ಕಾಂಗ್ರೆಸ್‌ಗೆ ತಪ್ಪಿನ ಅರಿವು, ಸಂಪುಟದಲ್ಲಿ ಪಕ್ಷದ ಹಿರಿಯ ನಾಯಕರಿಗೆ ಸ್ಥಾನ.?

ವಿಶೇಷ ವರದಿ : ಗುರುಲಿಂಗಸ್ವಾಮಿ ಹೊಳಿಮಠ, ಪೊಲಿಟಿಕಲ್ ಎಡಿಟರ್

ಏನೇ ಆಗಲಿ. ಹೇಗೇ ಆಗಲಿ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡ್ಬೇಕು. ಇದು ಕಾಂಗ್ರೆಸ್ ಪಕ್ಷದ ಒಂದು ಸಾಲಿನ ನಿಲುವಾಗಿತ್ತು. ಅದಕ್ಕಾಗಿ ಕಾಂಗ್ರೆಸ್ ನಾಯಕರು ಎಲ್ಲಾ ರೀತಿಯಿಂದಲೂ ಸಜ್ಜಾಗಿ ನಿಂತ್ರು. ಈ ಸಂದರ್ಭದಲ್ಲಿ ಆಗಿರುವ ಕೆಲ ತಪ್ಪು ನಿರ್ಧಾರಗಳು ಈಗ ಹೈಕಮಾಂಡ್ ಗಮನಕ್ಕೆ ಬಂದಿವೆ. ಹಾಗಾದ್ರೆ ಆ ತಪ್ಪುಗಳು ಯಾವುವು..? ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೇಗೆ ಸಕ್ರೀಯವಾಗಲಿದೆ ಎಂಬುದರ ಮಾಹಿತಿ ಮುಂದೆ ಓದಿ..

ಕಾಂಗ್ರೆಸ್ಪಕ್ಷ ಎಡವಿದ್ದೆಲ್ಲಿ..? ಅದಕ್ಕೆ ಅಸಲಿ ಕಾರಣವಾದ್ರೂ ಏನು?

ಕಳೆದ ಮೇ 15ರಂದು ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಇನ್ನೂ ಹೊರ ಬಂದಿರಲಿಲ್ಲ. ಆಗಲೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಂತೆ ಇತ್ತು. ಸೋಲಿನ ಕಹಿ ಇನ್ನೂ ಮಾಸಿರಲಿಲ್ಲ. ಆಗಲೇ ಕೈ ಮುಖಂಡರು ತಮ್ಮ ಸ್ವಾಭಿಮಾನವನ್ನು ಬದಿಗೊತ್ತಿದ್ರು. ತರಾತುರಿಯಲ್ಲಿ ಪ್ರಮುಖ ನಿರ್ಧಾರ ಮಾಡಿಯೇ ಬಿಟ್ರು. ಅದೇ ದಿನ ಮಧ್ಯಾಹ್ನ ಮಾಧ್ಯಮಗಳಿಗೆ ತಮ್ಮ ನಿರ್ಧಾರ ತಿಳಿಸಿ ಬಿಟ್ರು. ಅದೇನಪಾ ಅಂದ್ರೆ… ನಾವು ಬೇಷರತ್ತಾಗಿ ಜೆಡಿಎಸ್‌ಗೆ ಬೆಂಬಲ ನೀಡ್ತಿವಿ. ಮುಖ್ಯಮಂತ್ರಿ ಹುದ್ದೆಯನ್ನು ಕೂಡ ಜೆಡಿಎಸ್‌ ಪಕ್ಷಕ್ಕೇ ಬಿಟ್ಟು ಕೊಡ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವ ರ್ಘೋಷಿಸಿದರು. ಇದು ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದು, ಈ ತಂತ್ರಗಾರಿಕೆ ಹಿಂದಿನ ದೊಡ್ಡ ಉದ್ದೇಶವಾಗಿತ್ತು.

ಹೈಕಮಾಂಡ್‌ಗೆ ಅರಿವಾಯ್ತು ತನ್ನ ತಪ್ಪು, ರಚನೆಯಾದ ಹೊಸ ರಣತಂತ್ರ

ಸಚಿವ ಸಂಪುಟ ವಿಸ್ತರಣೆ ಆದ ಬಳಿಕ ಕಾಂಗ್ರೆಸ್‌ನಲ್ಲಿ ಹಿರಿಯರು ಬಂಡಾಯದ ಬಾವುಟ ಹಾರಿಸಿದ್ರು. ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಶಾಮನೂರು ಶಿವಶಂಕರಪ್ಪ ತಮ್ಮ ಬೆಂಬಲಿಗ ಶಾಸಕರ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ್ರು. ಸಚಿವ ಸಂಪುಟದಲ್ಲಿ ಸ್ಥಾನ ಪಡೆದವರ ಬಗ್ಗೆ ಅಪಸ್ವರ ಎತ್ತಿದರು. ಹೈಕಮಾಂಡ್‌ ನಿರ್ಧಾರವನ್ನು ಮುಲಾಜಿಲ್ಲದೇ ಪ್ರಶ್ನಿಸಿದ್ರು. ವರಿಷ್ಠರು ಕೈಗೊಂಡ ನಿರ್ಧಾರ ಸರಿ ಇಲ್ಲ. ತಪ್ಪು ಸರಿಪಡಿಸಬೇಕಾಗಿದೆ ಅಂತಾನೂ ಹೇಳಿದ್ರು.

ಬಂಡಾಯದ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದಹಾಗೇ, ಕಾಂಗ್ರೆಸ್‌ ವರಿಷ್ಠರು ಎಚ್ಚೆತ್ತುಕೊಂಡ್ರು. ಎಐಸಿಸಿ ಮತ್ತು ಕೆಪಿಸಿಸಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಪ್ರಮುಖರೆಲ್ಲರೂ ಆಖಾಡಕ್ಕಿಳಿದ್ರು. ಎಂ.ಬಿ.ಪಾಟೀಲ್ ಮತ್ತು ಎಚ್.ಕೆ.ಪಾಟೀಲ್ ಅವರನ್ನು ಸಮಾಧಾನ ಮಾಡಲು ಹರಸಾಹಸ ಮಾಡಿದ್ರು. ಅಷ್ಟರಲ್ಲಿ ಎಂ.ಬಿ.ಪಾಟೀಲ್ ಅವರಿಗೆ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಲಾಯ್ತು. ಆದರೇ ಅದಕ್ಕೆ ಒಪ್ಪದ ಎಂ.ಬಿ.ಪಾಟೀಲ್ ನಾನೇನು ಸೆಕೆಂಡ್ ಲೈನ್‌ ಲೀಡರ್‌ ಆ ಅಂತಾ ಹೇಳಿ ಹೈಕಮಾಂಡ್ಗೆ ಮುಜುಗುರ ಉಂಟು ಮಾಡಿದ್ರು.

ಇಷ್ಟೆಲ್ಲಾ ರಾದ್ದಾಂತ ಆದ ನಂತರ ರಾಹುಲ್ ಗಾಂಧಿ  ನೇರವಾಗಿ ಬಂಡಾಯ ಶಮನಕ್ಕೆ ಮುಂದಾದ್ರು. ಎಂ.ಬಿ.ಪಾಟೀಲ್ ಅವರನ್ನು ಅಹ್ಮದ ಪಟೇಲ್ ಮೂಲಕ ನವದೆಹಲಿಗೆ ಆಹ್ವಾನಿಸಿದರು. ಅವರನ್ನು ಕರೆಸಿಕೊಂಡ ರಾಹುಲ್ ಗಾಂಧಿ ಸದ್ಯಕ್ಕೆ ಸುಮ್ಮನಿರು ಎಂದು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದ್ರು. ಅದೇ ರೀತಿ ಎಚ್.ಕೆ.ಪಾಟೀಲ್ ಅವರನ್ನೂ ಕರೆದು ಸಮಾಧಾನ ಪಡಿಸಿದ್ರು.

ಈ ಸಂದರ್ಭದಲ್ಲಿ ಪಾಟೀಲದ್ವಯರು ರಾಹುಲ್ ಗಾಂಧಿ ಅವರಿಗೆ ಕೆಲ ವಿಷಯಗಳನ್ನು ವಿವರಿಸಿದ್ದಾರೆ. ಸಚಿವ ಸಂಪುಟದಲ್ಲಿ ಜಯಮಾಲಾ, ಶಂಕರ್, ವೆಂಕಟರಮಣಪ್ಪ, ಜಮೀರ್ ಅಹ್ಮದ್ಖಾನ್ ಅವರಿಗೆ ಸಚಿವ ಸ್ಥಾನ ನೀಡುವ ನಿರ್ಧಾರ ಸರಿಯಲ್ಲವೇನೋ ಎಂಬ ಪ್ರಶ್ನೆ ಎತ್ತಿದ್ದಾರೆ. ಈ ಮೂಲಕ ಇದು ತಪ್ಪಾಯಿತೇನೋ ಎಂದು ರಾಹುಲ್ ಗಾಂಧಿ ಗಮನಕ್ಕೂ ತಂದಿದ್ದಾರೆ. ಈ ಮೂಲಕ ಇವರಿಗೆ ಮಂತ್ರಿಸ್ಥಾನ ಕೊಡೋದಕ್ಕಿಂತ ನಿಮಗ ಮಂಡಳಿ ಅಧ್ಯಕ್ಷ ಸ್ಥಾನ ಮತ್ತು ರಾಜ್ಯ ಸಚಿವ ದರ್ಜೆ ನೀಡಿದ್ರೆ ಸಾಕಾಗಿತ್ತು ಎಂಬುದು ರಾಹುಲ್ ಅವರಿಗೆ ತಡವಾಗಿ ಮನವರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ರಾಹುಲ್ ಗಾಂಧಿ ಈ ತಪ್ಪನ್ನು ಸರಿಪಡಿಸಿಕೊಳ್ಳಲು ಈಗ ಮುಂದಾಗಿದ್ದಾರೆ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡಲು ಆದೇಶ ನೀಡುವ ಸಾಧ್ಯತೆ ಹೆಚ್ಚಾಗಿವೆ. ಪ್ರಕೃತಿ ಚಿಕಿತ್ಸೆಯ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಜುಲೈ ಮೊದಲ ವಾರದಲ್ಲಿ ಮತ್ತೊಂದು ಬಾರಿ ಸಂಪುಟ ವಿಸ್ತರಣೆಯಾಗು ಸಾಧ್ಯತೆಗಳು ದಟ್ಟವಾಗಿವೆ.

ಸಂಪುಟ ಸೇರ್ತಾರಾ ಕಾಂಗ್ರೆಸ್‌ ಹಿರಿಯ ಮುಖಂಡರು.? ಯಾರಾರಿಗೆ ಸಿಗುತ್ತೆ ಮಂತ್ರಿ ಭಾಗ್ಯ.?

ಅಂದಹಾಗೇ, ಸಂಪುಟ ಸೇರಲು ಆಸಕ್ತರಾಗಿರುವ ನಾಯಕರ ಪಟ್ಟಿ ದೊಡ್ಡದಿದೆ. ಅವರಲ್ಲಿ ನಾಲ್ವರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚು. ಅದರಲ್ಲಿಯೂ ಜಾತಿ ಮತ್ತು ಪ್ರಾದೇಶಿಕತೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಿಕೆ ಮಾಡಬೇಕು ಎಂಬುದು ರಾಹುಲ್ ಗಾಂಧಿ ಲೆಕ್ಕಾಚಾರವಾಗಿದೆ.

ಮಂತ್ರಿ ಸ್ಥಾನದ ರೇಸ್‌ನಲ್ಲಿ ಉತ್ತರ ಕರ್ನಾಟಕ ಮತ್ತು ಲಿಂಗಾಯತ ಖೋಟಾದಲ್ಲಿ ಎಂ.ಬಿ.ಪಾಟೀಲ್ ಹೆಸರುಗಳು ಮುಂಚೂಣಿಯಲ್ಲಿದೆ. ಅವರ ನಂತರ ಒಕ್ಕಲಿಗ-ರೆಡ್ಡಿ ಕಾಂಬಿನೇಷನ್‌ನಲ್ಲಿ ರಾಮಲಿಂಗಾರೆಡ್ಡಿ ಅಥವಾ ಎಚ್.ಕೆ.ಪಾಟೀಲ್ ಅವರಲ್ಲಿ ಒಬ್ಬರನ್ನು ಮಾತ್ರ ಸಚಿವ ಸ್ಥಾನಕ್ಕೆ ಪರಿಗಣಿಸಬೇಕು. ಎಚ್.ಕೆ.ಪಾಟೀಲ್ ಅವರಿಗೆ ಸಚಿವ ಸ್ಥಾನ ನಿರಾಕರಿಸಲ್ಪಟ್ಟರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವ ಭರವಸೆಯನ್ನು ಹೈಕಮಾಂಡ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕುರುಬ ಸಮುದಾಯದಿಂದ ಉತ್ತರ ಕರ್ನಾಟಕದ ಸಿ.ಎಸ್.ಶಿವಳ್ಳಿ ಅಥವಾ ಎಂ.ಟಿ.ಬಿ.ನಾಗರಾಜ್ ಅವರನ್ನು ನೇಮಕ ಮಾಡಬೇಕೆಂಬ ಲೆಕ್ಕಾಚಾರ ಇದೆ. ಇನ್ನು ದಲಿತ ಎಡ ಸಮುದಾಯದಿಂದ ಆರ್.ಬಿ.ತಿಮ್ಮಾಪೂರ್ ಅವರ ಹೆಸರು ಕೇಳಿ ಬರುತ್ತಿದೆ. ಉತ್ತರ ಕರ್ನಾಟಕದಿಂದ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ, ಲಿಂಗಾಯತ ಗಾಣಿಗ ಸಮುದಾಯದಿಂದ ಮಧ್ಯ ಕರ್ನಾಟಕದ ಸಂಗಮೇಶ್ವರ್ ಅವರನ್ನು ಪರಿಗಣಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇವರೆಲ್ಲರ ಹೆಸರನ್ನು ಮೀರಿ ಆರ್.ರೋಷನ್ ಬೇಗ್‌, ತನ್ವೀರ್ ಸೇಠ್, ಈಶ್ವರ ಖಂಡ್ರೆ, ಶಾಮನೂರು ಶಿವಶಂಕರಪ್ಪ, ಎಚ್.ಎಂ.ರೇವಣ್ಣ ಮುಂತಾದವರ ಹೆಸರುಗಳು ಕೇಳಿ ಬರುತ್ತಿವೆ.

ಮಂತ್ರಿ ಸ್ಥಾನ ಕೊಡೋದು ಸುಲಭ ಆದ್ರೆ, ಖಾತೆ ಹಂಚೋದು ಕಷ್ಟ.!

ಹೌದು. ನಾಲ್ವರಿಗೆ ರಾಜ್ಯಪಾಲರಿಂದ ಪ್ರಮಾಣ ವಚನ ಬೋಧಿಸಿ ಮಂತ್ರಿ ಮಾಡೋದು ಕಾಂಗ್ರೆಸ್‌ಗೆ ದೊಡ್ಡ ಸಾವಾಲು ಅಲ್ಲವೇ ಅಲ್ಲ. ಆದ್ರೆ, ಅವರಿಗೆ ಯಾವ ಖಾತೆಗಳನ್ನು ನೀಡಬೇಕು ಎಂಬುದೇ ದೊಡ್ಡ ತಲೆನೋವು. ಎಂ.ಬಿ.ಪಾಟೀಲ್‌ ಜಲ ಸಂಪನ್ಮೂಲ ಖಾತೆ ಸಚಿವರಾಗಿದ್ದವರು. ಈಗ ಆ ಖಾತೆ ಡಿ.ಕೆ.ಶಿವಕುಮಾರ್ ಬಳಿ ಇದೆ. ಅವರು ಆ ಖಾತೆ ಬಿಟ್ಟು ಕೊಡ್ತಾರಾ.? ಎಂಬುದೇ ಪ್ರಶ್ನೆ.

ಇನ್ನೂ ರಾಜಶೇಖರ್ ಪಾಟೀಲ್‌ಗೆ ಬೇಡವಾದ ಮುಜರಾಯಿ ಖಾತೆ ಸಚಿವರಾಗಲು ಎಂ.ಬಿ.ಪಾಟೀಲ್ ಒಪ್ಪಿಕೊಳ್ಳೋದೇ ಇಲ್ಲ. ಎಚ್.ಕೆ.ಪಾಟೀಲ್‌  ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಆ ಖಾತೆಯನ್ನು ಕೃಷ್ಣ ಭೈರೇಗೌಡ ತ್ಯಾಗ ಮಾಡ್ತಾರಾ? ರಾಮಲಿಂಗಾರೆಡ್ಡಿಗೆ ನೀಡಲು ದೊಡ್ಡ ಖಾತೆಗಳಾದ್ರೂ ಎಲ್ಲಿವೆ? ನಗರಾಭಿವೃದ್ಧಿ ಸಚಿವರಾಗಿದ್ದ ರೋಷನ್ ಬೇಗ್‌ಗೆ ಅವರ ನೆಚ್ಚಿನ ವಕ್ಫ್ ಖಾತೆ, ಹಜ್ ಖಾತೆ ನೀಡ್ತಾರಾ? ಆ ಖಾತೆಗಳನ್ನು ಜಮೀರ್ ಬಿಟ್ಟು ಕೊಡಲು ಸಿದ್ಧರಾಗ್ತಾರಾ? ಇಂಥ ಗಂಭೀರ ಸಮಸ್ಯೆಗಳು ಸಚಿವ ಸಂಪುಟ ವಿಸ್ತರಣೆ ಕಾರಣವಾಗುತ್ತವೆ. 

ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಒಪ್ಪಿಗೆ.? ಬಜೆಟ್ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ…?

ಕಾಂಗ್ರೆಸ್‌ ಪಕ್ಷದಲ್ಲಿನ ಜಟಾಪಟಿ ಸಂಪುಟ ವಿಸ್ತರಣೆಯಿಂದಲೇ ಮುಗಿಯುತ್ತೆ ಎಂಬ ಭಾವನೆ ಮೂಡಿದೆ. ಹಾಗಾದ್ರೆ ನೂತನ ಸಚಿವರ ಪಟ್ಟಿಯನ್ನು ಸಿದ್ಧ ಮಾಡಿ. ಸಂಪುಟವನ್ನು ವಿಸ್ತರಣೆ ಮಾಡೋಣ ಅಂತಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಇದರಿಂದ ಸರ್ಕಾರಕ್ಕೂ ಅನುಕೂಲ. ಅಧಿವೇಶನದಲ್ಲಿ ತಮ್ಮ ಮೇಲಿನ ಭಾರವೂ ಕಡಿಮೆಯಾಗುತ್ತೆ ಎಂಬುದು ಅವರ ಲೆಕ್ಕಾಚಾರ. ಆದ್ರೆ, ಸಚಿವ ಸ್ಥಾನಕ್ಕೆ ನಾಲ್ವರನ್ನು ಆಯ್ಕೆ ಮಾಡೋದು ಅಷ್ಟು ಸುಲಭವಲ್ಲ. ಸಂಪುಟ ವಿಸ್ತರಣೆಯಾದ ನಂತರವೂ ಯಾರೂ ಅಸಮಾಧಾನಗೊಳ್ಳಬಾರದು. ಪಕ್ಷ ಬಿಟ್ಟು ಹೋಗುವಂತಾಗಬಾರದು. ಆದ್ದರಿಂದ ರಾಹುಲ್ ಒಂದು ಉಪಾಯ ಹುಡುಕಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಆಕಾಂಕ್ಷಿಗಳಿಗೆ ಪ್ರಮುಖ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಿ. ಆಗ ಬಂಡಾಯ ಸಾರುವ ನೈತಿಕತೆಯನ್ನು ಶಾಸಕರು ಕಳೆದುಕೊಳ್ಳುತ್ತಾರೆ. ಆ ನಂತರ ಸಂಪುಟ ವಿಸ್ತರಣೆ ಮಾಡೋಣ ಎಂಬುದು ರಾಹುಲ್ ಗಾಂಧಿ ಪ್ಲಾನ್.

ಆದ್ರೆ, ಈ ತಂತ್ರ ಫಲಿಸೋದು ಅಷ್ಟು ಸುಲಭವಲ್ಲ. ಬಹಳ ಕಷ್ಟ ಎಂಬುದು ಕಾಂಗ್ರೆಸ್ ಮುಖಂಡರಿಗೂ ಗೊತ್ತು. ಏನೇ ಮಾಡಿದ್ರೂ ಪೂರ್ಣ ಪ್ರಮಾಣದ ಬಂಡಾಯ ಶಮನ ಅಸಾಧ್ಯ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಾಗಿ ಸದ್ಯಕ್ಕೆ ಎದುರಾಗಿರೋ ಗಂಡಾಂತರದಿಂದ ಪಾರಾದ್ರೆ ಸಾಕು ಎಂಬ ಮನೋಭಾವ ಕಾಂಗ್ರೆಸ್ ಪಕ್ಷದ್ದು. ಅಂತಿಮವಾಗಿ ಈ ಜಂಟಿ ಸರ್ಕಾರ ಎಲ್ಲಿವರೆಗೆ ಗಟ್ಟಿ ಎಂದು ಕೇಳಿದ್ರೆ, ಉತ್ತರ ಮಾತ್ರ ಯಾರ ಬಳಿಯೂ ಇಲ್ಲ. 

Recommended For You

About the Author: Dayakar

Leave a Reply

Your email address will not be published. Required fields are marked *