ಬೆಳಗಾವಿಯ ಕೈ ನಾಯಕರ ಕಿತ್ತಾಟದಿಂದ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ.?

ಬೆಳಗಾವಿ ಕಾಂಗ್ರೆಸ್ ನಾಯಕರ ಕಿತ್ತಾಟ ಪ್ರಕರಣ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಶಮನಮಾಡುವ ಪ್ರಯತ್ನಗಳು ವಿಫಲವಾಗುತ್ತಿವೆ. ಸ್ಥಳೀಯ ಮಟ್ಟದ ರಾಜಕಾರಣದ ಸಂಕೋಲೆ ಸಚಿವ ಡಿಕೆಶಿ ಕುತ್ತಿಗೆಗೂ ಸುತ್ತಿಕೊಳ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದ್ರೆ ಸಮ್ಮಿಶ್ರ ಸರ್ಕಾರಕ್ಕೂ ಬೀಳಲಿದೆ ಭಾರಿಹೊಡೆತ. ಜಾರಕಿಹೊಳಿ ಬ್ರದರ್ಸ್ ರೊಚ್ಚಿಗೆದ್ದಿದ್ದೇಕೆ.? ಹೆಬ್ಬಾಳ್ಕರ್ ತಿರುಗಿಬಿದ್ದಿದ್ದೇಕೆ.? ಇದರ ಹಿಂದೆ ಬಿಜೆಪಿ ಕುತಂತ್ರವೇನಾದ್ರೂ ಇದ್ಯಾ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಮುಂದೆ ಓದಿ.
ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಹಿಡಿತಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಬ್ರದರ್ಸ್ ಹಾಗೂ ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ನಡುವಿನ ಕಿತ್ತಾಟ ಮತ್ತಷ್ಟು ವಿಕೋಪಕ್ಕೆಹೋಗಿದೆ. ಶಮನಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿವೆ. ಜಿಲ್ಲೆಯ ಸ್ಥಳೀಯ ರಾಜಕಾರಣದ ಜೊತೆ ಸಚಿವ ಡಿಕೆಶಿ ಹೆಸರು ಕೂಡ ಎಂಟ್ರಿಯಾಗಿದೆ. ಹೀಗಾಗಿ ಜಾರಕಿಹೊಳಿ ಬ್ರದರ್ಸ್, ಹೆಬ್ಬಾಳ್ಕರ್ ನಡುವಿನ ಕಿತ್ತಾಟ ಮತ್ತಷ್ಟು ಉಲ್ಬಣಗೊಂಡಿದೆ. ಸಚಿವ ಡಿಕೆಶಿ ಗೆ ಈಗಾಗಲೇ ರಮೇಶ್ ಜಾರಕಿಹೊಳಿ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ನಿಮ್ಮ ರಾಜಕಾರಣವನ್ನ ಬೆಂಗಳೂರಿನಲ್ಲಿಟ್ಟುಕೊಳ್ಳಿ, ಅದನ್ನ ಬೆಳಗಾವಿಗೆ ತರಬೇಡಿ ಅಂತ ಸವಾಲೆಸೆದಿದ್ದಾರೆ.
ಸತೀಶ್, ರಮೇಶ್ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ನಡುವಿನ ಕಿತ್ತಾಟ ಮತ್ತೆ ಹೈಕಮಾಂಡ್ ಅಂಗಳಕ್ಕೆ ಕಾಲಿಟ್ಟಿದೆ. ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜೊತೆ ಅಹ್ಮದ್ ಪಟೇಲ್ ರನ್ನ ಭೇಟಿ ಮಾಡಿರುವ ಡಿಕೆಶಿ ಬೆಳಗಾವಿ ರಾಜಕಾರಣದ ಇಂಚಿಂಚೂ ಮಾಹಿತಿಯನ್ನ ಅವರಿಗೆ ನೀಡಿದ್ದಾರೆ. ಜಾರಕಿಹೊಳಿಬ್ರದರ್ಸ್ ಏನೇನು ಮಾಡ್ತಿದ್ದಾರೆ. ಸ್ಥಳೀಯ ರಾಜಕಾರಣದಲ್ಲಿ ಅವರ ಹಿಡಿತವೇನು ಅನ್ನೋದ್ರ ಬಗ್ಗೆ ಡಿಟೇಲ್ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಪ್ರಕರಣವನ್ಮ ಶಮನಮಾಡುವ ಭರವಸೆಯನ್ನ ಅಹ್ಮದ್ ಪಟೇಲ್ ಡಿಕೆಶಿಗೆ ನೀಡಿದ್ದಾರೆ ಎನ್ನಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶಿ ಪ್ರವಾಸದಿಂದ ವಾಪಸ್ ಬಂದ ಬಳಿಕ ಇಬ್ಬರನ್ನೂ ಕರೆಸಿ ಸಂಧಾನ ಮಾಡುವ ಪ್ರಯತ್ನವನ್ನೂ ಮಾಡಲಿದ್ದಾರೆ.
ಇನ್ನು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಿತ್ತಾಟವನ್ನ ಸೂಕ್ಷ್ಮವಾಗಿ ಬಗೆಹರಿಸಬೇಕಾದ ಅನಿವಾರ್ಯತೆ ಹೈಕಮಾಂಡ್ ಮುಂದಿದೆ. ಒಂದು ಕಡೆ ಹೆಬ್ಬಾಳ್ಕರ್ ಪರವಾಗಿ ಡಿಕೆಶಿ ಮಧ್ಯಪ್ರವೇಶ, ಮತ್ತೊಂದು ಕಡೆ ಜಿಲ್ಲಾ ಮಟ್ಟದಲ್ಲಿ ಜಾರಕಿಹೊಳಿ ಕುಟುಂಬ ಹೊಂದಿರುವ ಅದಿಪತ್ಯ. ಇಲ್ಲಿ ಯಾರನ್ನ ಓಲೈಸಿದ್ರೂ ಮತ್ತೊಂದು ಕಡೆ ಸಂಕಷ್ಟವೇ. ಡಿಕೆಶಿ ಎದುರು ಹಾಕಿಕೊಂಡ್ರೆ ಕಷ್ಡದ ಪರಿಸ್ಥಿತಿಯಲ್ಲಿ ಪಕ್ಷ ಕೈಬಿಟ್ಟರೆ ಕಷ್ಟ ಅನ್ನೋದು ಹೈಕಮಾಂಡ್ ಗೆ ಗೊತ್ತಿದೆ. ಹಾಗೆಯೇ ಜಾರಕಿಹೊಳಿ ಕುಟುಂಬವನ್ನ ಎದುರುಹಾಕಿಕೊಂಡ್ರೆ, ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಲಿದೆ ಅನ್ನೋದು ತಿಳಿದಿದೆ.
ಹೀಗಾಗಿ ಎರಡೂ ಕಡೆ ಬಹಳ ಸೂಕ್ಷ್ಮವಾಗಿ ಬಗೆಹರಿಸುವ ಪ್ರಯತ್ನವನ್ನ ಮಾಡಬೇಕಿದೆ. ಇಲ್ಲವಾದರೆ ಸಮ್ಮಿಶ್ರ ಸರ್ಕಾರ ಹೆಚ್ಚುದಿನ ಉಳಿಯೋದಿಲ್ಲ ಅನ್ನೋದು ಹೈಕಮಾಂಡ್ ನಾಯಕರಿಗೆ ಗೊತ್ತಿಲ್ಲದಿರೋದೇನಲ್ಲ. ಇನ್ನು ಇದೇ ಸಂದರ್ಭವನ್ನ ಬಿಜೆಪಿ ನಾಯಕರು ಉಪಯೋಗಿಸಿಕೊಳ್ಳಲ್ಲ ಅನ್ನೋದು ಏನು ಗ್ಯಾರೆಂಟಿ. ಸೋ ಹೈಕಮಾಂಡ್ ಗೆ ಇದು ಸವಾಲಿನ ಕೆಲಸವಾಗಿದೆ.
ಇನ್ನು ಈ ಪ್ರಕರಣಕ್ಕೆ ಕಾರಣವಾದ್ರೂ ಏನು ಅನ್ನೋ ಗುಮಾನಿಗೆ ಕಾರಣವೂ ಗೊತ್ತಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಲಕನ್ ಜಾರಕಿಹೊಳಿ ಶುಗರ್ ಫ್ಯಾಕ್ಟರಿಯನ್ನ ಪ್ರಾರಂಭಿಸ್ತಿದ್ದಾರಂತೆ. ಇದಕ್ಕೆ ಅಂತ ಹೆಬ್ಬಾಳ್ಕರ್ ವಿವಿಧ ಬ್ಯಾಂಕುಗಳಿಂದ ಸರ್ಕಾರದ ಶೂರಿಟಿ ಮೇಲೆ 90 ಕೋಟ ಸಾಲವನ್ನೂ ಕೊಡಿಸಿದ್ದಾರಂತೆ. ಆದ್ರೆ ಬ್ಯಾಂಕ್ ಗೆ ಸಾಲ ಮರುಪಾವತಿ ಮಾಡುವಂತೆ ಹೇಳಿದ್ದೇ ರಮೇಶ್ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ನಡುವೆ ಮನಸ್ತಾಪಕ್ಕೆ ಕಾರಣ ಅನ್ನೋದು ಸದ್ಯಕ್ಕೆ ಬಹಿರಂಗವಾಗಿರುವ ಅಂಶ.
ಒಟ್ನಲ್ಲಿ ಬೆಳಗಾವಿ ಕಾಂಗ್ರೆಸ್ ರಾಜಕಾರಣದಲ್ಲಿ ಎದ್ದಿರುವ ಅಸಮಾಧಾನ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶಿ ಪ್ರವಾಸದಿಂದ ಬಂದ ನಂತರ ಶಮನಮಾಡುವ ಪ್ರಯತ್ನ ಸಕ್ಸಸ್ ಆಗಬಹುದು. ಇಲ್ಲವೇ ಇದೇ ವಿಕೋಪಕ್ಕೆಹೋಗಿ ಸಮ್ಮಿಶ್ರ ಸರ್ಕಾರಕ್ಕೂ ಕಂಟಕವಾಗಬಹುದು.
ವರದಿ : ಶಿವಕುಮಾರ್ ಜೋಹಳ್ಳಿ, ಪೊಲಿಟಿಕಲ್ ಬ್ಯೂರೋ, ಟಿವಿ5 ಬೆಂಗಳೂರು
- belagavi congress breaking news congress congress high commend congress leader dks Jarkiholi brothers kannada news kannada news today Karnataka Congress karnataka news today karnataka political news karnataka politics lakshmi hebbalkar latest karnataka news ramesh jarki holi Sathish Jarkiholi tv5 kannada tv5 kannada live tv5 live tv5kannada news