ಸರಕಾರ ಬೀಳಿಸೋದೇನು? ಅದಾಗೇ ಬೀಳುತ್ತೆ: ಈಶ್ವರಪ್ಪ

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ಬೀಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುವುದಿಲ್ಲ. ಅದಾಗೇ ಬೀಳುತ್ತೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶುಕ್ರವಾರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಶಾಸಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ನಂಬಿಕೆ ಇಲ್ಲ. ಬಿಜೆಪಿ ಸರ್ಕಾರ ಬೀಳಿಸಲು ಪ್ರಯತ್ನ ಮಾಡಲ್ಲ, ಅದಾಗೇ ಅದು ಬೀಳುತ್ತದೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಒಬ್ಬರಿಗೊಬ್ಬರು ಮುಖ ನೋಡಿಕೊಳ್ಳದ ಸ್ಥಿತಿಯಲ್ಲಿ ಇದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಸಮನ್ವಯವಿಲ್ಲ. ಸಭೆ ನಡೆಸಿದರೆ ಏನು ಪ್ರಯೋಜನ? ಕಾಂಗ್ರೆಸ್ ಮತ್ತು ಜೆಡಿಎಸ್ ಇಬ್ಬರಿಗೂ ಈ ಕೂಸು ಬೇಕಾಗಿಲ್ಲ ಎಂದು ಅವರು ಆರೋಪಿಸಿದರು.
ಫೋನ್ ಕದ್ದಾಲಿಕೆ ಆರೋಪ ಬಂದಿದೆ. ಕೇಂದ್ರ ಸರ್ಕಾರ ಇದರ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಪತ್ರ ಬರೆಯಲಿ. ಇಲ್ಲವೇ, ರಾಜ್ಯ ಸರ್ಕಾರವೇ ಒಂದು ಸಮಿತಿ ನೇಮಿಸಿ ತನಿಖೆ ನಡೆಸಲಿ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಅನ್ನು ಜನರು ತಿರಸ್ಕಾರಿಸಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತೆ ಎಂದು ಈಶ್ವರಪ್ಪ ನುಡಿದರು.