ಶ್ರೀಲಂಕಾ ದಾಳಿ ಹಿಂದಿನ ಕಾರಣ ಕೇಳಿದರೇ ಒಂದು ಕ್ಷಣ ಬೆಚ್ಚಿ ಬೀಳುತ್ತೀರಿ..!

ಶ್ರೀಲಂಕಾ, ಕೊಲೊಂಬೊ: ಏಪ್ರಿಲ್ 21ರಂದು ಚರ್ಚ್‌, ಹೋಟೆಲ್‌ ಸೇರಿದಂತೆ ಹಲವೆಡೆ ನಡೆದ ಸರಣಿ ಬಾಂಬ್‌ ದಾಳಿಯ ಹಿಂದಿನ ಕಾರಣವನ್ನು ಪತ್ತೆ ಹಚ್ಚುವಲ್ಲಿ ಶ್ರೀಲಂಕಾ ಸರ್ಕಾರದ ತನಿಖಾ ಸಂಸ್ಥೆಗಳು ಯಶಸ್ವಿಯಾಗಿವೆ. ಮಾರ್ಚ್ 15, 2019ರಂದು ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ಗುಂಡಿನ ದಾಳಿಗೆ ಪ್ರತಿಕಾರವಾಗಿ ಶ್ರೀಲಂಕಾದಲ್ಲಿ ಚರ್ಚ್​ಗಳ ಮೇಲೆ ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ರಾಜ್ಯ ಸಚಿವರು ಬಹಿರಂಗಪಡಿಸಿದ್ದಾರೆ.

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನ ಮಸೀದಿಗಳಲ್ಲಿ ವ್ಯಕ್ತಿಯೊಬ್ಬನಿಂದ ನಡೆದಿದ್ದ ಗುಂಡಿನ ದಾಳಿಗೆ ಪ್ರತಿಕಾರವಾಗಿ  ಏಪ್ರಿಲ್21 (ಭಾನುವಾರ)ದಂದು ಶ್ರೀಲಂಕಾ ರಾಜಧಾನಿ ಕೊಲಂಬೊದ ಚರ್ಚ್‌, ಹೋಟೆಲ್​​ಗಳನ್ನು ಗುರಿಯಾಗಿಸಿಕೊಂಡು ಸರಣಿ ಬಾಂಬ್‌ ದಾಳಿ ನಡೆಸಲಾಗಿದೆ ಎಂದು ನಮಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ರುವಾನ್‌ ವಿಜೇವರ್ಧನೆ ಅಲ್ಲಿನ ಸಂಸತ್‌ಗೆ ತಿಳಿಸಿದ್ದಾರೆ.

ಮಾರ್ಚ್‌ 15. 2019ರಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ನ್ಯೂಜಿಲೆಂಡ್‌ನ ಕ್ರೈಸ್ಟ್‌ ಚರ್ಚ್‌ನ ಮಸೀದಿಗಳಿಗೆ ನುಗ್ಗಿ ಪ್ರಾರ್ಥನಾ ನಿರತ ಮುಸ್ಲಿಮರ ಮೇಲೆ ಏಕಾಏಕಿ ಗುಂಡಿನ ಮಳೆಗರೆದಿದ್ದ. ಆ ದುರಂತದಲ್ಲಿ ಸುಮಾರು 50 ಮಂದಿ ಹತರಾಗಿದ್ದರು. ಸಾಲದಕ್ಕೆ ಆರೋಪಿಯು ತನ್ನ ಕೃತ್ಯವನ್ನು ಫೇಸ್‌ಬುಕ್‌ನಲ್ಲಿ ಲೈವ್‌ ಮಾಡಿ ವಿಕೃತಿ ಮೆರೆದಿದ್ದ.

ಭಾನುವಾರ ನಡೆದ ಘಟನೆಯಿಂದ ಆತಂಕಗೊಂಡಿರುವ ಶ್ರೀಲಂಕಾದಲ್ಲಿ ಶೋಕವೂ ಮನೆ ಮಾಡಿದೆ. ಮಂಗಳವಾರ ಬೆಳಗ್ಗೆ 8.30ರಿಂದ ಮೂರು ನಿಮಿಷಗಳ ಕಾಲ ದೇಶಾದ್ಯಂತ ಮೌನಾಚರಣೆ ಮಾಡಲಾಯಿತು. ಇಡೀ ದೇಶ ಮೂರು ನಿಮಿಷಗಳ ಕಾಲ ಸ್ತಬ್ಧವಾಯಿತು. ಈ ಮೂಲಕ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಭಾನುವಾರ ಬೆಳಗ್ಗೆ 8.30ಕ್ಕೆ ಸರಿಯಾಗಿ ಶ್ರೀಲಂಕಾದಲ್ಲಿ ಮೊದಲ ಬಾಂಬ್‌ ಸ್ಫೋಟಗೊಂಡಿತ್ತು. ಅದೇ ಹೊತ್ತಿಗೆ ಸರಿಯಾಗಿ ದೇಶದಲ್ಲಿ ಮೌನಾಚರಣೆ ಮಾಡಲಾಯಿತು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.