದು ಎಂಬ ಸಲಹೆ ಮುಂದಿಟ್ಟರು. ಸಿದ್ದು ಸಲಹೆಗೆ ತಲೆದೂಗಿದ ರಾಹುಲ್‌, ತಕ್ಷಣ ಕೆಪಿಸಿಸಿ ವಿಸರ್ಜಿಸುವಂತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ಗೆ ಸೂಚಿಸಿದರು ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಪ್ಲಾನ್ ಹಿಂದೆ ಮೂಲ ಕಾಂಗ್ರೆಸ್ಸಿಗರನ್ನೂ ಹಣಿಯುವ ಉದ್ದೇಶ ಇದ್ದಂತಿದೆ. ಇಡೀ ಕೆಪಿಸಿಸಿ ಕಚೇರಿ ತುಂಬ ಪರಮೇಶ್ವರ್ ಅವಧಿಯಲ್ಲಿನ ಪದಾಧಿಕಾರಿಗಳೇ ತುಂಬಿದ್ದರು. ಜೊತೆಗೆ ಹೆಚ್ಚಿನವರು ವಯಸ್ಸಾದವರಾಗಿದ್ದರಿಂದ ಓಡಾಡಿ ಪಕ್ಷ ಸಂಘಟಿಸುವ ಕೆಲಸವನ್ನೂ ಮಾಡ್ತಿರಲಿಲ್ಲವೆಂಬ ಆರೋಪವಿದೆ.

ಹೀಗಾಗಿ, ರಾಹುಲ್ ಬಳಿ ಕೆಪಿಸಿಸಿ ವಿಸರ್ಜನೆಗೆ ಸಲಹೆ ಮುಂದಿಟ್ಟರು ಅಂತ ಹೇಳಲಾಗ್ತಿದೆ. ಒಂದೆಡೆ ಮೂಲ ಕಾಂಗ್ರೆಸ್ಸಿಗರನ್ನು ಹಣಿಯುವುದು, ಮತ್ತೊಂದೆಡೆ ಪರಮೇಶ್ವರ್ ಅವರನ್ನ ಮೂಲೆಗುಂಪು ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಶೀಘದಲ್ಲೇ ಕೆಪಿಸಿಸಿಯ ಹೊಸ ಸಮಿತಿ ರಚನೆಯಾಗಲಿದೆ. ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿ, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕಕ್ಕೆ ಚಾಲನೆ ಸಿಗಲಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್‌ ಹಾಗೂ ದಿನೇಶ್ ಗುಂಡೂರಾವ್ ಚರ್ಚಿಸಿ ಸ್ಥಳೀಯ ನಾಯಕರ ಸಲಹೆ ಮೇರೆಗೆ ಆಯ್ಕೆ ಮಾಡಿ, ಹೈಕಮಾಂಡ್‌ಗೆ ಪಟ್ಟಿ ಕಳುಹಿಸಲಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ದಿನಕ್ಕೊಂದು ಸಮಸ್ಯೆ ಕಂಡುಬರುತ್ತಿದ್ದು, ಮುಂದೆ ಎಷ್ಟು ದಿನ ಸರ್ಕಾರ ಇರುತ್ತೊ ಗೊತ್ತಿಲ್ಲ. ಈಗಾಗಲೇ ಕೆಲವು ನಾಯಕರು ಮಧ್ಯಂತರ ಚುನಾವಣೆ ಬಗ್ಗೆ ಮಾತಾಡ್ತಿದ್ದಾರೆ. ಹೀಗಾಗಿ, ಹೊಸಬರಿಗೆ ಮಣೆ ಹಾಕಿ ರಾಜ್ಯದಾದ್ಯಂತ ಪಕ್ಷ ಬಲಪಡಿಸುವ ಆಲೋಚನೆಯೂ ಕೆಪಿಸಿಸಿ ವಿಸರ್ಜನೆ ಹಿಂದಿರುವುದನ್ನು ತಳ್ಳಿಹಾಕುವಂತಿಲ್ಲ.

Recommended For You

About the Author: TV5 Kannada

Leave a Reply

Your email address will not be published. Required fields are marked *