ಪ್ರಧಾನಿ ಮೋದಿ, ಬಂಗಾಳ ದೀದಿ ಜಗಳ- ಬೀದಿಗೆ ಬಂತು ರಂಪಾಟ, ನಿಲ್ಲುವುದು ಡೌಟ್​​​​​​..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾರ್ನಜಿ ಇವರಬ್ಬರ ಜಗಳ ಈಗ ಬೀದಿರಂಪಾಟ ಆಗಿದೆ. ಒಬ್ಬರಿಗಿಂತ ಒಬ್ಬರು ವ್ಯಾಘ್ರವಾಗ್ತಿದ್ದಾರೆ. ಇದು ಮೋದಿ ಮಾಡಿರುವ ಆರೋಪಕ್ಕೆ ದೀದಿ ಅಸಾಮಾನ್ಯ ಸವಾಲು ಹಾಕಿದ್ದಾರೆ.

ಮೋದಿ – ದೀದಿ ಬೀದಿಜಗಳಕ್ಕೆ ಕೊನೆಯೇ ಇಲ್ಲದಂತಾಗಿದೆ. ಒಂದು ಕಾಲದಲ್ಲಿ ಎನ್‌ಡಿಎ ಕೂಟದ ಜೊತೆ ಕೈಜೋಡಿಸಿ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿಗೆ ಈಗ ಅದೇ ಕೂಟದ ಪ್ರಧಾನಿಯೇ ಟಾರ್ಗೆಟ್.

ಲೋಕಸಭಾ ಚುನಾವಣೆ ಅಖಾಡದಲ್ಲಿ ಅವರ ಟೀಕೆ ಜೋರಾಗಿದೆ. ಗುರುವಾರ ಪಶ್ಚಿಮ ಬಂಗಾಳದ ಬಂಕೂರದಲ್ಲಿ ಱಲಿ ನಡೆಸಿದ ಬೆಂಕಿಚೆಂಡು, ಮೋದಿಗೆ ಅಸಾಮಾನ್ಯ ಸವಾಲು ಹಾಕಿದ್ದಾರೆ.

ಮಮತಾ ಬ್ಯಾನರ್ಜಿ ಸವಾಲು ಹಾಕೋದಕ್ಕೂ ಒಂದು ಕಾರಣ ಇದೆ. ಗುರುವಾರ ಪುರುಲಿಯಾದಲ್ಲಿ ಱಲಿ ಮಾತನಾಡಿರುವ ಮೋದಿ, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕಲ್ಲಿದ್ದಲು ಮಾಫಿಯಾ ಆರೋಪ ಮಾಡಿದ್ದರು. ಪುರುಲಿಯಾದಲ್ಲಿ ಅಧಿಕ ಸಂಪನ್ಮೂಲ ಇದೆ. ಆದರೆ, ಇಲ್ಲಿ ತೃಣಮೂಲ ಮಾಫಿಯಾ ರಾಜ್‌ ಹೇಗೆ ಕಲ್ಲಿದ್ದಲು ಮಾಫಿಯಾ ಮಾಡುತ್ತಿದೆ. ತೃಣಮೂಲ ನಾಯಕರು ಹಣ ಗಳಿಸುತ್ತಿದ್ದರೆ, ಕಾರ್ಮಿಕರು ಕೂಲಿ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಯಾವಾಗ ಮೋದಿ ತವರಿಗೆ ಬಂದು ತಮ್ಮ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರೂ ಆವಾಗ ದೀದಿ ರೊಚ್ಚಿಗೆದಿದ್ದಾರೆ. ಅತ್ತ ಬಂಕೂರಿನಲ್ಲಿ ಪ್ರಚಾರ ಮಾಡುತ್ತಿದ್ದ ಮಮತಾ ರುದ್ರಾವತಾರ ತಾಳಿದ್ದಾರೆ. ಪ್ರಧಾನಿಗೆ ಬಹಿರಂಗವಾಗಿಯೇ ಅಸಾಮಾನ್ಯ ಸವಾಲು ಹಾಕಿದ್ದಾರೆ. ಟಿಎಂಸಿಯ ಒಬ್ಬನೇ ಒಬ್ಬ ಅಭ್ಯರ್ಥಿ ವಿರುದ್ಧ ಕಲ್ಲಿದ್ದಲು ಮಾಫಿಯಾ ಆರೋಪ ಸಾಬೀತು ಮಾಡಿದರೆ, ನಾನು ಇಡೀ ಬಂಗಾಳದ ಎಲ್ಲ 42 ಕ್ಷೇತ್ರಗಳಿಂದಲೇ ಅಭ್ಯರ್ಥಿಗಳನ್ನ ಹಿಂತೆಗೆದುಕೊಳ್ಳುತ್ತೇನೆ ಆರೋಪ ಸಾಬೀತುಪಡಿಸಲು ಮೋದಿ ಸಿದ್ದವಿದ್ದಾರಾ(?) ಅಂತ ಸವಾಲು ಹಾಕಿದ್ದಾರೆ.

ಅಷ್ಟೇಅಲ್ಲ, ಮೋದಿಗೆ ಮತ್ತೊಂದು ಚಾಲೆಂಜ್ ಹಾಕಿದ್ದಾರೆ. ಆರೋಪ ಸಾಬೀತು ಮಾಡುವಲ್ಲಿ ವಿಫಲವಾದರೆ, ನಮ್ಮ ಮುಂದೆ ನೀವು 100 ಬಸ್ಕಿ ಹೊಡೆಯಬೇಕು ಅಂತ ಸವಾಲು ಹಾಕಿದ್ದಾರೆ. ಹಾಗೆಯೇ ಮೋದಿಗೆ ಎಚ್ಚರಿಕೆ ಕೊಟ್ಟಿರುವ ಅವರು, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರು ಕಲ್ಲಿದ್ದಲು ಮಾಫಿಯಾದಲ್ಲಿ ಭಾಗಿ ಆಗಿರೋ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ. ನನ್ನ ಬಳಿ ಪೆನ್‌ಡ್ರೈವ್‌ ಇದೆ. ನಾನು ಅದನ್ನ ಬಹಿರಂಗ ಮಾಡಿದರೆ, ನಿಮ್ಮ ಕಲ್ಲಿದ್ದಲು ಮಾಫಿಯಾ ಹಾಗೂ ಗೋವು ಕಳ್ಳಸಾಗಣೆ ಬಯಲಿಗೆ ಬರಲಿದೆ ಎಂದು ದೀದಿ ಪ್ರಧಾನಿ ಮೋದಿ ವಿರುದ್ಧ ಗುಡುಗಿದ್ದಾರೆ.

ಈ ನಡುವೆ, ಇವರಿಬ್ಬರ ನಡುವೆ ಪ್ರಜಾಪ್ರಭುತ್ವದ ಹೊಡೆತದ ವಿಚಾರವೂ ಬಂದು ಹೋಗಿದೆ. ಇದೇ ಪುರುಲಿಯಾ ಱಲಿಯಲ್ಲಿ ಮಾತನಾಡಿದ ಪ್ರಧಾನಿ, ದೀದಿ ಟೀಕೆಗೆ ತಿರುಗೇಟು ಕೊಟ್ಟಿದ್ದಾರೆ. ದೀದಿ ಹೊಡೆದರೆ ನನಗದು ಆಶೀರ್ವಾದ. ಅದನ್ನ ನಾನು ಸ್ವೀಕರಿಸುತ್ತೇನೆ. ಆದರೆ, ಅದಕ್ಕೂ ಮೊದಲು ನಿಮಗೊಂದು ಮಾತು ಹೇಳುತ್ತೇನೆ. ಚಿಟ್‌ಫಂಡ್‌ ಮೂಲಕ ಬಡವರ ಹಣ ಲೂಟಿ ಮಾಡಿದ ನಿಮ್ಮ ಶಾಸಕರು ಹಾಗೂ ಸಚಿವರಿಗೆ ಹೊಡೆಯುವ ಧೈರ್ಯ ತೊರಿಸಿದರೆ, ನೀವು ಹೆದರಬೇಕಿಲ್ಲ ಎಂದು ಅವರು ಕುಟುಕಿದ್ದಾರೆ.

ಆದರೆ, ಮಮತಾ ಬ್ಯಾನರ್ಜಿ ನಾನು ಆಗಂತ ಹೇಳಿಯೇ ಇಲ್ಲ ಅಂತಿದ್ದಾರೆ. ನಾನೇಕೆ ಪ್ರಧಾನಿಗೆ ಹೊಡೆಯಲಿ(?) ನಾನು ಆ ರೀತಿಯ ವ್ಯಕ್ತಿ ಅಲ್ಲ. ಪ್ರಜಾಪ್ರಭುತ್ವದ ಹೊಡೆತ ಬೀಳಬೇಕು ಅಂತ ಹೇಳಿದ್ದೆ. ಮೋದಿ ವಿರುದ್ಧ ಜನರು ಮತ ಚಲಾಯಿಸುವ ಮೂಲಕ ಜನಾದೇಶ ನೀಡಬೇಕು ಎಂಬುದು ಅದರ ಅರ್ಥ. ಮೋದಿ ಮೊದಲು ಭಾಷೆ ಅರ್ಥ ಮಾಡಿಕೊಳ್ಳೋದು ಕಲಿಯಲಿ ಎಂದು ಅವರು ಪ್ರತ್ಯುತ್ತರ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಇನ್ನೂ 2 ಹಂತದ ಮತದಾನ ಬಾಕಿ ಇದೆ. ಭಾನುವಾರ 6ನೇ ಹಂತದ ಮತದಾನ ನಡೆಯಲಿದೆ. ಮೇ 19ರಂದು ಕೊನೆ ಹಂತದ ವೋಟಿಂಗ್‌ ನಡೆಯಲಿದೆ. ಆದರೆ, ಚುನಾವಣೆಗೆ ತೆರೆ ಬಿದ್ದರೂ ಮೋದಿ – ದೀದಿ ವಾಕ್ಸಮರಕ್ಕೆ ಫುಲ್‌ ಸ್ಟಾಪ್​ ಬೀಳೋ ಲಕ್ಷಣಗಳು ಕಾಣಿಸುತ್ತಿಲ್ಲ.

Recommended For You

About the Author: TV5 Kannada

Leave a Reply

Your email address will not be published. Required fields are marked *